Advertisement

ಪಂಪ್‌ವೆಲ್‌ನಲ್ಲಿ ಮಹಾವೀರ ವೃತ್ತ-ಕಲಶ ಮರುಸ್ಥಾಪನೆಗೆ ನೀಲನಕ್ಷೆ

11:27 PM Jan 30, 2020 | mahesh |

ಮಹಾನಗರ: ಪಂಪ್‌ವೆಲ್‌ ಮೇಲ್ಸೇತುವೆ ಶುಕ್ರವಾರ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಈ ಹಿಂದೆ ಇದೇ ಜಾಗದಲ್ಲಿದ್ದ, ಮೇಲ್ಸೇತುವೆ ನಿರ್ಮಾಣಕ್ಕೆ ತೆರವುಗೊಳಿಸಲಾಗಿದ್ದ ಕಲಶವನ್ನು ಅಲ್ಲೇ ಪಕ್ಕದಲ್ಲಿ ಮರುಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

Advertisement

ನಗರದ “ಆತ್ಮ’ದಂತೆ ಕಂಗೊಳಿಸುತ್ತಿದ್ದ ಮಹಾವೀರ ವೃತ್ತದಲ್ಲಿನ ಈ ಕಲಶವನ್ನು ಪಂಪ್‌ವೆಲ್‌ ಮೇಲ್ಸೇತುವೆ ಪಕ್ಕದಲ್ಲಿ ಅಂದರೆ ಕಂಕನಾಡಿ ರಸ್ತೆ ಕಡೆಗೆ ತಿರುವು ಪಡೆಯುವ ಜಾಗದಲ್ಲಿ ಪ್ರತ್ಯೇಕ ವೃತ್ತ ಮಾಡಿ ಅಲ್ಲಿ ಕಲಶ ಸ್ಥಾಪನೆ ಮಾಡಲು ಉದ್ದೇಶಿ ಸಲಾಗಿದೆ. ಸುಮಾರು 15 ಲಕ್ಷ ರೂ. ವೆಚ್ಚ ದಲ್ಲಿ ಇಲ್ಲಿ ವೃತ್ತ ಅಭಿವೃದ್ಧಿಗೊಳಿಸಲು ಜೈನ್‌ ಸೊಸೈಟಿಯು ಈಗಾಗಲೇ ನೀಲನಕ್ಷೆ ಸಿದ್ಧಗೊಳಿಸಿದೆ. ಆ ಮೂಲಕ, ಜಿಲ್ಲಾಡಳಿತದ ಪೂರಕ ಕ್ರಮಗಳನ್ನು ನಿರೀಕ್ಷಿಸುತ್ತಿದೆ.

2003ರಲ್ಲಿ ಉದ್ಘಾಟನೆಗೊಂಡ ಮಹಾವೀರ ವೃತ್ತ ಮತ್ತು ಕಲಶವನ್ನು ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ವೇಳೆ ತೆರವುಗೊಳಿಸಲಾಗಿತ್ತು. ಅನಂತರ ಅಲ್ಲೇ ಹತ್ತಿರದಲ್ಲಿ ಕಂಕನಾಡಿ ಪ್ರವೇಶದ ಆರಂಭದಲ್ಲಿ ಇಡಲಾಗಿದೆ. ಈಗ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಕಲಶವನ್ನು ಅಲ್ಲೇ ಪಕ್ಕದಲ್ಲಿ ಸ್ಥಾಪನೆ ಮಾಡಲು ಯೋಜನೆ ರೂಪಿಸಲಾಗಿದೆ.

ಜೈನ್‌ ಸೊಸೈಟಿಯು ಈಗಾಗಲೇ ವೃತ್ತದ ನೀಲನಕ್ಷೆ ತಯಾರಿಸಿದ್ದು, ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ವೃತ್ತ ನಿರ್ಮಾಣ ಮಾಡಿ ಅಲ್ಲಿ ಕಲಶ ಇಟ್ಟು ಸುಂದರೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ. ಕಂಕನಾಡಿ-ಬೆಂದೂರ್‌ವೆಲ್‌ ಕಡೆಗೆ ತೆರಳುವ ರಸ್ತೆಯ ನಡುವೆ ವೃತ್ತ ನಿರ್ಮಿಸಿ ಕಲಶ ಇಟ್ಟರೆ ಸುಂದರವಾಗಿ ಮತ್ತು ಜನಾಕರ್ಷಣೆ ಕಾಣಲಿದೆ. ಈ ಬಗ್ಗೆ ಜಿಲ್ಲಾಡಳಿತ, ಸ್ಥಳೀಯಾಡಳಿತವು ಮುಂದಿನ ದಿನಗಳಲ್ಲಿ ವೃತ್ತ ನಿರ್ಮಾಣಕ್ಕೆ ಮಾರ್ಕಿಂಗ್‌ ಕೆಲಸ ನಡೆಸಬೇಕಿದೆ.

