ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳುತ್ತಿರುವ ವಿವಿಧ ಕಾಮಗಾರಿಗಳನ್ನು ಶುಕ್ರವಾರ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳಿಸದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತ್ವರಿತ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಪ್ಪುಪಟ್ಟಿಗೆ ಸೇರಿಸುವುದಾಗಿಯೂ ಎಚ್ಚರಿಕೆ ನೀಡಿದರು.
ಹೊಸೂರು ವೃತ್ತ, ವಾಣಿ ವಿಲಾಸ್ ವೃತ್ತ, ಮಹದೇವ ಜವಳಿ ಗಿರಣಿ, ಕಾರವಾರ ರಸ್ತೆ, ಐಟಿ ಪಾರ್ಕ್, ದಾಜಿಬಾನ ಪೇಟೆ ಮತ್ತಿತರ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಅವ ಧಿ ಮುಗಿದು ಒಂದು ವರ್ಷವಾದರೂ ಅಂಕೋಲಾ-ಗುತ್ತಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಏಪ್ರಿಲ್ ಒಳಗಾಗಿ ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆಾªರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಸೂರು-ವಾಣಿ ವಿಲಾಸ್ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಸೂಚಿಸಿದರು. ಅತಿಕ್ರಮಣದಾರರನ್ನು ತೆರವುಗೊಳಿಸಿ ಅಲ್ಲಿರುವ ಬಸ್ ತಂಗುದಾಣದಲ್ಲಿ ಸಂಚಾರಕ್ಕೆ ವ್ಯತ್ಯಯವಾಗದಂತೆ ಬಸ್‌ಗಳ ನಿಲುಗಡೆಗೆ ಕ್ರಮವಹಿಸಬೇಕು. ಹೊಸೂರು-ಮಹದೇವ ಜವಳಿ ಗಿರಣಿ ರಸ್ತೆಯ ಸರ್ವೇ ಕಾರ್ಯ ಮಾಡಿ ಕಾಮಗಾರಿಗಳ ತ್ಯಾಜ್ಯಗಳನ್ನು ಮಹಾನಗರ ಪಾಲಿಕೆ ತೆರವುಗೊಳಿಸಬೇಕು.
ಹೊಸೂರು-ಗೋಕುಲ ರಸ್ತೆಯ ಬದಿಗಳಲ್ಲಿ ಲೋಕೋಪಯೋಗಿ ಇಲಾಖೆಯು ಪೇವರ್ಸ್ ಅಳವಡಿಸಬೇಕು. ಶಕುಂತಲಾ ಆಸ್ಪತ್ರೆ ರಸ್ತೆಯಲ್ಲಿ ಅತಿಕ್ರಮಣ ತೆರವುಗೊಳಿಸಿ, ಲಭ್ಯವಿರುವ ಸ್ಥಳ ಬಳಸಿಕೊಂಡು ರಸ್ತೆ ಅಗಲೀಕರಣ ಮಾಡಬೇಕು. ಮನೆಗಳ ಸ್ಥಳಾಂತರ ಕಾರ್ಯವನ್ನು ಸ್ಮಾರ್ಟ್ ಸಿಟಿ ಯೋಜನೆ ಅಧಿ ಕಾರಿಗಳು ತ್ವರಿತವಾಗಿ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ವಾಣಿ ವಿಲಾಸ್ ವೃತ್ತದಿಂದ ಎಡಗಡೆಗೆ ತಿರುವು ಪಡೆಯಲು ಮುಕ್ತ ಅವಕಾಶವಿರಬೇಕು. ಅಲ್ಲಿನ ಖಾಸಗಿ ಆಸ್ತಿಯ ಸರ್ವೇ ಮಾಡಿ ಕಾಮಗಾರಿ ತ್ಯಾಜ್ಯ ತೆರವು ಮಾಡಬೇಕು. ಹೆಸ್ಕಾಂ ಹಾಗೂ ಇತರೆ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯದೆ ರಸ್ತೆಗಳನ್ನು ಅಗೆದಿರುವವರ ವಿರುದ್ಧ ಕ್ರಮ ಜರುಗಿಸಿ ರಸ್ತೆಯನ್ನು ತಕ್ಷಣ ಸರಿಪಡಿಸಲು ನಿರ್ದೇಶನ ನೀಡಿದರು. ವಿದ್ಯುತ್ ಕಂಬಗಳ ತೆರವು, ವಿದ್ಯುತ್ ಮಾರ್ಗದ ಚಾರ್ಜಿಂಗ್ ಮಾಡಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಹೆಗ್ಗೇರಿ ಸೇತುವೆ ನಿರ್ಮಾಣಕ್ಕೆ ಸಮೀಕ್ಷೆ ಮಾಡಿ ಅಂದಾಜು ವೆಚ್ಚ ಸಿದ್ಧಪಡಿಸಲು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹೇಳಿದರು.
ಭಾರತ್ ಮಿಲ್ ವೃತ್ತದಲ್ಲಿ ಒಳಚರಂಡಿ ಕಾಮಗಾರಿ ತ್ವರಿತಗೊಳಿಸಬೇಕು. ಈ ವೃತ್ತದಿಂದ ಎಡಗಡೆಗೆ ಮುಕ್ತ ತಿರುವು ಪಡೆಯಲು ಅವಶ್ಯವಿರುವ ಭೂ ಸ್ವಾಧಿಧೀನಕ್ಕೆ ಮಹಾನಗರ ಪಾಲಿಕೆ ಸಮೀಕ್ಷೆ ಮಾಡಬೇಕು. ಇಂದಿರಾ ಗಾಜಿನಮನೆಯಿಂದ ಗಿರಣಿ ಚಾಳ ರಸ್ತೆಯಲ್ಲಿ ನಡೆದಿರುವ ಕಾಮಗಾರಿಯನ್ನು 15 ದಿನಗಳೊಳಗೆ ಪೂರ್ಣಗೊಳಿಸಬೇಕು. ಕಿತ್ತೂರು ಚನ್ನಮ್ಮ ವೃತ್ತದ ಹತ್ತಿರ ಹಳೇ ಪಿಬಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಿಂದ ಎಡಗಡೆಗೆ ತಿರುವು ಪಡೆಯಲು ಅವಕಾಶ ಕಲ್ಪಿಸಬೇಕು. ರಸ್ತೆಯನ್ನು ಸಮತಟ್ಟುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ದಾಜಿಬಾನ ಪೇಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಗಳನ್ನು ವೀಕ್ಷಿಸಿ, ಸಾರ್ವಜನಿಕರ ಅಹವಾಲು ಆಲಿಸಿದರು.
ಒಂದು ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ, ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ ಅಹ್ಮದ್ ಇದ್ದರು.