Advertisement

ರಕ್ತದಾನದಲ್ಲಿ ದ.ಕ. ರಾಜ್ಯದಲ್ಲೇ ಪ್ರಥಮ

10:04 AM Dec 23, 2017 | |

ಮಹಾನಗರ: ರಾಜ್ಯದಲ್ಲಿ ರಕ್ತದಾನ ಮಾಡುವುದರಲ್ಲಿ ದಕ್ಷಿಣ ಕನ್ನಡವು ಉಳಿದೆಲ್ಲ ಜಿಲ್ಲೆಗಳಿಗಿಂತ ಮುಂದಿದ್ದು, ಪ್ರತಿ ವರ್ಷ ಸುಮಾರು 58 ಸಾವಿರ ಯೂನಿಟ್‌ನಷ್ಟು ರಕ್ತದಾನ ಮಾಡುತ್ತಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 13 ಬ್ಲಡ್‌ ಬ್ಯಾಂಕ್‌ ಗಳಿದ್ದು, ಇದರಲ್ಲಿ ರಿಪ್ಲೇಸ್‌ಮೆಂಟ್‌, ಬ್ಲಡ್‌ ಬ್ಯಾಂಕ್‌ನಲ್ಲಿ ಹಾಗೂ ಶಿಬಿರಗಳಲ್ಲಿ ಮಾಡಿದ ರಕ್ತದಾನವೆಲ್ಲವನ್ನು ಪರಿಗಣಿಸಿದರೂ ಜಿಲ್ಲೆಯ ಕೊಡುಗೆ ಗಮನಾರ್ಹವಾಗಿದೆ. 2016-17ನೇ ಒಟ್ಟು 58,521ಯೂನಿಟ್‌ ರಕ್ತ ಸಂಗ್ರಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸ್ಟೇಟ್ ಬ್ಲಿಡ್‌ ಟ್ರಾನ್ಸ್‌ಫಿಶನ್‌ ಕೌನ್ಸೆಲಿಂಗ್‌ ಕೊಡುವ ಪ್ರಶಸ್ತಿಗೆ ದ.ಕ. ಜಿಲ್ಲೆ ಆಯ್ಕೆಯಾಗಿದೆ. ನಮ್ಮ ಜಿಲ್ಲೆಯಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದು, ಸಹಜವಾಗಿಯೇ ರಕ್ತ ದಾನದ ಬಗ್ಗೆ ಕಾಳಜಿ ಹಾಗೂ ಜಾಗೃತಿ ಹೊಂದಿದ್ದಾರೆ. ಬೇಡಿಕೆ ಬಂದಾಗ ರಕ್ತದಾನಕ್ಕೆ ಮುಂದಾಗುವವರು ಸಾಕಷ್ಟು ಮಂದಿ ಇದ್ದಾರೆ.

3 ವರ್ಷಗಳಲ್ಲೇ ಹೆಚ್ಚು ರಕ್ತದಾನ
ಜಿಲ್ಲೆಯಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿವಿಧ ಸಂಘ-ಸಂಸ್ಥೆಗಳು ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
ಈ ಸಂಸ್ಥೆಗಳು ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ರೆಡ್‌ಕ್ರಾಸ್‌ ಸಂಸ್ಥೆಯಿಂದಲೂ ಈ ರೀತಿಯ ಸ್ವಯಂ ಪ್ರೇರಿತ ರಕ್ತ ದಾನದ ಬಗ್ಗೆ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಕ್ತದಾನದಲ್ಲಿ ಕಳೆದ ಮೂರು ವರ್ಷಗಳ ಅಂಕಿ-ಅಂಶ ನೋಡಿದರೆ ಬ್ಲಡ್‌ ಬ್ಯಾಂಕ್‌ಗಳಿಗೆ ತೆರಳಿ ರಕ್ತದಾನ ಮಾಡಿದವರ ಸಂಖ್ಯೆಯೇ ಹೆಚ್ಚು. 2014-15ರಲ್ಲಿ 9848 ಯೂನಿಟ್‌ನಷ್ಟು ಬದಲಿ ರಕ್ತ ಸಂಗ್ರಹವಾದರೆ, 26169 ಯೂನಿಟ್‌ನಷ್ಟು ಬ್ಲಡ್‌ ಬ್ಯಾಂಕ್‌ಗಳಲ್ಲಿ ಸಂಗ್ರಹವಾಗಿದೆ. ಇನ್ನು ನಾನಾ ಕಡೆ ನಡೆಸಿದ ಶಿಬಿರಗಳಿಂದ 18484 ಯೂನಿಟ್‌ನಷ್ಟು ರಕ್ತ ಸಂಗ್ರಹವಾಗಿದೆ.

