Advertisement

ಸಂವಿಧಾನ ಬದಲಿಸಿದರೆ ರಕ್ತಪಾತ

09:33 PM Oct 26, 2019 | Team Udayavani |

ಚಿಕ್ಕಬಳ್ಳಾಪುರ: ದೇಶದಲ್ಲಿ ಇತ್ತೀಚೆಗೆ ಸಂವಿಧಾನಕ್ಕೆ ಅಪಾಯ ತಂದೊಡ್ಡುವ ಶಕ್ತಿಗಳು ವಿಜೃಂಭಿಸುತ್ತಿದ್ದು, ಒಂದು ವೇಳೆ ಸಂವಿಧಾನ ಬದಲಾವಣೆಗೆ ಹೊರಟರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರಕ್ತಪಾತ ನಡೆಯುತ್ತದೆ ಎಂಬುವುದನ್ನು ಸಂವಿಧಾನ ವಿರೋಧಿ ಮನಸ್ಸುಗಳು ಅರಿಯಬೇಕೆಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್‌.ಆಂಜನೇಯ ಎಚ್ಚರಿಸಿದರು.

Advertisement

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಕದಸಂಸ (ಅಂಬೇಡ್ಕರ್‌ ವಾದ) ಜಿಲ್ಲಾ ಘಟಕ ಸಾಮಾಜಿಕ ಪಾಲುದಾರಿಕೆಗೆ ಆಗ್ರಹಿಸಿ ಏರ್ಪಡಿಸಿದ್ದ ಸರ್ವಜನರ-ಸಂವಿಧಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನ ಬದಲಾಯಿಸಲು ಪಿತೂರಿ ನಡೆಯುತ್ತಿದೆ. ಸಂವಿಧಾನ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಸಮಾನ ಅವಕಾಶ: ಸರ್ವ ಜನಾಂಗದ ಹಿತ ಬಯಸುವ ಸಂವಿಧಾನದಲ್ಲಿ ಎಲ್ಲಾ ಜಾತಿ, ಜನಾಂಗಗಳಿಗೂ ಸಮಾನವಾದ ಹಕ್ಕು ಹಾಗೂ ಅವಕಾಶ ಕಲ್ಪಿಸಲಾಗಿದೆ. ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಜಗತ್ತು ಮೆಚ್ಚಿದೆ ಎಂದರು. ಸಂವಿಧಾನದ ಆಶಯಗಳ ವಿರುದ್ಧ ದಿಕ್ಕಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊರಟಿದೆ ಎಂದು ವಾಗ್ಧಾಳಿ ನಡೆಸಿದರು. ಸಂವಿಧಾನ ಇರುವುದು ದಲಿತರಿಗೆ ಮಾತ್ರವಲ್ಲ. ಎಲ್ಲಾ ಜಾತಿ, ಸಮುದಾಯಗಳ ಬಡವರಿಗೆ ಸಂವಿಧಾನ ಸಮಾನ ಅವಕಾಶಗಳನ್ನು ಕಲ್ಪಿಸಿದೆ ಎಂದರು.

ಅನ್ಯಾಯಕ್ಕೆ ಒಳಗಾದವರ ಪರ ಹೋರಾಟ: ದಲಿತ ಸಂಘಟನೆಗಳು ಕೇವಲ ಹೊಲೆಯ, ಮಾದಿಗರಿಗೆ ಮಾತ್ರ ಹುಟ್ಟಿಕೊಂಡಿಲ್ಲ. ಎಲ್ಲಾ ಜಾತಿಯ ಬಡವರ ಪರವಾಗಿ, ತುಳಿತಕ್ಕೆ, ಅನ್ಯಾಯಕ್ಕೆ ಒಳಗಾದವರ ಪರ ಹೋರಾಟಗಳನ್ನು ನಡೆಸಿದೆ. ಅಂಬೇಡ್ಕರ್‌ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಈ ಮೂರು ಸಿದ್ಧಾಂತಗಳು ಅಳವಡಿಸಿಕೊಳ್ಳದೇ ದಲಿತರ ಉದ್ಧಾರ ಅಸಾಧ್ಯ ಎಂದರು.

