Advertisement

ಫೆಡರರ್‌, ಶರಪೋವಾ ಪತನ

06:00 AM Sep 05, 2018 | Team Udayavani |

ನ್ಯೂಯಾರ್ಕ್‌: ಐದು ಬಾರಿಯ ಚಾಂಪಿಯನ್‌ ಸ್ವಿಸ್‌ನ ರೋಜರ್‌ ಫೆಡರರ್‌ ಮತ್ತು ರಶ್ಯದ ಮರಿಯಾ ಶರಪೋವಾ ಅವರು ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಕೂಟದ ನಾಲ್ಕನೇ ಸುತ್ತಿನಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ. ಗ್ರ್ಯಾನ್‌ ಸ್ಲಾಮ್‌ ಕೂಟದ ನಾಲ್ಕನೇ ಸುತ್ತಿನಲ್ಲಿ ಇದೇ ಮೊದಲ ಬಾರಿ ಆಡಿದ ಆಸ್ಟ್ರೇಲಿಯದ ಜಾನ್‌ ಮಿಲ್ಮನ್‌ ಅವರು 3-6, 7-5, 7-6 (9-7), 7-6 (7-3) ಸೆಟ್‌ಗಳಿಂದ ಫೆಡರರ್‌ಗೆ ಆಘಾತ ನೀಡಿದರು. ಇದರಿಂದಾಗಿ ಎರಡು ಬಾರಿಯ ವಿಜೇತ ನೊವಾಕ್‌ ಜೊಕೋವಿಕ್‌ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಫೆಡರರ್‌ ಅವರನ್ನು ಎದುರಿಸುವುದು ತಪ್ಪಿದೆ. ಎರಡನೇ ಮತ್ತು ಮೂರನೇ ಸೆಟ್‌ನಲ್ಲಿ ಸೆಟ್‌ ಪಾಯಿಂಟ್‌ ಪಡೆದಿದ್ದ ಫೆಡರರ್‌ ತನ್ನದೇ ತಪ್ಪಿನಿಂದಾಗಿ ಪಂದ್ಯವನ್ನು ಕಳೆದುಕೊಂಡರು. ಪಂದ್ಯದಲ್ಲಿ 77 ಅನಗತ್ಯ ತಪ್ಪು ಮಾಡಿದ ಫೆಡರರ್‌ ಅವರು ಮಿಲ್ಮನ್‌ ಅವರ ಮನಮೋಹಕ ಆಟದೆದುರು ಮಂಕಾದರು. ಫೆಡರರ್‌ 2013ರ ಬಳಿಕ ಇದೇ ಮೊದಲ ಸಲ ಬೇಗನೇ ಕೂಟದಿಂದ ನಿರ್ಗಮಿಸಿದ್ದಾರೆ. 2013ರಲ್ಲಿಯೂ ಅವರು ನಾಲ್ಕನೇ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಟಾಮಿ ರಾಬ್ರೆಡೊ ಅವರಿಗೆ ಶರಣಾಗಿದ್ದರು. 

Advertisement

ನನಗೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದು 29ರ ಹರೆಯದ ಮಿಲ್ಮನ್‌ ಪ್ರತಿಕ್ರಿಯೆ ನೀಡಿದರು. ನನಗೆ ರೋಜರ್‌ ಅವರ ಬಗ್ಗೆ ಬಹಳ ಗೌರವವಿದೆ. ಅವರು ಟೆನಿಸ್‌ಗೆ ಸರ್ವಸ್ವವನ್ನು ಕೊಟ್ಟಿದ್ದಾರೆ. ಅವರು ನನ್ನ ಪಾಲಿನ ಹೀರೋ ಎಂದು ಮಿಲ್ಮನ್‌ ತಿಳಿಸಿದರು. ಅವರಿಂದು ಖಂಡಿತವಾಗಿಯೂ ಶ್ರೇಷ್ಠ ನಿರ್ವಹಣೆ ನೀಡಿಲ್ಲ. ಆದರೆ ಅದನ್ನು ನಾನು ಪಡೆದುಕೊಂಡೆ ಎಂದರು ಮಿಲ್ಮನ್‌.

ನವಾರೊ ಸಂಭ್ರಮ
ಸ್ಪೇನ್‌ನ ಬರ್ತ್‌ಡೆ ಹುಡುಗಿ ಕಾರ್ಲಾ ಸೂರೆಜ್‌ ನವಾರೊ ಅವರು ನೇರ ಸೆಟ್‌ಗಳಿಂದ 2006ರ ಚಾಂಪಿಯನ್‌ ಮರಿಯಾ ಶರಪೋವಾ ಅವರನ್ನು ಉರುಳಿಸಿದರು. ಶರಪೋವಾ 2012ರ ಬಳಿಕ ಇದೇ ಮೊದಲ ಸಲ ಇಲ್ಲಿ ಕ್ವಾರ್ಟರ್‌ಫೈನಲ್‌ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ 4-6, 3-6 ಸೆಟ್‌ಗಳ ಸೋಲಿನಿಂದ ತೀವ್ರ ಆಘಾತಕ್ಕೆ ಒಳಗಾದರು. ಹೊನಲು ಬೆಳಕಿನಲ್ಲಿ ಆಡಿದ 23 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಸಾಧನೆಗೈದಿದ್ದ ಶರಪೋವಾ ಮೊದಲ ಬಾರಿ ಸೋತರು. ಭರ್ಜರಿ ಗೆಲುವಿನ ಮೂಲಕ ನವಾರೊ 30ನೇ ಹುಟ್ಟುಹಬ್ಬವನ್ನು ಆಚರಿಸಿದರು. ಅವರು 2013ರಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದರು.

ಕ್ವಾರ್ಟರ್‌ಫೈನಲ್‌ನಲ್ಲಿ ನವಾರೊ ಅವರು 2017ರ ರನ್ನರ್‌ ಅಪ್‌ ಮ್ಯಾಡಿಸನ್‌ ಕೀಸ್‌ ಅವರನ್ನು ಎದುರಿಸಲಿದ್ದಾರೆ. ಮ್ಯಾಡಿಸನ್‌ ಅಮೆರಿಕದವರಾದ ಕಾರಣ ಪ್ರೇಕ್ಷಕರು ಅವರಿಗೆ ಪೂರ್ಣ ಬೆಂಬಲ ನೀಡಲಿದ್ದಾರೆ. ನಾನು ಕೂಡ ಆಕೆಯ ಜತೆ ಆಡಿದ್ದೇನೆ. ಅವರ ಸರ್ವ್‌ ಬಲಶಾಲಿಯಾಗಿದೆ ಎಂದು ನವಾರೊ ಹೇಳಿದರು. ಮ್ಯಾಡಿಸನ್‌ ಕೀಸ್‌ ಅವರು ಇನ್ನೊಂದು ಪಂದ್ಯದಲ್ಲಿ ಡೊಮಿನಿಕಾ ಸಿಬುಲ್ಕೋವಾ ಅವರನ್ನು 6-1, 6-3 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ ತಲುಪಿದರು.

Advertisement

Udayavani is now on Telegram. Click here to join our channel and stay updated with the latest news.

Next