ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ಸೈಕಲ್ ಇಟ್ಟುಕೊಂಡು ಪ್ರಯಾಣಿಸುವ ಪ್ರಯೋಗಕ್ಕೆ ಬಿಎಂಟಿಸಿ ಮುಂದಾಗಿದೆ.
ಜನರಿಗೆ ಸೈಕಲ್ ಸಹಿತವಾಗಿ ಬಸ್ಸಿನಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮವು (ಬಿಎಂಟಿಸಿ) ಬಸ್ಸಿನ ಮುಂಭಾಗದಲ್ಲಿ ರ್ಯಾಕ್ ಅಳವಡಿಸಲು ಮುಂದಾಗಿದೆ.
ಬಿಬಿಎಂಪಿಯು ಕೆ.ಆರ್. ಪುರಂ ಟಿನ್ ಫ್ಯಾಕ್ಟರಿ- ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಯಲ್ಲಿ ನಿರ್ಮಿಸಿರುವ ಪ್ರತ್ಯೇಕ ಬಸ್ ಪಥದಲ್ಲಿ ಬೈಸಿಕಲ್ ಪಥ ನಿರ್ಮಿಸಲು ನಗರದ ಭೂಸಾರಿಗೆ ನಿರ್ದೇಶನಾಲಯವು ಚಿಂತಿಸಿದೆ.
ಈ ಹಿನ್ನೆಲೆಯಲ್ಲಿ ಬಿಎಂಟಿಸಿಯು ಮೊದಲಿಗೆ ಆದ್ಯತಾ ಪಥದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಸೈಕಲ್ ರ್ಯಾಕ್ ಅಳವಡಿಸಲು ಚಿಂತನೆ ನಡೆಸಿದೆ.
ಐಟಿ-ಬಿಟಿ ಕಂಪೆನಿಗಳ ಉದ್ಯೋಗಿಗಳು ಮನೆಗಳಿಂದ ಕಚೇರಿಗೆ ತೆರಳಲು ಸೈಕಲ್ ಬಳಸುತ್ತಿದ್ದಾರೆ. ಇನ್ನು ದೂರ ಪ್ರಯಾಣದವರು ಸೈಕಲ್ ಮತ್ತು ಬಸ್ ಪ್ರಯಾಣ ನಡೆಸಬಹುದು. ಬಸ್ ನಿಲ್ದಾಣದವರೆಗೆ ಸೈಕಲಲ್ಲಿ ಬಂದು, ಬಳಿಕ ಬಸ್ಸಿನಲ್ಲಿ ಸೈಕಲ್ ಸಹಿತ ಪ್ರಯಾಣಿಸಿ, ಇಳಿದು ಮತ್ತೆ ಸೈಕಲ್‌ನಲ್ಲಿ ಗಮ್ಯ ತಲುಪಬಹುದು. ಮೊದಲ ಹಂತದಲ್ಲಿ 100 ಬಸ್‌ಗಳಿಗೆ ಸೈಕಲ್ ರ್ಯಾಕ್ ಅಳವಡಿಸಲು ಮುಂದಾಗಿದ್ದು, ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ.