Advertisement

ರಕ್ತ ಮಾದರಿ ವರದಿ ನೆಗೆಟಿವ್‌: ಆತಂಕ ದೂರ

11:00 PM Feb 02, 2020 | Lakshmi GovindaRaj |

ಬೆಂಗಳೂರು: ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಯಿಂದ (ಎನ್‌ಐವಿ) ಕರೋನಾ ವೈರಸ್‌ ಶಂಕಿತರ ರಕ್ತ ಮಾದರಿ ಪರೀಕ್ಷಾ ವರದಿಗಳು ನೆಗೆಟಿವ್‌ ಎಂದು ಬರುತ್ತಿದ್ದು, ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಆರೋಗ್ಯ ಇಲಾಖೆಯು ಚೀನಾದಿಂದ ಬಂದಿದ್ದ ವರನ್ನು ವಿಮಾನ ನಿಲ್ದಾಣದಲ್ಲಿಯೇ ಪರೀಕ್ಷೆಗೆ ಒಳಪಡಿ ಸುವ ಜತೆಗೆ ಅನಾರೋಗ್ಯ ಕಂಡು ಬಂದರೆ ಆಸ್ಪತ್ರೆಯಲ್ಲಿ ದಾಖಲಿಸಿ ನಿಗಾವಹಿಸುತ್ತಿತ್ತು. ನಗರದ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.

ಈ ಪೈಕಿ ಜ.21 ರಿಂದ ಇಲ್ಲಿಯವರೆಗೆ 84 ಶಂಕಿತರನ್ನು ಆರೋಗ್ಯ ಇಲಾಖೆ ಗುರುತಿಸಿ ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್‌ಐವಿ) ಕಳುಹಿಸಿತ್ತು. ಅವರಲ್ಲಿ 28 ಮಂದಿಯ ರಕ್ತ ಮಾದರಿ ವರದಿ ನೆಗೆಟಿವ್‌ ಎಂಬುದು ದೃಢವಾಗಿದೆ. ಇನ್ನು ಶನಿವಾರ ಹಾಗೂ ಭಾನುವಾರ ಆಸ್ಪತ್ರೆಗೆ ಬಂದು ರಕ್ತ ಮಾದರಿ ನೀಡಿರುವ 43 ಮಂದಿಯ ವರದಿ ಬರಬೇಕಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ.ನಾಗರಾಜ್‌ ಅವರು, ಎಲ್ಲಾ ಶಂಕಿತರ ವರದಿಯೂ ನೆಗೆಟಿವ್‌ ಎಂದು ಬರುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ವುಹಾನ್‌ ನಗರದಿಂದ ಬಂದವರನ್ನು ಮಾತ್ರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದರಿಂದ ಎಲ್ಲರನ್ನೂ ಮನೆಗೆ ಕಳುಹಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಯಾವುದೇ ಶಂಕಿತರು ಚಿಕಿತ್ಸೆ ಪಡೆಯುತ್ತಿಲ್ಲ. ಮನೆಯಲ್ಲಿಯೇ ಆರೋಗ್ಯ ಇಲಾಖೆ ನಿಗಾವಹಿಸಿದೆ ಎಂದರು.

ಭಯದಿಂದ ಬರುತ್ತಿರುವವರು ಹೆಚ್ಚು: ಇತ್ತೀಚೆಗೆ ಚೀನಾ ಪ್ರವಾಸ ಹೋಗಿ ಬಂದ ಅನೇಕರು ಯಾವುದೇ ಅನಾರೋಗ್ಯ ಕಾಣಿಸಿಕೊಳ್ಳದಿದ್ದರೂ ಆಸ್ಪತ್ರೆಗೆ ಬಂದು ರಕ್ತ ಪರೀಕ್ಷೆ ಮಾಡಿಸುತ್ತಿದ್ದಾರೆ. ಪ್ರವಾಸ ಹೋಗಿಬಂದ ಅನೇಕರಿಗೆ ನಮಗೂ ಕೊರೊನಾ ಇರಬಹುದೇ ಎಂಬ ಭಯ ಹೆಚ್ಚಾಗಿದೆ. ಹೀಗಾಗಿ, ಆಸ್ಪತ್ರೆಗೆ ಬಂದು ರಕ್ತಪರೀಕ್ಷೆ ಮಾಡಿಸಿ ನಿರಾಳರಾಗುತ್ತಿದ್ದಾರೆ. ಶನಿವಾರ 34, ಭಾನುವಾರ 9 ಮಂದಿ ಇತ್ತೀಚಿಗೆ ಚೀನಾ ಪ್ರವಾಸ ಮುಗಿಸಿಬಂದವರು ಅನಾರೋಗ್ಯ ಇಲ್ಲದಿದ್ದರೂ ರಕ್ತ ಪರೀಕ್ಷೆಗೆ ನೀಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

ವದಂತಿ ಸುಳ್ಳು: ಈ ನಡುವೆ, ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಸುತ್ತಮುತ್ತಲಿನ 19 ಮಂದಿಗೆ ಸೋಂಕು ತಗುಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಇದು ಸತ್ಯಕ್ಕೆ ದೂರ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ನೆರೆಯವರ ದೂರಿನಿಂದ ಎಚ್ಚೆತ್ತು ಆರೋಗ್ಯ ತಪಾಸಣೆ: ಈ ಮಧ್ಯೆ, ನಗರದ ಬೇಗೂರು ಬಳಿಯ ಕುಟುಂಬವೊಂದರ 5 ಮಂದಿ ಇತ್ತೀಚೆಗೆ ಚೀನಾ ಪ್ರವಾಸಕ್ಕೆ ಹೋಗಿ ಬಂದಿದ್ದರು. ಈ ಕುರಿತು ಮಾಹಿತಿ ಇದ್ದ ನೆರೆಯವರು ಅವರಿಗೂ ಸೋಂಕು ತಗುಲಿರಬಹುದು ಎಂದು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಸಲಹೆ ಮೇರೆಗೆ ಆ ಕುಟುಂಬ ಸದಸ್ಯರು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ವೈದ್ಯರು ರಕ್ತ ಪರೀಕ್ಷೆಗೆ ಮಾಡಿದ್ದು, ವರದಿ ಬರಬೇಕಿದೆ.

ಇಂದಿನಿಂದ ಬೆಂಗಳೂರಲ್ಲೇ ಕೊರೊನಾ ಪರೀಕ್ಷೆ: ಇದುವರೆಗೂ ಕೊರೊನಾ ಶಂಕಿತರ ರಕ್ತ ಪರೀಕ್ಷೆಗೆ ಪುಣೆ ಎನ್‌ಐವಿಗೆ ಕಳಿಸಬೇಕಿತ್ತು. ಇವತ್ತಿನಿಂದ ಬೆಂಗಳೂರಲ್ಲೇ ಕೊರೊನಾ ಪರೀಕ್ಷೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ರಾಜೀವ್‌ ಗಾಂಧಿ ಆಸ್ಪತ್ರೆಯ ಎನ್‌ಐವಿ ಕೇಂದ್ರ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಕ್ತದ ಮಾದರಿಗಳ ಪರೀಕ್ಷೆಗೆ ವೈದ್ಯಕೀಯ ಪ್ರಯೋಗಾಲಯಗಳನ್ನು ನವೀಕರಿಸಲಾಗಿದೆ. ಪರೀಕ್ಷೆ ಸಂಬಂಧ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಸೋಮವಾರದಿಂದ ಪರೀಕ್ಷೆಗಳನ್ನು ಪ್ರಾರಂಭಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next