ಭಗವಾನ್‌ ಶ್ರೀ ಮಹಾವೀರ ಸ್ವಾಮಿಯ 2600ನೇ ಜನ್ಮ ಕಲ್ಯಾಣೋತ್ಸವವನ್ನು ರಾಷ್ಟ್ರದ್ಯಂತ 2001ರಿಂದ 2002ರ ವರೆಗೆ ಆಚರಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಅದರಂತೆ ಮಂಗಳೂರು ಪಾಲಿಕೆಯು ಪಂಪ್‌ವೆಲ್‌ ವೃತ್ತಕ್ಕೆ “ಮಹಾ ವೀರ ವೃತ್ತ’ ಎಂದು ನಾಮಕರಣ ನಡೆಸಿತ್ತು.

Advertisement

ಅನಂತರ ಜೈನ್‌ ಸೊಸೈಟಿ ಹಾಗೂ ಜೈನ ಸಮಾಜ ಸೇರಿಕೊಂಡು 43 ಸೆಂಟ್ಸ್‌ ಜಾಗದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸುಂದರ ಮಹಾವೀರ ಸರ್ಕಲ್‌ ಹಾಗೂ ಮಂಗಲ ಕಲಶವನ್ನು ಇಲ್ಲಿ ನಿರ್ಮಾಣ ಮಾಡಲಾಯಿತು.

2003ರ ಜನವರಿಯಲ್ಲಿ ಇದರ ಕಾಮಗಾರಿ ಆರಂಭವಾಗಿ, 6 ತಿಂಗಳ ಬಳಿಕ, ಜೂನ್‌ 29ರಂದು ಮಹಾವೀರ ಸರ್ಕಲ್‌ ಹಾಗೂ ಕಲಶದ ಉದ್ಘಾಟನೆ ನೆರವೇರಿತ್ತು. ಕಲಶದ ತೂಕ 20 ಟನ್‌ ಇತ್ತು. ಬಲ್ಲಾಳ್‌ ಆರ್ಕಿಟೆಕ್ಟ್‌ನ ರಾಜಶೇಖರ್‌ ಬಲ್ಲಾಳ್‌ ಅವರು ವೃತ್ತ ವಿನ್ಯಾಸಗೊಳಿಸಿದ್ದರು. 2006ರಲ್ಲಿ ಪಾಲಿಕೆ ನಿರ್ಮಲ ನಗರದ ಯೋಜನೆ 11ನೇ ಹಣಕಾಸು ಆಯೋಗದ ನಿಧಿಯಿಂದ ವೃತ್ತಕ್ಕೆ ಹೈಮಾಸ್ಟ್‌ ದೀಪ ಅಳವಡಿಸಲಾಗಿತ್ತು. ಕರ್ಣಾಟಕ ಬ್ಯಾಂಕ್‌ ಇದರ ನಿರ್ವಹಣೆಯನ್ನು ನಡೆಸುತ್ತಿತ್ತು.

ಕಲಶ ಸ್ಥಾಪನೆಯ ಬಗ್ಗೆ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಕಲಶ ನಿರ್ಮಾಣ ಮಾಡಲು ಸೂಕ್ತ ಸ್ಥಳಾವಕಾಶ ನೋಡಲಾಗುತ್ತಿದೆ. ಜೈನ್‌ ಸೊಸೈಟಿಯ ಪ್ರಮುಖರನ್ನು ಗಣನೆಗೆ ತೆಗೆದುಕೊಂಡು ಮುಂಬರುವ ಪಾಲಿಕೆ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಸಹಕಾರ ಅಗತ್ಯ
ನಗರಕ್ಕೆ ಹೆಬ್ಟಾಗಿಲಿನಂತಿದ್ದ ಮಹಾವೀರ ವೃತ್ತವನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಸಹಕಾರ ಅಗತ್ಯ. ಈಗ ಸದ್ಯ ಇರುವ ಪ್ರದೇಶದಲ್ಲಿಯೇ ವೃತ್ತ ನಿರ್ಮಿಸಿ, 15 ಲಕ್ಷ ರೂ.ನಲ್ಲಿ ಸುಂದರೀಕರಣಗೊಳಿಸುತ್ತೇವೆ. ಸ್ಥಳದಲ್ಲಿ ಮಾರ್ಕಿಂಗ್‌ ಕೆಲಸವನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕಿದೆ.
 - ಪುಷ್ಪರಾಜ್‌ ಜೈನ್‌, ಕಾರ್ಯದರ್ಶಿ, ಜೈನ್‌ ಸೊಸೈಟಿ ಮಂಗಳೂರು

ಚರ್ಚೆ ನಡೆಸಿ ತೀರ್ಮಾನ
ಪಂಪ್‌ವೆಲ್‌ನಲ್ಲಿದ್ದ ಮಹಾವೀರ ವೃತ್ತದ ಕಲಶವನ್ನು ಯಾವ ಪ್ರದೇಶದಲ್ಲಿ ನಿರ್ಮಿಸಬೇಕು ಎಂಬ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚೆ ಮಾಡಿ ನಿರ್ಧರಿಸುತ್ತೇನೆ. ಈ ಹಿಂದೆ ಕಲಶ ತೆರವುಗೊಳಿಸುವ ಸಮಯದಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇನೆ.
 - ಸಿಂಧೂ ಬಿ. ರೂಪೇಶ್‌, ಜಿಲ್ಲಾಧಿಕಾರಿ

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next