Advertisement

‘ಬ್ಲ್ಯಾಕ್  ಸ್ಪಾಟ್’ಆಗಿದ್ದ ಜಾಗವೀಗ ಹಸುರುಮಯ!

04:30 AM Feb 03, 2019 | |

ಮಹಾನಗರ: ಸ್ವಚ್ಛತೆಯ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಗಿಟ್ಟಿಸಿದ್ದ ಸ್ವಚ್ಛ ಮಂಗಳೂರು ನಗರದ ಕೆಲವೊಂದು ಬೀದಿಗಳಲ್ಲಿ ಇನ್ನೂ, ಕಸದ ರಾಶಿ ಕಂಡು ಬರುತ್ತಿವೆ. ಆದರೆ, ಕೊಟ್ಟಾರ ಕ್ರಾಸ್‌ ಸಮೀಪದ ರಸ್ತೆ ಬದಿ ಈ ಹಿಂದೆ ಸಾರ್ವಜನಿಕರು ಕಸ ಹಾಕಿ ‘ಬ್ಲಾ ್ಯಕ್‌ಸ್ಪಾಟ್’ ಆಗಿದ್ದ ಪ್ರದೇಶದಲ್ಲೀಗ ಕಟ್ಟೆ ನಿರ್ಮಿಸಿ ಗಿಡ ನೆಡಲಾಗಿದೆ. ಇದರೊಂದಿಗೆ ಸ್ವಚ್ಛ ಪರಿಸರದ ಜತೆಗೆ, ಪರಿಸರ ಜಾಗೃತಿಗೆ ಮಹತ್ವ ನೀಡಲಾಗುತ್ತಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Advertisement

ಕೆಲವು ತಿಂಗಳುಗಳಿಂದಲೇ ಕೊಟ್ಟಾರ ಕ್ರಾಸ್‌ ಬಳಿಯ ಸಿಎಫ್‌ಎಎಲ್‌ ಶಿಕ್ಷಣ ಸಂಸ್ಥೆ ಬಳಿ ಇದ್ದ ತೊಟ್ಟಿಯೊಂದರಲ್ಲಿ ಕಸದ ವಾಸನೆ ಬರುತ್ತಿತ್ತು. ಸುತ್ತಮುತ್ತಲಿನ ಸಾರ್ವಜನಿಕರು ಇದೇ ತೊಟ್ಟಿಗೆ ಕಸ ಹಾಕುತ್ತಿದ್ದರು. ಕೆಲವು ಮಂದಿ ವಾಹನಗಳಲ್ಲಿ ಬಂದು ಪ್ಲಾಸ್ಟಿಕ್‌ ಚೀಲದಲ್ಲಿ ಕಸ ಬಿಸಾಡುತ್ತಿದ್ದರು. ಕಸದ ರಾಶಿ ದಿನಗಟ್ಟಲೇ ಅದರಲ್ಲಿಯೇ ಕೊಳೆತು ಅಕ್ಕ‌ಪಕ್ಕದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಸ್ಥಳದಲ್ಲಿತ್ತು. ದಿನನಿತ್ಯ ಅದೇ ದಾರಿಯಲ್ಲಿ ಸಾಗುತ್ತಿದ್ದ ಆ್ಯಂಟನಿ ಕಸದ ವಾಹನದ ಕಾರ್ಮಿಕರು ಅಲ್ಲಿ ರಾಶಿಬಿದ್ದಿದ್ದ ಕಸ ಕೊಂಡೊಯ್ಯುತ್ತಿರಲಿಲ್ಲ.

