Advertisement

ಬೋರ್ಡೋ ಸಿಂಪಡಣೆ ಪರಿಣಾಮಕಾರಿ; ಅಡಿಕೆ ಕೊಳೆರೋಗದ ಸಮಗ್ರ ನಿಯಂತ್ರಣ ಅವಶ್ಯ

02:19 AM Jun 19, 2020 | Sriram |

ಬ್ರಹ್ಮಾವರ: ಕರಾವಳಿ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಪ್ರತಿ ವರ್ಷ ಮಳೆಗಾಲದಲ್ಲಿ ಕೊಳೆರೋಗ ಬಾಧಿಸುತ್ತದೆ. ಇದರಿಂದ ಶೇ.20ರಿಂದ 70ರಷ್ಟು ಬೆಳೆ ಹಾನಿ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಕೊಳೆರೋಗದ ಮೇಲೆ ನಿಯಂತ್ರಣ ಸಾಧಿಸಲು ಔಷಧ ಸಿಂಪಡಣೆಯೊಂದೇ ಸದ್ಯದ ಮಾರ್ಗ.

Advertisement

ಮುಂಗಾರಿನ ಪ್ರಾರಂಭದಲ್ಲೇ ಗೊನೆಗಳಿಗೆ, ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಶೇ.1ರ ಬೋಡೋì ದ್ರಾವಣವನ್ನು ಸೂಕ್ತ ಅಂಟಿನೊಂದಿಗೆ (ರಾಳ) ಬೆರೆಸಿ ಸಿಂಪಡ‌ಣೆ ಮಾಡಿದರೆ ಮುಂದೆ ಬರುವ ಕೊಳೆರೋಗವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಬಹುದು.

ಮಳೆ ಪ್ರಾರಂಭವಾದ ಬಳಿಕ ಅಡಿಕೆ ತೋಟವನ್ನು ಆಗಾಗ ಪರೀಕ್ಷಿಸಿ, ಕೊಳೆ ರೋಗ ತೋಟದಲ್ಲಿ ಕಾಣಿಸಿಕೊಂಡರೆ ಮತ್ತೆ ಬೋರ್ಡೋ ದ್ರಾವಣವನ್ನು ರೋಗದ ಪ್ರಾರಂಭದ ಹಂತದಲ್ಲಿ ಕೊಡಬೇಕು. ರೋಗದ ಉಲ್ಬಣತೆಯನ್ನು ನೋಡಿ ಮುಂದಿನ ಸಿಂಪಡ‌ಣೆ ಬೇಕೋ ಬೇಡವೋ ಎಂದು ನಿರ್ಧರಿಸಬೇಕು.

ಕೊಳೆರೋಗದ ತೀವ್ರತೆಯನ್ನು ಅನುಸರಿಸಿ 30-45 ದಿನಗಳಲ್ಲಿ ಎರಡನೇ ಸಿಂಪಡ‌ಣೆಯನ್ನು ಕೊಡಬೇಕು. ಮಳೆಗಾಲ ಮುಂದುವರಿದರೆ 3ನೇ ಸಿಂಪಡ‌ಣೆ ಅಗತ್ಯ.ಬೇರುಗಳ ಬುಡದಲ್ಲಿ ಪ್ರತಿ ಮರಕ್ಕೆ 1.5-2 ಲೀಟರ್‌ನಂತೆ ಶೇ.1ರ ಬೋರ್ಡೊ ದ್ರಾವಣವನ್ನು ಮರದ ಬುಡದ ಸುತ್ತ ಸಿಂಪಡಿಸಬೇಕು. ಇದರಿಂದ ಬುಡದಲ್ಲಿರುವ ಶಿಲೀಂಧ್ರವನ್ನು ಹಾಗೂ ಶಿಲೀಂದ್ರದ ಬೆಳವಣಿಗೆಯನ್ನು ನಿಯಂತ್ರಿಸಬಹುದು.

ಶೇ.1ರ ಬೋರ್ಡೊ ದ್ರಾವಣ
ತಯಾರಿಸುವ ವಿಧಾನ ಮತ್ತು ಬಳಕೆ
ಒಂದು ಪಾತ್ರೆಯಲ್ಲಿ ಒಂದು ಕಿ.ಗ್ರಾಂ ಮೈಲುತುತ್ತುವನ್ನು 50 ಲೀ. ನೀರಿನಲ್ಲಿ ಚೆನ್ನಾಗಿ ಕರಗಿಸಬೇಕು.ಇನ್ನೊಂದು ಪಾತ್ರೆಯಲ್ಲಿ ಒಂದು ಕಿ.ಗ್ರಾಂ ಸುಣ್ಣವನ್ನು 50 ಲೀ ನೀರಿನಲ್ಲಿ ಚೆನ್ನಾಗಿ ಕರಗಿಸಿ ಬೆರೆಸಬೇಕು ಮತ್ತು ಇದರ ಜತೆಯಲ್ಲಿ 150 ಗ್ರಾಂನಷ್ಟು ಅಂಟನ್ನು ಮಿಶ್ರ ಮಾಡಬೇಕು. ಎರಡು ದ್ರಾವಣವನ್ನು ಒಂದೇ ಸಾರಿ ಮೂರನೇ ಪಾತ್ರೆಗೆ ಸುರಿಯುತ್ತ‌ ಕಲಕಿ ಮಿಶ್ರಣ ಮಾಡಬೇಕು.ಬೋರ್ಡೊ ದ್ರಾವಣದ ರಸಸಾರ (ಪಿ.ಎಚ್‌) 7 ಇರಬೇಕು. ಕಡಿಮೆಯಾಗಿದ್ದರೆ ಸಸ್ಯಗಳಿಗೆ ಹಾನಿಯಾಗುವುದು.