ಹಾಗೆಯೇ, 2015-2016ರಲ್ಲಿ ಬದಲಿ ರಕ್ತ ನೀಡಿದವರಿಂದಾಗಿ 4945 ಯೂನಿಟ್‌ ನಷ್ಟು ಸಂಗ್ರಹವಾದರೆ, 26217 ಯೂನಿಟ್‌ ರಕ್ತವು ಬ್ಲಿಡ್‌ ಬ್ಯಾಂಕ್‌ಗಳಿಂದ ಸಂಗ್ರಹವಾಗಿದೆ. ಅಲ್ಲದೆ, ಶಿಬಿರಗಳ ಮೂಲಕವೂ 21460 ಯೂನಿಟ್‌ ರಕ್ತ ಶೇಖರಣೆಯಾಗಿದೆ. ಅದೇರೀತಿ, ಕಳೆದ ವರ್ಷ ಬದಲಿಯಾಗಿ ರಕ್ತ ಕೊಟ್ಟ ಕಾರಣ ಒಟ್ಟು 5399 ಯೂನಿಟ್‌ ರಕ್ತ ಸಂಗ್ರಹವಾದರೆ, ಬ್ಲಡ್‌ ಬ್ಯಾಂಕ್‌ಗೆ ತೆರಳಿ ರಕ್ತ ನೀಡಿದ ಕಾರಣ ಒಟ್ಟು 27526 ಯೂನಿಟ್‌ ರಕ್ತ ಸಂಗ್ರಹವಾಗಿದೆ. ಈ ನಡುವೆ, 25596 ಯೂನಿಟ್‌ನಷ್ಟು ರಕ್ತವು ಶಿಬಿರಗಳ ಮೂಲಕ ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

248 ಯೂನಿಟ್‌ ರಕ್ತ ವ್ಯರ್ಥ
ಈ ರೀತಿ ಸಂಗ್ರಹವಾಗುವ ರಕ್ತವು ನಾನಾ ಕಾರಣಗಳಿಂದ ಅದು ಮತ್ತೂಬ್ಬರಿಗೆ ನೀಡುವುದಕ್ಕೆ ಆರೋಗ್ಯಕರವಾಗಿರುವುದಿಲ್ಲ. ಈ ರೀತಿ ದೋಷ ಪೂರಿತ ರಕ್ತವನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗದೆ ತಿರಸ್ಕರಿಸಲಾಗುವುದು. ಈ ರೀತಿ 2014-15ರಲ್ಲಿ 101 ಯೂನಿಟ್‌ ರಕ್ತ, 2015-16ರಲ್ಲಿ
139 ಯೂನಿಟ್‌, 2016-17ರಲ್ಲಿ 248 ಯೂನಿಟ್‌, 2017 ಅಕ್ಟೋಬರ್‌ ವರೆಗೆ 206 ಯೂನಿಟ್‌ ರಕ್ತವು ಬಳಕೆಗೆ ಯೋಗ್ಯವಾಗದೆ ಡಿಸ್ಕಾರ್ಡ್‌ ಮಾಡಲಾಗಿದೆ.

Advertisement

ಜಿಲ್ಲೆಯಲ್ಲಿ 13 ಬ್ಲಡ್‌ ಬ್ಯಾಂಕ್‌
ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್‌ ಸೆಂಟರ್‌, ಸಿಟಿ ಆಸ್ಪತ್ರೆ, ಜ್ಯೋತಿ ಆಸ್ಪತ್ರೆ ಬೆಳ್ತಂಗಡಿ, ಕೆ.ವಿ.ಜಿ. ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ, ಜಿಲ್ಲಾ ವೆನ್ಲಾಕ್‌ ಆಸ್ಪತ್ರೆ, ಫಾದರ್‌ ಮುಲ್ಲರ್‌ ಆಸ್ಪತ್ರೆ, ಇಂಡಿಯನ್‌ ರೆಡ್‌ ಕ್ರಾಸ್‌ ಸೊಸೈಟಿ, ಕೆಎಂಸಿ ಆಸ್ಪತ್ರೆ ಮಂಗಳೂರು, ರೋಟರಿ ಕ್ಯಾಂಪ್ಕೋ, ನಿಟ್ಟೆ ಎಜುಕೇಶನ್‌ ಟ್ರಸ್ಟ್‌, ಎಸ್‌ಐಎಂಎಸ್‌ ಆರ್‌ಸಿ ಬ್ಲಡ್‌ ಬ್ಯಾಂಕ್‌, ತೇಜಸ್ವಿನಿ ಆಸ್ಪತ್ರೆ ಲಯನ್ಸ್‌ ಬ್ಲಿಡ್‌ ಬ್ಯಾಂಕ್‌, ಯೇನೆಪೊಯ ಮೆಡಿಕಲ್‌ ಕಾಲೇಜಿನಲ್ಲಿ ಸದ್ಯ ಬ್ಲಡ್‌ ಬ್ಯಾಂಕ್‌ಗಳಿವೆ.

ರಕ್ತದಾನದ ಬಗ್ಗೆ ಅರಿವು ಅಗತ್ಯ
ಜಿಲ್ಲೆಯ ಎಲ್ಲ ಬ್ಲಡ್‌ ಬ್ಯಾಂಕ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವೆನ್ಲಾಕ್‌ ಬ್ಲಡ್‌ ಬ್ಯಾಂಕ್‌ ಉನ್ನತ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ರಕ್ತದಾನದ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
ಡಾ| ಬದ್ರುದ್ದೀನ್‌ ಎಂ.ಎನ್‌.,
  ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next