ಸಂವಿಧಾನ ಉಳಿದರೆ ದೇಶ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, ದೇಶದ ಸರ್ವ ಜನಾಂಗದ ಹಿತ ಕಾಯುವ ಸಂವಿಧಾನವನ್ನು ಇನ್ನಷ್ಟು ಸದೃಢಗೊಳಿಸಿ ಸಂರಕ್ಷಿಸಬೇಕಿದೆ. ಸಂವಿಧಾನಕ್ಕೆ ಅಪಾಯ ಬರುವ ಮನ್ಸೂಚನೆ ದೇಶದಲ್ಲಿರುವುದರಿಂದ ಈ ಬಗ್ಗೆ ಸರ್ವ ಜನರಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕದಸಂಸ ಕೈಗೆತ್ತಿಕೊಂಡಿದೆ.

Advertisement

ಸಂವಿಧಾನ ಉಳಿದರೆ ಮಾತ್ರ ಭಾರತ ದೇಶವಾಗಿ ಉಳಿಯುತ್ತದೆ ಎಂದರು. ಆಳುವ ಸರ್ಕಾರಗಳು ಸಮರ್ಪಕವಾಗಿ ಸಂವಿಧಾನದ ಆಶಯಗಳನ್ನು ಈಡೇರಿಸದ ಪರಿಣಾಮ ಸಮಾಜ ಇಂದಿಗೂ ಬಡತನ, ಹಸಿವು, ನಿರುದ್ಯೋಗ ಸಮಸ್ಯೆ ಇದೆ. ಸಂವಿಧಾನವನ್ನು ತಿರುಚುವುದರ ಜೊತೆಗೆ ತಿದ್ದುವ ಮೂಲಕ ಸಂವಿಧಾನದ ಹಕ್ಕುಗಳ ದಮನ ಮಾಡಲು ಸರ್ಕಾರಗಳು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕದಸಂಸ ಅಂಬೇಡ್ಕರ್‌ ವಾದದ ರಾಜ್ಯ ಸಂಘಟನಾ ಸಂಚಾಲಕ ಕಾರಳ್ಳಿ ಶ್ರೀನಿವಾಸ್‌, ಜಿಲ್ಲಾ ಪ್ರಧಾನ ಸಂಚಾಲಕ ಗಂಗಾಧರ್‌ಗೌತಮ್‌, ರಾಜ್ಯ ಪದಾಧಿಕಾರಿಗಳಾದ ರಮೇಶ್‌, ಮಣಿಪಾಲ್‌ ರಾಜಪ್ಪ, ಕೆ.ಆರ್‌.ಮುನಿಯಪ್ಪ, ವಕೀಲೆ ವನಿತಾದೇವಿ, ಜಿಲ್ಲಾ ಸಂಘಟನಾ ಸಂಚಾಲಕ ಎಂ.ಎನ್‌.ಮುನಿರಾಜು, ಜಿಲ್ಲಾ ಖಜಾಂಚಿ ಮಂಜುನಾಥ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕದಸಂಸ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಮೆರವಣಿಗೆ: ಸಮಾವೇಶಕ್ಕೂ ಮೊದಲು ನಗರದ ಎಂಜಿ ರಸ್ತೆಯಲ್ಲಿರುವ ಜೈಭೀಮ್‌ ಹಾಸ್ಟೆಲ್‌ ಆವರಣದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಕದಸಂಸ ಕಾರ್ಯಕರ್ತರು ಅಲ್ಲಿಂದ ಅಂಬೇಡ್ಕರ್‌ ಪ್ರತಿಮೆ ಇದ್ದ ಅಲಂಕೃತ ಪಲ್ಲಕ್ಕಿಯೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಬೃಹತ್‌ ಮೆರವಣಿಗೆ ನಡೆಸಿ ಸಮಾವೇಶ ನಡೆದ ಒಕ್ಕಲಿಗರ ಕಲ್ಯಾಣ ಮಂಟಪಕ್ಕೆ ಆಗಮಿಸಿದರು.

ನರೇಂದ್ರ ಮೋದಿ ದೇಶದ ಪ್ರಧಾನಿ ಆಗಿದ್ದರೆ ಅದು ಅಂಬೇಡ್ಕರ್‌ ಬರೆದ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ಶೋಷಿತರಿಗೆ, ಬಡವರಿಗೆ, ಶ್ರಮಿಕರಿಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಸಂವಿಧಾನದಿಂದ ಮಾತ್ರ ಸಾಧ್ಯ.
-ಹೆಚ್‌.ಆಂಜನೇಯ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next