Advertisement

ಬಿಎಂಟಿಸಿ &ಕೆಎಸ್‌ಆರ್‌ಟಿಸಿ; ಬಸ್‌ ಪೂಜೆಗೆ ಕೇವಲ 100 ರೂ.: ಸಿಬಂದಿಗೆ ನಿರಾಸೆ

09:19 PM Oct 03, 2022 | Team Udayavani |

ಬೆಂಗಳೂರು: ಬಸ್‌ಗಳ ಪೂಜೆಗೆ ತಲಾ ನೂರು ರೂ. ನೀಡಿರುವುದು ಸಾರಿಗೆ ಚಾಲನಾ ಸಿಬಂದಿಗೆ ನಿರಾಸೆ ಮೂಡಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಕೆಎಸ್‌ಆರ್‌ಟಿಸಿಯು ಆಯುಧ ಪೂಜೆ ಪ್ರಯುಕ್ತ ನಡೆಸುವ ಬಸ್‌ಗಳ ಪೂಜೆ ಮತ್ತು ಅಲಂಕಾರ ವೆಚ್ಚಕ್ಕೆ ಈ ಬಾರಿಯೂ ಪ್ರತಿ ಬಸ್‌ಗೆ ಕೇವಲ 100 ರೂ. ನೀಡಲಾಗಿದೆ.

Advertisement

ಮಾರುಕಟ್ಟೆಗಳಲ್ಲಿ ಹೂ-ಹಣ್ಣಿನ ಬೆಲೆ ಗಗನಕ್ಕೇರಿದೆ. ಒಂದು ನಿಂಬೆಹಣ್ಣಿನ ಬೆಲೆ 10 ರೂ. ಆಗಿದೆ. ವಾಹನಕ್ಕೆ ಹಾಕುವ ಹೂವಿನ ಹಾರಕ್ಕೆ ಕನಿಷ್ಠ 300-400 ರೂ. ಬೇಕಾಗುತ್ತದೆ. ಬಾಳೆ ಕಂಬ, ಬೂದಗುಂಬಳ ಸೇರಿ ಇತರೆ ಪೂಜೆ ಸಾಮಗ್ರಿಗಳಿಗೆ 200 ರಿಂದ 300 ರೂ. ಖರ್ಚಾಗುತ್ತದೆ. ಬಿಎಂಟಿಸಿ ನೀಡುವ ಬಿಡಿಗಾಸಿಗೆ ಅರ್ಧಮಾರು ಹೂವು ಕೂಡ ಬರುವುದಿಲ್ಲ. ಸಾವಿರಾರು ರೂ. ನೀಡಿ ಎನ್ನುವುದಿಲ್ಲ, ಕನಿಷ್ಠ ಅಲಂಕಾರಕ್ಕಾಗುವಷ್ಟಾದರೂ ಹೆಚ್ಚಳ ಮಾಡಬೇಕು ಎಂದು ಚಾಲಕರೊಬ್ಬರು ಆಗ್ರಹಿಸಿದರು.

ಡಿಪೋಗೆ 10 ಸಾವಿರ: ಕೆಎಸ್‌ಆರ್‌ಟಿಸಿಯಲ್ಲಿಯೂ ತಲಾ ಒಂದು ಬಸ್‌ ಪೂಜೆಗೆ 100 ರೂ.ಗಳಂತೆ ಡಿಪೋಗಳಿಗೆ ಪೂಜೆ ಖರ್ಚಿಗೆ ಹಣವನ್ನು ವರ್ಗಾಯಿಸಲಾಗಿದೆ. 100 ಬಸ್‌ಗಳಿರುವ ಪ್ರತಿ ಡಿಪೋಗೆ 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಡಿಪೋದ ಎಲ್ಲ ವಾಹನಗಳಿಗೂ ಒಟ್ಟಾಗಿ ಪೂಜೆ ಸಲ್ಲಿಸಲಾಗುತ್ತದೆ. ಬೆಂಗಳೂರು ಹೊರತುಪಡಿಸಿ, ಇತರೆ ಭಾಗಗಳಲ್ಲಿ ಹೂವಿನ ದರ ಕಡಿಮೆ ಇದ್ದು, ಡಿಪೋಗೆ ನೀಡುವ 10 ಸಾವಿರ ರೂ. ಸಾಕಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈ ಮಧ್ಯೆ ಬಿಎಂಟಿಸಿ ಚಾಲಕರು ತಮ್ಮ ಬಸ್‌ಗಳನ್ನು ಅದ್ಧೂರಿಯಾಗಿ ಸಿಂಗರಿಸಿದ್ದಾರೆ. ಜಯನಗರ, ಬನಶಂಕರಿ, ರಾಜರಾಜೇಶ್ವರಿ ಡಿಪೋಗಳಲ್ಲಿ ಬಸ್‌ಗಳಿಗೆ ವಿಶೇಷ ಅಲಂಕಾರ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next