Advertisement

ರಸಸಾರ ಪರೀಕ್ಷಿಸಲು ದ್ರಾವಣದಲ್ಲಿ ಕಬ್ಬಿಣದ ಬ್ಲೇಡನ್ನು ಅಥವಾ ಚಾಕುವನ್ನು ಸುಮಾರು 5-10 ನಿಮಿಷ ಅದ್ದಿ ನೋಡ ಬೇಕು. ರಸಸಾರ ಸರಿ ಇಲ್ಲದಿದ್ದರೆ ಬ್ಲೇಡ್‌ ಅಥವಾ ಚಾಕು ಕೆಂಪು ಮಿಶ್ರಿತ ಕಂದು ಬಣ್ಣವಾಗುವುದು. ರಸಸಾರ ಸರಿಪಡಿಸಿ ತಟಸ್ಥ ರಸಸಾರ (ಪಿ.ಎಚ್‌-7)ಕ್ಕೆ ತರಲು ಸ್ವಲ್ಪ ಸ್ವಲ್ಪ ಸುಣ್ಣದ ದ್ರಾವಣವನ್ನು ಸೇರಿಸಿ ಬೆರೆಸಬೇಕು. ದ್ರಾವಣವನ್ನು ತಯಾರಿಸಿದ ತಕ್ಷಣ ಸಿಂಪಡ‌ಣೆ ಮಾಡುವುದರಿಂದ ದ್ರಾವಣದ ಶಿಲೀಂಧ್ರ ನಾಶಕ ಗುಣ ಅತ್ಯುತ್ತಮವಾಗಿರುತ್ತದೆ. ಅನಿವಾರ್ಯವಾಗಿ ಬಳಸುವುದಾದರೆ ಪ್ರತಿ 100 ಲೀ. ಬೋರ್ಡೋ ದ್ರಾವಣಕ್ಕೆ 100 ಗ್ರಾಂ ಬೆಲ್ಲ ಸೇರಿಸುವುದರಿಂದ ಶಿಲೀಂಧ್ರ ನಾಶಕ ಗುಣವನ್ನು ಒಂದೆರಡು ದಿನಗಳವರೆಗೆ ಉಳಿಸಿಕೊಳ್ಳ ಬಹುದು.

ಸಿಂಪಡ‌ಣೆಯನ್ನು ಮಳೆ ಇಲ್ಲದಾಗ ಕೈಗೊಳ್ಳಬೇಕು. ಉತ್ತಮ ಫಲಿತಾಂಶಕ್ಕೆ ದ್ರಾವಣ ಸಿಂಪಡಿಸಿದ ನಂತರ 4-5 ಗಂಟೆ ಮಳೆ ಬೀಳಬಾರದು.

ತೋಟದಲ್ಲಿ ಅಲ್ಲಲ್ಲಿ (ಎಕರೆಗೆ 3-4 ಕಡೆ) ಅಡಿಕೆ ಸಿಪ್ಪೆ, ಭತ್ತದ ಹೊಟ್ಟು ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಬಳಸಿ ಹೊಗೆ ಹಾಕಬೇಕು. ಇದರಿಂದ ಉಷ್ಣತೆ ಹೆಚ್ಚಿ ಶಿಲೀಂಧ್ರದ ಬೆಳವಣಿಗೆ ಕಡಿಮೆಯಾಗುವುದು.

ಹೆಚ್ಚಿನ ಮಾಹಿತಿಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ಹಿರಿಯ ವಿಜ್ಞಾನಿಗಳನ್ನು(0820-2563923) ಸಂಪರ್ಕಿಸಬಹುದಾಗಿದೆ.

ಎಚ್ಚರಿಕೆ ಕ್ರಮಗಳು
ಕೆಳಗೆ ಬಿದ್ದಿರುವ ರೋಗಪೀಡಿತ ಕಾಯಿ ಹಾಗೂ ಒಣಗಿದ ಸಿಂಗಾರಗಳನ್ನು ಆರಿಸಿ ತೆಗೆದು ಸುಡಬೇಕು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು.ತೋಟಗಳಲ್ಲಿ ಜಾಸ್ತಿ ನೀರು ನಿಲ್ಲದಂತೆ ಬಿಸಿಗಾಲುವೆ ತೆಗೆದು ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು.

ತೋಟಗಳಲ್ಲಿ ಕಳೆ ತೆಗೆದು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗಾಳಿಯಾಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next