ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17.53 ಲಕ್ಷಕ್ಕೂ ಹೆಚ್ಚಿನ ಮತದಾರರಿದ್ದು, ಬಿಎಲ್‌ಒ (ಬೂತ್ ಮಟ್ಟದ ಅಧಿಕಾರಿ)ಗಳು ಮತದಾರರ ಪಟ್ಟಿಹಿಡಿದು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಕೊರೊನಾ ನಿರ್ಬಂಧಕ ಲಸಿಕೆ ಪಡೆಯದವರನ್ನು ಪತ್ತೆ ಮಾಡಿ, ಲಸಿಕೆ ಕೊಡಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣವನ್ನು ತೀವ್ರಗೊಳಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬಂದಿಯೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯಲ್ಲಿ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 1,861 ಬಿಎಲ್‌ಒಗಳಿದ್ದಾರೆ. ಅವರ ಮೇಲ್ವಿಚಾರಣೆಗಾಗಿ 186 ಸೂಪರ್ ವೈಸರ್‌ಗಳಿದ್ದಾರೆ. ಬಿಎಲ್‌ಒಗಳು ಮತ ದಾರರ ಪಟ್ಟಿ ಹಿಡಿದು ತಮ್ಮ ಬೂತ್ ವ್ಯಾಪ್ತಿಯ ಮನೆ-ಮನೆಗಳಿಗೆ ಭೇಟಿ ನೀಡಿ 18 ವರ್ಷ ತುಂಬಿದವರನ್ನು ನಮೂನೆ 6ರಲ್ಲಿ ಅರ್ಜಿ ಭರ್ತಿ ಮಾಡಿ ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ಮಾಡಬೇಕು. ಅದೇ ಮನೆಯಲ್ಲಿ 15 ವರ್ಷ ಮೇಲ್ಪಟ್ಟವರಿದ್ದಲ್ಲಿ ಅವರಿಂದ ಲಸಿಕೆಯ ಮಾಹಿತಿ ಪಡೆಯಬೇಕು. ಲಸಿಕೆ ಪಡೆಯದಿದ್ದಲ್ಲಿ ಸಂಬಂಧಿಸಿದ ವೈದ್ಯಾಧಿ ಕಾರಿಗಳು, ಪಿಡಿಒ, ಕಂದಾಯ ನಿರೀಕ್ಷಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಬೇಕು. ಅದೇ ಮನೆಯಲ್ಲಿ ಮರಣ ಹೊಂದಿದವರ ಹೆಸರು ಮತದಾರರ ಪಟ್ಟಿ ಯಲ್ಲಿದ್ದರೆ ಅದನ್ನು ಪಟ್ಟಿಯಿಂದ ತೆಗೆಯುವ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಅನಾರೋಗ್ಯ ಪೀಡಿತರಿದ್ದರೆ ಅವರು ಲಸಿಕೆ ಪಡೆದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಲಸಿಕೆ ಪಡೆಯದಿದ್ದರೆ ಸಂಬಂಧಿಸಿದವರನ್ನು ಸಂಪರ್ಕಿಸಿ ಲಸಿಕೆ ಕೊಡಿಸಬೇಕು ಎಂದರು.
ಇಲಾಖೆಗಳಲ್ಲೂ ಪರಿಶೀಲನೆ
ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ ಲಸಿಕೆ ಆಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಅದಕ್ಕಾಗಿ ಲಸಿಕೆ ಪ್ರಮಾಣಪತ್ರವನ್ನು ಪರಿಶೀಲಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ತಿಳಿಸಿದ ಅವರು, 2ನೇ ಡೋಸ್ ನಂತರ 9 ತಿಂಗಳ ಅವಧಿ ಪೂರೈಸಿರುವ ಮುಂಚೂಣಿ ಕಾರ್ಯಕರ್ತರಿಗೆ ಕೂಡಲೇ ಬೂಸ್ಟರ್ ಡೋಸ್ ಅನ್ನು ಕೊಡಿಸಬೇಕು ಎಂದರು.
ಜಿ.ಪಂ. ಸಿಇಒ ಡಾ| ಕುಮಾರ್, ಸಹಾ ಯಕ ಆಯುಕ್ತ ಮದನ್ ಮೋಹನ್, ಎಲ್ಲ ತಾಲೂಕುಗಳ ತಹಶಿಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿ, ಶಿಶು ಅಭಿವೃದ್ದಿ ಯೋಜ ನಾಧಿಕಾರಿ, ಬಿಎಲ್‌ಒ ಸೂಪರ್‌ವೈಸರ್, ಕಂದಾಯ ನಿರೀಕ್ಷಕರು ಉಪಸ್ಥಿತರಿದ್ದರು.
ವಾರಕ್ಕೆರಡು ದಿನ ಲಸಿಕೆ ಮೇಳ
ಪ್ರತೀ ಮಂಗಳವಾರ ಹಾಗೂ ಶುಕ್ರವಾರ ಲಸಿಕೆ ಮೇಳವನ್ನು ಹಮ್ಮಿಕೊಳ್ಳುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಯವರು, ಮೇಳದಲ್ಲಿ ಮೊದಲ ಅಥವಾ ಎರಡನೇ ಡೋಸ್ ಲಸಿಕೆ ಕೊಡಿಸಬೇಕು. ಅದರ ಹೊರತಾಗಿ ಅಧಿಕಾರಿಗಳು ಮೈಕ್ರೋ ಯೋಜನೆಗಳನ್ನು ರೂಪಿಸಿಕೊಂಡು ಲಸಿಕೆ ಕೊಡಿಸಬೇಕು. ಕೋವಿಡ್ ಲಸಿಕಾಕರಣದಲ್ಲಿ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಗದಿತ ಗುರಿ ಸಾಧಿಸದ ವೈದ್ಯಕೀಯ ಅಧಿಕಾರಿಗಳಿಗೆ ತಾಲೂಕು ಮಟ್ಟದಲ್ಲಿ ನೋಟಿಸ್ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಗುರಿ ಸಾಧಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಶಿಪಾರಸು ಮಾಡಿ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.