ದೇಶದಲ್ಲಿ ರಕ್ತ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯ ಅತ್ಯಂತ ಮಹತ್ವದ ಮತ್ತು ರೋಗಿಗಳಸ್ನೇಹಿ ನಿರ್ಧಾರ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ರಕ್ತದ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಬೀಳುವ ಲಕ್ಷಣಗಳು ಗೋಚರಿಸಿವೆ. ರಕ್ತ ಸಂಸ್ಕರಣ ಶುಲ್ಕವನ್ನು ಹೊರತುಪಡಿಸಿದಂತೆ ಯಾವುದೇ ತೆರನಾದ ಶುಲ್ಕಗಳನ್ನು ಆಸ್ಪತ್ರೆಗಳು ಮತ್ತು ರಕ್ತನಿಧಿಗಳು ರಕ್ತ ಪೂರೈಕೆಯ ಸಂದರ್ಭದಲ್ಲಿ ಪಡೆಯುವಂತಿಲ್ಲ ಎಂದು ಕೇಂದ್ರೀಯ ಔಷಧ ಮಾಪನ ನಿಯಂತ್ರಣ ಸಂಘ(ಸಿಡಿಎಸ್‌ಸಿಒ) ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ರಾಷ್ಟ್ರೀಯ ರಕ್ತ ವರ್ಗಾವಣೆ ಪರಿಷತ್(ಎನ್‌ಬಿಟಿಸಿ)ನ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗಿದ್ದು ದೇಶದೆಲ್ಲೆಡೆ ರಕ್ತ ಪೂರೈಕೆಗೆ ಸಂಬಂಧಿಸಿದಂತೆ ಈ ಪರಿಷ್ಕೃತ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ನಿರ್ದೇಶ ನೀಡಿದೆ.
ಕೇಂದ್ರ ಸರಕಾರದ ಈ ಮಹತ್ವದ ನಿರ್ಧಾರದಿಂದಾಗಿ ರೋಗಿಗಳು ಮತ್ತು ನಿರ್ದಿಷ್ಟ ಕಾಲಮಿತಿಗೊಮ್ಮೆ ರಕ್ತ ವರ್ಗಾವಣೆಯ ಆವಶ್ಯಕತೆ ಇರುವವರ ಮೇಲಣ ಬಲುದೊಡ್ಡ ಹೊರೆಯನ್ನು ಇಳಿಸಿದಂತಾಗಿದೆ. ಅಷ್ಟು ಮಾತ್ರವಲ್ಲದೆ ರಕ್ತ ಮಾರಾಟದ ಸರಕಲ್ಲ ಎಂದು ಸರಕಾರ ತನ್ನ ಪರಿಷ್ಕೃತ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದು ಯಾವುದೇ ಸಂದರ್ಭದಲ್ಲಿಯೂ ಖಾಸಗಿ ಆಸ್ಪತ್ರೆಗಳು ಮತ್ತು ರಕ್ತ ನಿಧಿಗಳು ರಕ್ತ ಪೂರೈಕೆಗಾಗಿ ಸಂಸ್ಕರಣ ವೆಚ್ಚವನ್ನು ಹೊರತುಪಡಿಸಿದಂತೆ ಇನ್ನಿತರ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ ಎಂದಿದೆ. ಅಷ್ಟು ಮಾತ್ರವಲ್ಲದೆ ಸಂಸ್ಕರಣ ಶುಲ್ಕವಾಗಿ 250- 1,550ರೂ. ಹಾಗೂ ಪ್ಲಾಸ್ಮಾ, ಪ್ಲೇಟ್‌ಲೆಟ್‌ಗಳಿಗೆ ಒಂದು ಯೂನಿಟ್‌ಗೆ 400ರೂ. ಗಳನ್ನಷ್ಟೇ ರೋಗಿಗಳಿಂದ ಪಡೆಯುವಂತೆಯೂ ಸಿಡಿಎಸ್‌ಸಿಒ ತನ್ನ ಆದೇಶದಲ್ಲಿ ನಿರ್ದೇಶನ ನೀಡಿದೆ. ಇದೇ ವೇಳೆ ರಕ್ತ ವರ್ಗಾವಣೆಯ ಸಂದರ್ಭದಲ್ಲಿ ನಡೆಸಲಾಗುವ ಯಾವುದೇ ಹೆಚ್ಚುವರಿ ರಕ್ತ ಪರೀಕ್ಷೆಗಳಿಗೂ ಪ್ರತ್ಯೇಕ ಶುಲ್ಕವನ್ನು ನಿಗದಿಪಡಿಸಿದೆ.
