Advertisement

ತವರಿಗೆ ಬಂದ ಖೇಣಿಗೆ ಸ್ವಪಕ್ಷೀಯರಿಂದಲೇ ಕಪ್ಪು ಪಟ್ಟಿ ಪ್ರದರ್ಶನ

06:30 AM Mar 12, 2018 | Team Udayavani |

ಬೀದರ: ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಮೊದಲ ಬಾರಿಗೆ ಬೀದರಗೆ ಆಗಮಿಸಿದ ಶಾಸಕ, ನೈಸ್‌ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರೇ ಕಪ್ಪು ಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆಯಿತು.

Advertisement

ಮೆರವಣಿಗೆ ಮೂಲಕ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಆಗಮಿಸಿದ ಶಾಸಕ ಖೇಣಿ ವಿರುದ್ಧ 25ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮಾಜಿ ಸಿಎಂ ದಿ| ಧರ್ಮಸಿಂಗ್‌ ಅಳಿಯ ಚಂದ್ರಾಸಿಂಗ್‌ ಆಕ್ರೋಶ ವ್ಯಕ್ತಪಡಿಸಿದರು. ಖೇಣಿ ಹಠಾವೋ, ಕಾಂಗ್ರೆಸ್‌ ಬಚಾವೋ ಘೋಷಣೆ ಕೂಗಿದ ಕಾರ್ಯಕರ್ತರು, ಬೀದರ ದಕ್ಷಿಣ ಕ್ಷೇತ್ರ ನಿರ್ಲಕ್ಷಿಸಿದವರನ್ನು ಪಕ್ಷ ಸೇರ್ಪಡೆ ಮಾಡಿಕೊಂಡಿದ್ದು, ಇಂದು ನಮಗೆ ಕರಾಳ ದಿನವಾಗಿದೆ ಎಂದು ಕಿಡಿ ಕಾರಿದರು.

ಈ ಮಧ್ಯೆ, ನಗರದ ಹೊರವಲಯದ ಶಹಾಪುರ ಗೇಟ್‌ನಿಂದ ಕಾಂಗ್ರೆಸ್‌ ಕಚೇರಿಗೆ ಖೇಣಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ, ಅವರ ಅಭಿಮಾನಿಯೊಬ್ಬ 20 ಮತ್ತು 50 ರೂ.ಗಳ ನೋಟುಗಳನ್ನು ಜನರ ಮೇಲೆ ಎರಚಿದರು. ಮೆರವಣಿಗೆ ಮುನ್ನ ಶಹಾಪುರ ಗೇಟ್‌ನ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಖೇಣಿ ಅವರು ಶೂ ಹಾಕಿಕೊಂಡೇ ಹೋಗಿದ್ದಕ್ಕೆ ಕ್ರೈಸ್ತ ಧರ್ಮಿಯರು ಆಕ್ರೋಶ ವ್ಯಕ್ತಪಡಿಸಿದರು.

ವಿವಾದ್ಮಕ ಹೇಳಿಕೆ ನೀಡಿದ ಖೇಣಿ: ಸನ್ಮಾನ ಸ್ವೀಕರಿಸಿ ಮಾತನಾಡಿದ ಖೇಣಿ,  ದೃಶ್ಯ ಮಾಧ್ಯಮದವರು ಟಿಆರ್‌ಪಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಸ್ವತಃ ತಮ್ಮ ತಾಯಿಯನ್ನೂ ಮಾರಾಟ ಮಾಡುತ್ತಾರೆ ಎನ್ನುವ ಮೂಲಕ ವಿವಾದ ಹುಟ್ಟು ಹಾಕಿದರು. ಬೀದರ ದಕ್ಷಿಣ ಕ್ಷೇತ್ರದಲ್ಲಿ 813 ಕಿ.ಮೀ.ರಸ್ತೆ ನಿರ್ಮಿಸಿದ್ದೇನೆ. ಆದರೆ, ನಿರ್ಣಾ ಗ್ರಾಮದ ಒಂದು ಕಿ.ಮೀ.ಹಾಳಾದ ರಸ್ತೆ ತೋರಿಸುವ ಮಾಧ್ಯಮದವರಿಗೆ ಕ್ಷೇತ್ರದ ಉತ್ತಮ ರಸ್ತೆ ಕಾಣಿಸುವುದಿಲ್ಲ. ಅವರು ಟಿಆರ್‌ಪಿಗಾಗಿ ಏನು ಬೇಕಾದರೂ ಮಾಡುತ್ತಾರೆ, ತಾಯಿಯನ್ನೂ ಮಾರಾಟ ಮಾಡುತ್ತಾರೆ ಎಂದು ಹೇಳಿದರು. ತಕ್ಷಣ ಎಚ್ಚೆತ್ತುಕೊಂಡು, ತಪ್ಪಾಯ್ತು ಎಂದರು.

ಖೇಣಿ ಸೇರ್ಪಡೆಯಿಂದ ಕಾಂಗ್ರೆಸ್‌ ಬಲಿಷ್ಠ: ಖಂಡ್ರೆ
ಬೀದರ
: ಅಶೋಕ ಖೇಣಿ ದೂರದೃಷ್ಟಿ ಹೊಂದಿರುವ ನಾಯಕ. ಶಾಸಕರಾಗಿ, ಉದ್ದಿಮೆದಾರರಾಗಿ ಜನಪರ ಕೆಲಸ ಮಾಡಿದ್ದಾರೆ. ಅವರ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತಷ್ಟು ಬಲಿಷ್ಠವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಖೇಣಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ಸಿದ್ಧಾಂತ, ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಉತ್ತಮ ಆಡಳಿತವನ್ನು ಒಪ್ಪಿಕೊಂಡು ಅವರು ಕಾಂಗ್ರೆಸ್‌ ಸೇರಿದ್ದಾರೆ. ಖೇಣಿ ಬೀದರ ದಕ್ಷಿಣ ಕ್ಷೇತ್ರದ ಶಾಸಕರಾಗಿ  ದಕ್ಷತೆಯಿಂದ ಕೆಲಸ ಮಾಡಿದ್ದು, ಅವರಿಗೆ ಜನ ಬೆಂಬಲ ಸಿಕ್ಕೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಅಶೋಕ ಖೇಣಿಯನ್ನು ಕಾಂಗ್ರೆಸ್‌ ಪಕ್ಷಕ್ಕೆ ಯಾರು, ಯಾವ ಕಾರಣಕ್ಕೆ ಸೇರಿಸಿಕೊಂಡರೋ ನನಗೆ ಗೊತ್ತಿಲ್ಲ. ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ನನ್ನೊಂದಿಗೆ ಯಾರೂ ಚರ್ಚೆ ನಡೆಸಿಲ್ಲ. ಅಷ್ಟೇ ಏಕೆ ಗಮನಕ್ಕೂ ತಂದಿಲ್ಲ. ಖೇಣಿ ಸೇರ್ಪಡೆಯಿಂದ ಪಕ್ಷಕ್ಕೆ ಲಾಭವಾಗಲಿದೆಯೇ ಎಂಬುದನ್ನು ