ಬನಹಟ್ಟಿ: ಬಯಲು ಸೀಮೆಯಲ್ಲಿ ಔಷಧಿ ಗುಣವುಳ್ಳ ಕಪ್ಪು ಗೋಧಿ ಬೆಳೆಯುವುದರ ಮೂಲಕ ಗಮನ ಸೆಳೆದಿದ್ದಾರೆ ಸಸಾಲಟ್ಟಿಯ ರೈತ ಧರೆಪ್ಪ ಕಿತ್ತೂರ. ಕಾಲತಿಪ್ಪಿ ರಸ್ತೆಯಲ್ಲಿರುವ ಅರ್ಧ ಎಕರೆ ಭೂಮಿಯಲ್ಲಿ ಒಂದೂವರೆ ಅಡಿ ಸಾಲಿನಂತೆ ಕಪ್ಪು ಗೋಧಿ ನಾಟಿ ಮಾಡಿರುವ ಅವರು 5 ಕ್ವಿಂಟಲ್ ಇಳುವರಿ ಪಡೆದಿದ್ದಾರೆ.
ಮೊದಲು ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ, ಬೇವಿನಹಿಂಡಿ ನೀಡಿ ಬೀಜೋಪಚಾರ ಮಾಡಿದ್ದು, ಒಂದು ತೆನೆ 30 ರಿಂದ 40 ಕಾಳುಗಳನ್ನು ಬಿಟ್ಟಿದ್ದು, ಒಟ್ಟು 105ರಿಂದ 110 ದಿನಗಳ ಬೆಳೆಯಾಗಿರುವ ಕಪ್ಪು ಗೋಧಿ ಬೆಳೆದಿದ್ದಾರೆ. ಮಧ್ಯಪ್ರದೇಶದಿಂದ 80 ರೂ.ಗೆ ಒಂದು ಕೆಜಿಯಂತೆ 50 ಕೆಜಿ ಗೋಧಿ ಖರೀದಿಸಿದ್ದು, ಸದ್ಯ 20 ಕೆಜಿ ಬಳಸಿದ್ದಾರೆ. ಮಾರುಕಟ್ಟೆಯಲ್ಲಿ ಸದ್ಯ ಕೆ.ಜಿಗೆ 100 ರಿಂದ 120 ರೂ.ವರೆಗೆ ಮಾರಾಟವಾಗುತ್ತಿದೆ. ಇದರಿಂದ ಅರ್ಧ ಎಕರೆಯಲ್ಲಿ ಸುಮಾರು 50 ಸಾವಿರ ರೂ. ಲಾಭ ಗಳಿಸಬಹುದು ಎನ್ನುತ್ತಾರೆ.
ಕಪ್ಪು ಗೋ ಧಿ ಪುರಾತನ ಬೆಳೆಯಾಗಿದೆ. ಸದ್ಯ ಮಧ್ಯಪ್ರದೇಶದಲ್ಲಿ ಮಾತ್ರ ಇದನ್ನು ಬೆಳೆಯುತ್ತಿದ್ದು, ಈ ಕಪ್ಪು ಗೋಧಿ ಯನ್ನು ಸದ್ಯ ಪ್ರಾಯೋಗಿಕವಾಗಿ ಬೆಳೆಯಲಾಗುತ್ತಿದೆ. ಈ ಗೋಧಿಯಲ್ಲಿ ಔಷ ಧಿಯ ಗುಣ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಪಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನು ಹೊಂದಿದೆ. ಹೀಗಾಗಿ ಬಹುತೇಕ ಪೋಷಕಾಂಶಗಳನ್ನು ಹೊಂದಿದ ಈ ಬೆಳೆಗೆ ಬಲು ಬೇಡಿಕೆ ಇದೆ.
ಡಯಾಬಿಟಿಸ್ ರೋಗಿಗಳಿಗೆ, ಕ್ಯಾನ್ಸರ್, ರಕ್ತದೊತ್ತಡ ಹತೋಟಿಗೆ, ಬಿಪಿ ಇರುವ ರೋಗಿಗಳಿಗೆ ಇದು ರಾಮಬಾಣವಾಗಿದೆ. ಇದೀಗ ಜನತೆ ಆರೋಗ್ಯದ ಕಡೆ ಹೆಚ್ಚು ಗಮನ ನೀಡಲಾಗುತ್ತಿದ್ದು ರೋಗ ನಿರೋಧಕ ಶಕ್ತಿ ಹೊಂದಿರುವ ಈ ಕಪ್ಪು ಗೋಧಿಗೆ ಬೇಡಿಕೆ ಬರಬಹುದು. ಬೇಡಿಕೆ ನೋಡಿಕೊಂಡು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಧರೆಪ್ಪ.
ಈ ಗೋಧಿ ಬೆಳೆಯುವುದರ ಜತೆಗೆ ನಾನೇ ಮೊದಲು ಇದನ್ನು ಬಳಸಿದ್ದೇನೆ. ಇದು ಉತ್ತಮವಾದ ಗೋ ಧಿಯಾಗಿದ್ದು, ಇದನ್ನು ನಾನು ಬೆಳೆಯುವುದರ ಜತೆಗೆ ಇತರೆ ರೈತರೂ ಬೆಳೆಯಲು ಪ್ರೋತ್ಸಾಹಿಸುತ್ತೇನೆ ಎನ್ನುತ್ತಾರೆ ಧರೆಪ್ಪ ಧರೆಪ್ಪ ಓದಿದ್ದು 8ನೇ ತರಗತಿ. ಆದರೆ ಅವರ ಕೃಷಿಯಲ್ಲಿನ ಪಾಂಡಿತ್ಯ ಹಾಗೂ ಸಾ ಧಿಸಿದ ಸಾಧನೆ ಅಪಾರ. ತಮ್ಮ ಸ್ವಂತ ಆನುಭವಗಳೊಂದಿಗೆ ಕೃಷಿಯಲ್ಲಿ ಹಲವಾರು ವಿನೂತನ ಪ್ರಯೋಗ ಮಾಡುತ್ತಾ ಸಾವಯವ ಕೃಷಿಯಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಲಾಭ ಗಳಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಹಲವಾರು ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಪುರಸ್ಕಾರಗಳು ಧರೆಪ್ಪ ಅವರನ್ನು ಅರಸಿ ಬಂದಿವೆ.
ಕಿರಣ ಶ್ರೀಶೈಲ ಆಳಗಿ