ದೇಶದ ಹಲವೆಡೆ ರಕ್ತ ವರ್ಗಾವಣೆ, ರಕ್ತ ಪೂರೈಕೆ ಒಂದು ದಂಧೆಯಾಗಿ ಮಾರ್ಪಟ್ಟಿತ್ತು. ರಕ್ತದ ತುರ್ತು ಆವಶ್ಯಕತೆ ಇರುವ ಸಂದರ್ಭದಲ್ಲಿ ರೋಗಿಗಳಿಂದ ಭಾರೀ ಪ್ರಮಾಣದಲ್ಲಿ ಹಣವನ್ನು ವಸೂಲು ಮಾಡಲಾಗುತ್ತಿತ್ತು. ಇನ್ನು ತೀರಾ ಅಪರೂಪದ ಗುಂಪುಗಳ ರಕ್ತಕ್ಕೆ ಇನ್ನೂ ಹೆಚ್ಚಿನ ಹಣವನ್ನು ವಸೂಲು ಮಾಡಲಾಗುತ್ತಿತ್ತು. ಇದು ಬಡ ರೋಗಿಗಳ ಪಾಲಿಗೆ ಬಲುದೊಡ್ಡ ಹೊರೆಯಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ತಲಸ್ಸೇಮೀಯಾ, ರಕ್ತಹೀನತೆ, ಶಸ್ತ್ರಚಿಕಿತ್ಸೆ ಮತ್ತು ನಿರಂತರ ರಕ್ತ ವರ್ಗಾವಣೆಯ ಸಂದರ್ಭಗಳಲ್ಲಿ ರೋಗಿಗಳಿಗೆ ಹೆಚ್ಚಿನ ಪ್ರಮಾಣದ ರಕ್ತದ ಆವಶ್ಯಕತೆ ಇರುವುದರಿಂದ ಆಸ್ಪತ್ರೆಗಳು ಮತ್ತು ರಕ್ತನಿಧಿಗಳು ರಕ್ತ ಪೂರೈಸಲು ಅಧಿಕ ಶುಲ್ಕವನ್ನು ವಿಧಿಸುತ್ತಿರುವುದರಿಂದ ಈ ರೋಗಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿ ರಕ್ತ ಪೂರೈಕೆಯ ಶುಲ್ಕವನ್ನು ಕಡಿಮೆಗೊಳಿಸಬೇಕೆಂಬ ಆಗ್ರಹ ಕೇಳಿಬಂದಿತ್ತು. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ ಕೊನೆಗೂ ಈ ಸಂಬಂಧ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಆದೇಶವನ್ನು ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಕಳುಹಿಸಿಕೊಡಲಾಗಿದ್ದು ಪರಿ ಷ್ಕೃತ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ರಕ್ತ ಪೂರೈಕೆಗೆ ಸಂಬಂಧಿಸಿದಂತೆ ಹಾಲಿ ಜಾರಿಯಲ್ಲಿರುವ ನಿಯಮಾವಳಿಗಳೇ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ ಎಂಬ ದೂರುಗಳ ನಡುವೆಯೇ ಕೇಂದ್ರ ಸರಕಾರ ಈಗ ಮಾರ್ಗಸೂಚಿಯನ್ನು ಇನ್ನಷ್ಟು ಬಿಗಿಗೊಳಿಸಿ ಹೆಚ್ಚು ರೋಗಿಗಳ ಸ್ನೇಹಿಯನ್ನಾಗಿಸಿದೆ. ಹೀಗಾಗಿ ಸರಕಾರದ ಸಂಬಂಧಪಟ್ಟ ಇಲಾಖೆಗಳು ಮತ್ತು ಸಂಸ್ಥೆಗಳು ಹೊಸ ಮಾರ್ಗಸೂಚಿ ದೇಶದೆಲ್ಲೆಡೆ ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಯಾವುದೇ ರೋಗಿಯೂ ರಕ್ತದ ಅಭಾವದಿಂದ ಪ್ರಾಣ ಕಳೆದು ಕೊಳ್ಳದಂತೆ ಸೂಕ್ತ ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಸರಕಾರ ನಿಗದಿಪಡಿಸಿರುವ ದರ ಮತ್ತು ಮಾರ್ಗಸೂಚಿಗಳಿಗನುಸಾರ ಆಸ್ಪತ್ರೆಗಳು ಮತ್ತು ರಕ್ತನಿಧಿಗಳು ಕಾರ್ಯನಿರ್ವಹಿಸಬೇಕು. ಇದೇ ವೇಳೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದತ್ತ ಆಸಕ್ತಿ ತೋರಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ರೋಗಿಗಳ ಪ್ರಾಣರಕ್ಷಣೆಯ ಕಾರ್ಯದಲ್ಲಿ ಆಸ್ಪತ್ರೆಗಳ ಜತೆ ಕೈಜೋಡಿಸಬೇಕು.