Advertisement

ತಪಾಸಣೆಗೆ ರಕ್ತ ಮಾದರಿ ಸಂಗ್ರಹ

12:37 PM Sep 15, 2017 | Team Udayavani |

ಮುದಗಲ್ಲ: ತಲೇಖಾನ ಗ್ರಾಪಂ ವ್ಯಾಪ್ತಿಯ ದೇಸಾಯಿ ಭೋಗಾಪುರ ಖೀರಣ್ಣನ ತಾಂಡಾದಲ್ಲಿ ಸುಮಾರು 15 ದಿನಗಳಿಂದ ಪ್ರತಿ ಕುಟುಂಬದಲ್ಲಿ ನಾಲ್ಕೈದು ಜನ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತಾಲೂಕು ವೈದ್ಯಾಧಿಕಾರಿ ಡಾ| ನಂದಕುಮಾರ, ತಾಪಂ ಇಒ ಪುಷ್ಪಾ ಎಂ. ಕಮ್ಮಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕಳೆದ 15 ದಿನಗಳಿಂದ ತಾಂಡಾದಲ್ಲಿ ಜ್ವರ ಕಾಣಿಸಿಕೊಂಡಿದ್ದು, ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ದರು ಸೇರಿದಂತೆ ಮನೆಗೆ ನಾಲ್ಕೈದು ಜನ ಜ್ವರದಿಂದ ಬಳಲುತ್ತಿದ್ದಾರೆ. ಬಾಗಲಕೋಟೆ, ಬೆಳಗಾವಿ, ಲಿಂಗಸುಗೂರ ಹಾಗೂ ಮುದಗಲ್ಲ ನಗರಗಳ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದರೂ ಜ್ವರ ಕಡಿಮೆಯಾಗುತ್ತಿಲ್ಲ. ಗ್ರಾಮದಲ್ಲಿ ಸುಮಾರು 89ಕ್ಕೂ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದಾರೆ. ಜ್ವರದಿಂದ ಒಂದೇ ವಾರದಲ್ಲಿ ಛತ್ರಪ್ಪ ಗಂಗಪ್ಪ (29), ಖೀರೆಪ್ಪ ರಾಠೊಡ (55) ಎಂಬುವರು ಸಾವನ್ನಪ್ಪಿದ್ದಾರೆ ಎಂದು ತಾಂಡಾದ ಶೆಟ್ಟಪ್ಪ, ಸೀನಪ್ಪ, ಚಂದ್ರಪ್ಪ, ಹೊಮಣ್ಣ, ಹನುಮಂತ ಅಳಲು ತೋಡಿಕೊಂಡರು.

ತಾಂಡಾದಲ್ಲಿ ಆಶಾ ಕಾರ್ಯಕರ್ತೆಯರು ಇಲ್ಲ, ಅಂಗನವಾಡಿ ಕೇಂದ್ರವೂ ಇಲ್ಲ. ಇದರಿಂದ ಮಹಿಳೆಯರಿಗೆ, ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾರ್ಗದರ್ಶನ ದೊರೆಯುತ್ತಿಲ್ಲ ಎಂದು ತಲೇಖಾನ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ದೂರಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ನಂದಕುಮಾರ ಮಾತನಾಡಿ, ಆರೋಗ್ಯ ಇಲಾಖೆಯಿಂದ ಡಾ| ವಿನೋದ ನೇತೃತ್ವದ ತಂಡ ತಾಂಡಾ ನಿವಾಸಿಗಳ ರಕ್ತ ತಪಾಸಣೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ನಿವಾಸಿಗಳು ಮನೆ ಸುತ್ತಲಿನ ಪ್ರದೇಶದಲ್ಲಿ ಸ್ವತ್ಛತೆ ಕಾಪಾಡಬೇಕು. ಶೌಚಗೃಹಗಳನ್ನು ನಿರ್ಮಿಸಿಕೊಂಡು ಬಳಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಜಾಗ್ರತೆ ವಹಿಸಬೇಕು. ಸೊಳ್ಳೆ ಪರದೆ ಕಟ್ಟಿಕೊಂಡು ಮಲಗಬೇಕು. 

ನೀರನ್ನು ಕಾಯಿಸಿ, ಆರಿಸಿ ಕುಡಿಯುವಂತೆ ಸಲಹೆ ನೀಡಿದ ಅವರು, ಕಿರುನೀರು ಸರಬರಾಜು ಯೋಜನೆಯಡಿ ತಾಂಡಾಕ್ಕೆ ಪೂರೈಕೆ ಆಗುವ ನೀರನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ತರಿಸಲಾಗುವುದು. ಆರೋಗ್ಯ ತಪಾಸಣಾ ಶಿಬಿರ ನಡೆಸುವುದಾಗಿ ಅವರು ಹೇಳಿದರು.

Advertisement

ತಾಪಂ ಕಾ.ನಿ. ಅಧಿಕಾರಿ ಪುಷ್ಪಾ ಎಂ.ಕಮ್ಮಾರ ಮಾತನಾಡಿ, ಕುಡಿಯುವ ನೀರಿನ ಗುಮ್ಮಿಗಳನ್ನು ಸ್ವತ್ಛವಾಗಿ ತೊಳೆಯಬೇಕು. ತಾಂಡಾಕ್ಕೆ ಸರಿಯಾದ ರಸ್ತೆ ಇಲ್ಲ , ಖಾತ್ರಿ ಯೋಜನೆಯಡಿ ರಸ್ತೆ ದುರಸ್ತಿ ಮಾಡಿಸಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‌ ಮಾಡುವಂತೆ ಪಿಡಿಒ ಮಹ್ಮದ್‌ ಉಮರ್‌ ಅವರಿಗೆ ಸೂಚಿಸಿದರು. 

ತಾಪಂ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಅಮರೇಶ ಯಾದವ, ವಸತಿ ಯೋಜನೆ ನೋಡಲ್‌ ಅಧಿಕಾರಿ ರಸೂಲ್‌, ಪಿಡಿಒ ಮಹ್ಮದ್‌ ಉಮರ್‌, ಡಾ| ವಿನೋದ, ಗ್ರಾಪಂ ಸದಸ್ಯ ಪತ್ಯಪ್ಪ ರಾಠೊಡ, ಮಾಜಿ ಅಧ್ಯಕ್ಷ ಹನುಮಂತಪ್ಪ, ತಾಂಡಾದ ಹಿರಿಯರು ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next