ಈ ಬಗ್ಗೆ ಸುತ್ತಮುತ್ತಲಿನ ಮಂದಿ ಸ್ಥಳೀಯ ಕಾರ್ಪೊರೇಟರ್‌ ರಜನೀಶ್‌ ಅವರ ಬಳಿ ದೂರು ನೀಡಿದಾಗ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು. ಆಗ ಹೊಳೆದಿದ್ದೇ ಈ ಹೊಸ ಕಲ್ಪನೆ. ಸಾರ್ವಜನಿಕರು ಹಾಕಿದ ಕಸವನ್ನು ಪಾಲಿಕೆ ತೆಗೆಸಿದರೂ ಮತ್ತೆ ಅದೇ ಜಾಗದಲ್ಲಿ ಕಸ ಬಿಸಾಡುತ್ತಾರೆ. ಇದಕ್ಕೆ ಅಂತ್ಯಹಾಡಲು ಕಸ ಹಾಕುವ ಜಾಗದಲ್ಲಿ ಗಿಡ ನೆಡುವ ಯೋಚನೆ ಮಾಡಿದರು. ಅದಕ್ಕೆ ತಕ್ಕಂತೆ ಸಾರ್ವಜನಿಕರ ಸಹಕಾರದಿಂದ ಕಸ ಹಾಕುತ್ತಿದ್ದ ತೊಟ್ಟಿಗೆ ಮಣ್ಣು ತುಂಬಿಸಿ ಸುತ್ತಲೂ ಗಿಡ ನೆಡಲಾಗಿದೆ. ಇದರ ನಡುವೆ ಬಿಂದಿಗೆ ಹಿಡಿದುಕೊಂಡ ನಾರಿಯ ಮೂರ್ತಿ ಇರಿಸಲಾಗಿದ್ದು, ಗಿಡಗಳಿಗೆ ನೀರು ಹಾಯಿಸಿ ಪರಿಸರ ಸಂರಕ್ಷಿಸಿ ಎಂಬ ಸಂದೇಶ ಸಾರಲಾಗಿದೆ.

ಆಯೋಜಕರಲ್ಲೊಬ್ಬರಾದ ನಿತೇಶ್‌, ನೆಟ್ಟಿರುವ ಗಿಡಗಳು ಆಲಂಕಾರಿಕ ಗಿಡಗಳಾದ್ದರಿಂದ ಹೆಚ್ಚು ಎತ್ತರಕ್ಕೆ ಬೆಳೆಯುವುದಿಲ್ಲ. ಸ್ಥಳೀಯರೊಬ್ಬರು ಪ್ರತೀ ದಿನ ಗಿಡಕ್ಕೆ ನೀರು ಹಾಕಿ ಆರೈಕೆ ಮಾಡುವ ಹೊಣೆ ಹೊತ್ತಿದ್ದಾರೆ.

ನಗರದ ಬೇರೀಸ್‌ ಪಬ್ಲಿಕ್‌ ಶಾಲೆಯ ಬಳಿ ಕೂಡ ಸಾರ್ವಜನಿಕರು ಇದೇ ರೀತಿ ಕಸ ಬಿಸಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ಕಾರ್ಪೊರೇಟರ್‌ ರಜನೀಶ್‌ ಅವರು ಅದೇ ಜಾಗದಲ್ಲಿ ಗಿಡ ನೆಟ್ಟಿದ್ದರು. ಬಳಿಕ ಆ ಗಿಡದ ನಿರ್ವಹಣೆಯ ಜವಾಬ್ದಾರಿ ಶಾಲೆ ಹೊತ್ತಿದೆ ಎಂದಿದ್ದಾರೆ.

Advertisement

ಸ್ವಚ್ಛ ಪರಿಸರಕ್ಕೆ ಆದ್ಯತೆ
ರಸ್ತೆ ಸಹಿತ ಎಲ್ಲೆಂದರಲ್ಲಿ ಕಸ ಹಾಕಬಾರದೆಂದು ಸಾರ್ವಜನಿಕರ ಮನಸ್ಸು ಪರಿವರ್ತನೆಯಾಗಬೇಕಿದೆ. ಕಸ ಹಾಕುತ್ತಿದ್ದ ಕೆಲವು ಪ್ರದೇಶಗಳನ್ನು ಗುರುತಿಸಿ ಕಟ್ಟೆ ಕಟ್ಟಿ ಗಿಡ ನೆಟ್ಟಿದ್ದೇವೆ. ಇದರೊಂದಿಗೆ ವಾರ್ಡ್‌ನಲ್ಲಿ ಪರಿಸರ ಜಾಗೃತಿ, ಸ್ವಚ್ಛ ಪರಿಸರಕ್ಕೆ ಆದ್ಯತೆ ಕೊಡುತ್ತಿದ್ದೇನೆ.
 ರಜನೀಶ್‌,
ಸ್ಥಳೀಯ ಕಾರ್ಪೊರೇಟರ್‌

Advertisement

Udayavani is now on Telegram. Click here to join our channel and stay updated with the latest news.

Next