Advertisement

ಬಿಎಂಟಿಸಿಗೂ ತಟ್ಟಿದ ಬಂದ್‌ ಬಿಸಿ

09:02 AM Jan 09, 2019 | Team Udayavani |

ಬೆಂಗಳೂರು: ಭಾರತ್‌ ಬಂದ್‌ ಬಿಸಿ ತುಸು ಜೋರಾಗಿ ತಟ್ಟಿದ್ದು ಬಿಎಂಟಿಸಿಗೆ. ಮಂಗಳವಾರ ಎಂದಿನಂತೆ ಬೆಳಗ್ಗೆ ರಸ್ತೆಗಿಳಿದ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ನಂತರ ಬಸ್‌ ಸಂಚಾರಕ್ಕೆ ಬಹುತೇಕ ಬ್ರೇಕ್‌ ಬಿತ್ತು.

Advertisement

ನಗರದ ಐದು ಕಡೆ ಬೆಳಗಿನಜಾವ 5ರಿಂದ 8ಗಂಟೆ ನಡುವೆ ಕಾರ್ಯಾಚರಣೆ ನಡೆಸುತ್ತಿದ್ದ ಬಸ್‌ಗಳ ಕಿಟಕಿ, ಮುಂಭಾಗದ ಗಾಜುಗಳ ಮೇಲೆ ಕಲ್ಲು ತೂರಿದ ಘಟನೆ ನಡೆದಿದ್ದು, ಇದರ ಪರಿಣಾಮ ನಂತರದಲ್ಲಿ ಕಾರ್ಯಾಚರಣೆ ಮಾಡಲಿದ್ದ ಬಸ್‌ಗಳ ಸಂಚಾರದ ಮೇಲಾಯಿತು. ಸಾವಿರಾರು ಬಸ್‌ಗಳ ಪೈಕಿ ಕೆಲವೇ ಕೆಲವು ರಸ್ತೆಗಿಳಿದವು.

ಬೆಳಗಿನಜಾವ 4.45ರ ಸುಮಾರಿಗೆ ಮಲ್ಲೇಶ್ವರ ವೃತ್ತದಲ್ಲಿ, 5ಕ್ಕೆ ಅಲ್ಲಿಂದ ಹತ್ತಿರದಲ್ಲೇ ಇರುವ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ಎರಡು ಬಸ್‌ಗಳ ಮೇಲೆ ಕಲ್ಲು ಎಸೆಯಲಾಗಿದೆ. ಇದರಿಂದ ಮುಂಭಾಗದ ಗಾಜುಗಳು ಪುಡಿಪುಡಿಯಾದವು.

ಅದೇ ರೀತಿ, 5.10ರ ಸುಮಾರಿಗೆ ಮೆಜೆಸ್ಟಿಕ್‌ ಹತ್ತಿರದ ಕೃಷ್ಣ ಫ್ಲೋರ್‌ಮಿಲ್‌, 6 ಗಂಟೆಗೆ ಯಶವಂತಪುರ ಮುಖ್ಯ ರಸ್ತೆ ಬಳಿ ಹಾಗೂ ಚಿನ್ನಸಂದ್ರ ಗೇಟ್‌ ಬಳಿ 8.15ಕ್ಕೆ ಬಸ್‌ ಕಿಟಕಿಗಳನ್ನು ಜಖಂಗೊಳಿಸಲಾಗಿದೆ. ಇದರಿಂದ ಸುಮಾರು 25 ಸಾವಿರ ರೂ.ಗಳಷ್ಟು ಹಾನಿಯಾಗಿದೆ ಎಂದು ಬಿಎಂಟಿಸಿ ಅಂದಾಜಿಸಿದೆ.

ಈ ಮಧ್ಯೆಯೂ ಬಿಎಂಟಿಸಿ ಬಸ್‌ಗಳು “ಪೀಕ್‌ ಅವರ್‌’ನಲ್ಲಿ ಅಂದರೆ ಬೆಳಗ್ಗೆ 10ರವರೆಗೆ ಅಲ್ಲಲ್ಲಿ ಕಾರ್ಯಾಚರಣೆ ನಡೆಸಿದವು. ಸಂಜೆ 4ರ ಸುಮಾರಿಗೆ ಮತ್ತೆ ರಸ್ತೆಗಿಳಿದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಇನ್ನು ಆಟೋ ಚಾಲಕರು ಮತ್ತು ಮಾಲಿಕರ ಸಂಘಟನೆಗಳು ಮುಷ್ಕರಕ್ಕೆ ಕೈಜೋಡಿಸಿದ್ದರೂ ಭಾಗಶಃ ಕಾರ್ಯಾಚರಣೆ ನಡೆಸಿದವು.

Advertisement

ನೈತಿಕ ಬೆಂಬಲ ಸೂಚಿಸಿದ್ದ ಆ್ಯಪ್‌ ಆಧಾರಿತ ಟ್ಯಾಕ್ಸಿಗಳು, ಪ್ರವಾಸಿ ವಾಹನಗಳು, ಮ್ಯಾಕ್ಸಿಕ್ಯಾಬ್‌ಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿಲ್ಲ. ಕೆಲವೆಡೆ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳು ಬಂದ್‌ ಆಗಿರುವುದು ಕಂಡುಬಂತು. 

ಮೆಟ್ರೋ ಸೇವೆ ಮಾಮೂಲು: “ನಮ್ಮ ಮೆಟ್ರೋ’ ಸೇವೆಗೆ ಮುಷ್ಕರದ ಬಿಸಿ ತಟ್ಟಲಿಲ್ಲ. ಎಂದಿನಂತೆ “ಪೀಕ್‌ ಅವರ್‌’ನಲ್ಲಿ ಪ್ರತಿ ನಾಲ್ಕೂವರೆ ನಿಮಿಷಕ್ಕೊಂದು ರೈಲು ಕಾರ್ಯಾಚರಣೆ ಮಾಡಿದರೆ, ಉಳಿದ ಸಮಯದಲ್ಲಿ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ರೈಲುಗಳು ಸಂಚರಿಸಿದವು.

ಮೆಟ್ರೋ ಸೇವೆ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಇಡೀ ದಿನ ಯಾವುದೇ ವ್ಯತ್ಯಯ ಆಗಲಿಲ್ಲ. ಬುಧವಾರ ಕೂಡ ಯಥಾಪ್ರಕಾರ ಸೇವೆ ಇರಲಿದೆ. ಮುಷ್ಕರದಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್‌ ಚವಾಣ್‌ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next