Advertisement

ಉತ್ತರ ಕರ್ನಾಟಕ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧ

11:26 PM Apr 19, 2019 | Lakshmi GovindaRaju |

ಹುಬ್ಬಳ್ಳಿ: “ಕಳೆದ 20-30 ವರ್ಷಗಳಿಂದ ನಮ್ಮ ಕುಟುಂಬಕ್ಕೆ ಉತ್ತರ ಕರ್ನಾಟಕ ವಿರೋಧಿ ಪಟ್ಟ ಕಟ್ಟಲಾಗಿದೆ. ಇಂತಹ ಷಡ್ಯಂತ್ರ-ಹುನ್ನಾರಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಭಾಗದ ಸಮಗ್ರ ಅಭಿವೃದ್ಧಿ ನನ್ನ ಬದ್ಧತೆ. ಇದಕ್ಕಾಗಿ ನನ್ನದೇ ನೀಲನಕ್ಷೆ ಸಿದ್ಧಪಡಿಸಿದ್ದೇನೆ. ಸಮ್ಮಿಶ್ರ ಸರಕಾರದಲ್ಲಿ ಇದರ ಅನುಷ್ಠಾನ ನಮ್ಮ ಮುಂದಿರುವ ಆದ್ಯತೆ..’

Advertisement

ಇದು “ಉದಯವಾಣಿ’ ಜತೆ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಸ್ಪಷ್ಟ ನುಡಿ. ಒಟ್ಟಾರೆ ಅವರು ಹೇಳಿದ್ದು..

– ಉತ್ತರಕ್ಕೆ ನಾನೆಂದೂ ದ್ರೋಹ ಬಗೆಯುವುದಿಲ್ಲ. ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸಬಹುದು. ಆದರೆ, ನನ್ನನ್ನು ಅತಿಯಾಗಿ ಪ್ರೀತಿಸುವ ಅಸಂಖ್ಯಾತ ಮನಸ್ಸುಗಳು ಈ ಭಾಗದಲ್ಲಿವೆ ಎಂಬುದನ್ನು ನಾನು ಸ್ಪಷ್ಟವಾಗಿ ಬಲ್ಲೆ.

– ಒಂದಂತೂ ಸ್ಪಷ್ಟಪಡಿಸುವೆ, ಈ ಭಾಗದ ಜನರ ನಿರೀಕ್ಷೆಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ನಾನು ಉತ್ತರ ಕರ್ನಾಟಕಕ್ಕೆ ಏನೆಲ್ಲಾ ಕೊಡುಗೆ ನೀಡಿದ್ದೇವೆ ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕು. ನಮ್ಮ ಬದ್ಧತೆಗಿಂತ ಅಪಪ್ರಚಾರವನ್ನೇ ಜನ ಹೆಚ್ಚಾಗಿ ನಂಬುತ್ತಾರಲ್ಲ ಎಂದು ಒಮ್ಮೊಮ್ಮೆ ನೋವಾಗುತ್ತದೆ.

– ಕೃಷಿ, ನೀರಾವರಿ, ಉದ್ಯೋಗ ಸೃಷ್ಟಿ, ಆರೋಗ್ಯ, ಶಿಕ್ಷಣ ಇನ್ನಿತರ ವಿಷಯಗಳ ಬಗ್ಗೆ ನೀಲನಕ್ಷೆ ಹೊಂದಲಾಗಿದೆ. ಇದರಲ್ಲಿ ವಿಶೇಷವಾಗಿ ನೀರಾವರಿ ಹಾಗೂ ಕೃಷಿಗೆ ಮೊದಲಾದ್ಯತೆ. ಉತ್ತರದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಅವಕಾಶ ಇದೆ. ಹನಿ, ಹನಿ ನೀರು ಸದ್ಭಳಕೆಯಾಗಬೇಕು, ಹನಿ ನೀರಾವರಿ ಉತ್ತೇಜನಕ್ಕೆ ಶೇ.100ರಷ್ಟು ಸಬ್ಸಿಡಿಯೊಂದಿಗೆ ನೀರಿನ ಸದ್ಬಳಕೆ ಜತೆಗೆ, ಮುಂದಿನ ಒಂದು ವರ್ಷದಲ್ಲಿ ಇದರ ಒಂದಿಷ್ಟು ಲಾಭ ರೈತರಿಗೆ ದೊರೆಯಬೇಕೆಂಬುದು ನನ್ನ ಮಹದಾಸೆ.

Advertisement

– ರಾಜ್ಯದ ಪ್ರತಿಯೊಬ್ಬರಿಗೂ ನದಿಮೂಲದ ಶುದ್ಧ ಕುಡಿಯುವ ನೀರು ನೀಡಬೇಕೆಂಬ ಉದ್ದೇಶದೊಂದಿಗೆ ತೆಲಂಗಾಣ ಮಾದರಿಯಲ್ಲಿ ಜಲಧಾರೆ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆ ಪ್ರಾಯೋಗಿಕ ಅನುಷ್ಠಾನಕ್ಕೆ ಉತ್ತರದ ಎರಡು ಜಿಲ್ಲೆ ಆಯ್ಕೆ ಮಾಡಲಾಗಿದೆ. ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ 1,500 ಕೋಟಿ ರೂ. ವೆಚ್ಚದಲ್ಲಿ “ಜಲಧಾರೆ’ ಅನುಷ್ಠಾನಗೊಳ್ಳಲಿದೆ. ರಾಜ್ಯಾದ್ಯಂತ ಈ ಯೋಜನೆ ಅನುಷ್ಠಾನಕ್ಕೆ ಅಂದಾಜು 60 ಸಾವಿರ ಕೋಟಿ ರೂ. ಬೇಕಾಗುತ್ತವೆ. ಕುಡಿಯುವ ನೀರು ಯೋಜನೆಗೆ ಹಣದ ಕೊರತೆ ಇಲ್ಲವೇ ಇಲ್ಲ.

