ಮಹಾನಗರ: ಛಲ- ಆತ್ಮವಿಶ್ವಾಸ ವಿದ್ದರೆ ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು ಎಂಬುದನ್ನು ಸಾಬೀತು ಪಡಿಸಿದ್ದಾರೆ ಬಿಎಯಲ್ಲಿ ಚಿನ್ನದ ಪದಕ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದ ಅನ್ವಿತ್ ಜಿ. ಕುಮಾರ್. ಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕ ಗೊಳ್ಳುವ ಮೂಲಕ “ಅಂಧತ್ವ’ ವೆಂಬುದು ಸಮಸ್ಯೆಯೇ ಅಲ್ಲ ಎಂದು ತೋರಿಸಿಕೊಟ್ಟಿದ್ದಾರೆ 2021ರಲ್ಲಿ ಮಂಗಳೂರು ವಿ.ವಿ. ಯಿಂದ ಎಂಎ (ರಾಜಕೀಯ ಶಾಸ್ತ್ರ)ಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದ ಅನ್ವಿತ್ ಜಿ. ಕುಮಾರ್, ಒಂದು ತಿಂಗಳ ಕಾಲ ಮಂಗಳೂರು ವಿ.ವಿ. ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರ ಉಪನ್ಯಾಸಕ ರಾಗಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ವಾರದಿಂದೀಚೆಗೆ ವಿ.ವಿ.ಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.
ಅಖಿಲ ಭಾರತ ಅಂಧರ ಒಕ್ಕೂಟದಿಂದ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಹಾಗೂ ದ್ವಿತೀಯ ರ್‍ಯಾಂಕ್ ಪಡೆದವರಿಗೆ ನೀಡಲಾಗುವ ರಾಷ್ಟ್ರ ಮಟ್ಟದ ಕೃಷ್ಣ ಕುಮಾರಿ ಮೆಮೋರಿಯಲ್ ಪ್ರಶಸ್ತಿಯನ್ನು ಪಡೆದಿರುವ ಅನ್ವಿತ್‌ಗೆ ಅಂತಾರಾಷ್ಟ್ರೀಯ ವ್ಯವಹಾರ ವಿಷಯದಲ್ಲಿ ಪಿಎಚ್‌ಡಿ ಮಾಡುವ ಬಯಕೆ. ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ.
ಕುಂಪಲ ನಿವಾಸಿ, ಲೇಡಿಗೋಶನ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಯಾದವಿ ಅವರ ಪುತ್ರ ಅನ್ವಿತ್ 6ನೇ ತರಗತಿವರೆಗೆ ಸಾಮಾನ್ಯ (ಶೇ. 30 ಮಾತ್ರ ಅಂಧತ್ವ ಹೊಂದಿದ್ದವರು) ವಿದ್ಯಾರ್ಥಿಯಾಗಿ ಶಾಲೆಗೆ ಹೋದವರು. ಬಳಿಕ “ರೆಟಿನಲ್ ಡಿಟಾಚ್‌ಮೆಂಟ್’ ಎಂಬ ಕಾಯಿಲೆ ಯಿಂದ ಸಂಪೂರ್ಣ ಅಂಧ್ವತ್ವಕ್ಕೊಳಗಾದರು. ಶಿವಮೊಗ್ಗದ ಶಾರದಾ ದೇವಿ ವಿಕಾಸ ಕೇಂದ್ರದಲ್ಲಿ ಬ್ರೈಲ್ ಲಿಪಿಯನ್ನು ಅಭ್ಯಾಸ ಮಾಡಿ ಮಂಗಳೂರಿನ ರೋಮನ್ ಮತ್ತು ಕ್ಯಾಥರಿನ್ ಲೋಬೋ ದೃಷ್ಟಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ 7ರಿಂದ ಮತ್ತೆ ಕ್ಷಣ ಆರಂಭಿಸಿ, 2015ರಲ್ಲಿ ಶೇ. 87.5 ಅಂಕಗಳೊಂ ಗೆ ಎಸೆಸೆಲ್ಸಿ ಉತ್ತೀರ್ಣ ರಾದರು. ಗೋಕರ್ಣನಾಥ ಕಾಲೇಜಿನಲ್ಲಿ ಶೇ. 88.1 ಅಂಕಗಳೊಂದಿಗೆ ಪಿಯುಸಿ ಬಳಿಕ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಶೇ. 89.5 ಅಂಕಗಳೊಂದಿಗೆ ಬಿಎಯಲ್ಲಿ ಚಿನ್ನದ ಪದಕ ಪಡೆದಿದ್ದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕಂಪ್ಯೂಟರ್, ಮೊಬೈಲ್ ನಿರ್ವಹಣೆಯಲ್ಲಿ ನಿಪುಣರಾಗಿರುವ ಅನ್ವಿತ್ ಮಕ್ಕಳಿಗೆ ಪಾಠ ಹೇಳುವುದಕ್ಕಾಗಿ ಈ ತಂತ್ರಜ್ಞಾನದ ಸಹಾಯ ದಿಂದಲೇ ತಯಾರಿ ನಡೆಸುತ್ತೇನೆ ಎನ್ನುತ್ತಾರೆ. “ಹಂಪನಕಟ್ಟೆಯ ವಿ.ವಿ. ಕಾಲೇಜಿ ನಲ್ಲಿ ಒಂದು ತಿಂಗಳು ಅತಿಥಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಸಹೋದ್ಯೋಗಿ ಗಳು, ವಿದ್ಯಾರ್ಥಿಗಳು ಬಸ್ ಹತ್ತಿಸಿ, ಇಳಿಸುವ ವರೆಗೂ ನನ್ನ ಜತೆಯಾಗಿರುತ್ತಿದ್ದರು. ಈಗಲೂ
ಸಹಕಾರ ದೊರೆಯುತ್ತಿದೆ ಎನ್ನುತ್ತಾರೆ ಅನ್ವಿತ್.
ನನ್ನ ಸಾಧನೆಯ ಹಿಂದಿನ ಶಕ್ತಿ ತಾಯಿ. ಸ್ನಾತಕೋತ್ತರ ಪದವಿ ವರೆಗೂ ಪಾಠವನ್ನು ಮನನ ಮಾಡಿಕೊಳ್ಳುವಲ್ಲಿ ಸಹಕರಿಸಿದಾಕೆ. ಪದವಿ ಶಿಕ್ಷಣ ಸಂದರ್ಭ ಸಹಪಾಠಿಗಳು ನನಗೆ ತಂತ್ರಜ್ಞಾನ ಬಳಕೆಯ ಪರಿಚಯ ಮಾಡಿಸಿದ್ದರು. 12ನೇ ವಯಸ್ಸಿನಲ್ಲಿ ಸಂಪೂರ್ಣ ಅಂಧತ್ವ ಆವರಿಸಿ ಶಿವಮೊಗ್ಗದ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಅಲ್ಲಿನ ಶಿಕ್ಷಕರ ಶ್ರಮವನ್ನು ಕಂಡು ನಾನೂ ಉಪನ್ಯಾಸಕನಾಗಬೇಕೆಂಬ ಆಸೆ ಚಿಗುರೊಡೆದಿತ್ತು. ಮುಂದೆ ಪಿಎಚ್‌ಡಿ ಮಾಡಿ ಸರಕಾರಿ
ಕಾಲೇಜಿನಲ್ಲಿ ಉದ್ಯೋಗ ಪಡೆಯುವಗುರಿ ನನ್ನದು.
-ಅನ್ವಿತ್ ಜಿ. ಕುಮಾರ್, ಅತಿಥಿ ಉಪನ್ಯಾಸಕ