– ಉತ್ತರ ಕರ್ನಾಟಕದಲ್ಲಿ ಕೃಷಿ, ನೀರಾವರಿಯಷ್ಟೇ ಬಹುದೊಡ್ಡ ಸವಾಲು ಉದ್ಯೋಗ ಸೃಷ್ಟಿಯದ್ದಾಗಿದೆ. ಇದಕ್ಕಾಗಿ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ವಿವಿಧ ಉತ್ಪಾದನಾ ಕ್ಲಸ್ಟರ್‌ಗಳನ್ನು ಘೋಷಿಸಲಾಗಿದ್ದು, ಇದರಲ್ಲಿ ಉ.ಕ.ಕ್ಕೆ ಸಿಂಹಪಾಲು.

– ಬೀದರ ಜಿಲ್ಲೆಯಲ್ಲಿ ಕೃಷಿ ಸಲಕರಣೆಗಳ ಉತ್ಪಾದನೆ, ಕಲಬುರಗಿಯಲ್ಲಿ ಸೋಲಾರ್‌ ಸಲಕರಣೆ, ಕೊಪ್ಪಳದಲ್ಲಿ ಗೊಂಬೆಗಳು, ಬಳ್ಳಾರಿಯಲ್ಲಿ ಗಾರ್ಮೆಂಟ್‌, ಬೆಳಗಾವಿಯಲ್ಲಿ ಆಟೋಮೊಬೈಲ್‌, ಚಿತ್ರದುರ್ಗದಲ್ಲಿ ಎಲ್‌ಇಡಿ ಲೈಟುಗಳ ಉತ್ಪಾದನೆ ಕ್ಲಸ್ಟರ್‌ ಸ್ಥಾಪನೆಯೊಂದಿಗೆ ಉದ್ಯೋಗ ಸೃಷ್ಟಿಸಲಾಗುವುದು. ಇದಕ್ಕಾಗಿ ಸುಮಾರು 43 ಕಾರ್ಪೊರೆಟ್‌ ಕಂಪೆನಿಗಳ ವಿಷನ್‌ ಗ್ರೂಪ್‌ ಕಾರ್ಯನಿರ್ವಹಿಸುತ್ತಿದೆ. 2-3 ವರ್ಷಗಳಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಈ ಕ್ಲಸ್ಟರ್‌ಗಳ ಮೂಲಕ ಸುಮಾರು 10ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವ ವಿಶ್ವಾಸ ನನ್ನದು.

ಕಿಮ್ಸ್‌ ಮೇಲ್ದರ್ಜೆಗೆ ಯೋಜನೆ: ಹುಬ್ಬಳ್ಳಿಯ ಕಿಮ್ಸ್‌ನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಜತೆ ಚರ್ಚಿಸಿದ್ದೇನೆ. ಯೋಜನೆ ಸಿದ್ಧತೆಗೆ ಸೂಚಿಸಿದ್ದೇನೆ. ಬೆಂಗಳೂರಿನ ಯುವ ವೈದ್ಯರ ಸೇವೆ ಇಲ್ಲಿನ ಜನತೆಗೆ ಕಿಮ್ಸ್‌ ಮೂಲಕ ಸಿಗುವಂತೆ ಮಾಡಲು ಜಯದೇವ ಆಸ್ಪತ್ರೆ ಜತೆ ಚರ್ಚಿಸಲಾಗಿದೆ.

ಚುನಾವಣೆ ಮುಗಿದ ಕೂಡಲೇ ಕಿಮ್ಸ್‌ ಮೇಲ್ದರ್ಜೆಗೇರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ. ಈ ಭಾಗದ ಬಡವರಿಗೆ ಕಿಮ್ಸ್‌ ಪ್ರಮುಖ ಆರೋಗ್ಯ ಕೇಂದ್ರವಾಗಿದ್ದು, ಉತ್ತಮ ಸೇವೆ ದೊರೆಯಬೇಕಾಗಿದೆ. ವಿಜಯಪುರ ಹಾಗೂ ಕಲಬುರಗಿಯಲ್ಲೂ ಜಯದೇವ ಆಸ್ಪತ್ರೆ ಶಾಖೆ ಆರಂಭಿಸಲು ಯೋಜಿಸಲಾಗಿದೆ.

ರೈತರ ಸಾಲ ಮನ್ನಾ ವಿಚಾರದಲ್ಲಿ ಈಗಾಗಲೇ 16 ಲಕ್ಷ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಇಷ್ಟಿದ್ದರೂ ಪ್ರಧಾನಿ ಮೋದಿಯವರು ಸಾಲ ಮನ್ನಾ ಬುರುಡೆ ಎಂಬಂತೆ ಹೇಳುವ ಮೂಲಕ ಸುಳ್ಳು ಹೇಳುವುದರಲ್ಲಿ ತಾವು ನಿಸ್ಸೀಮರು ಎಂಬುದನ್ನು ಅವರೇ ತೋರಿಸಿಕೊಂಡಿದ್ದಾರೆ. ಪ್ರಧಾನಿಯವರು ಇಂತಹ ಕೀಳು ಮಟ್ಟದ ಹೇಳಿಕೆಗೆ ಮುಂದಾಗುವುದು ಅವರ ಸ್ಥಾನಕ್ಕೆ ಶೋಭೆ ತರದು ಎಂಬುದು ನನ್ನ ಭಾವನೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next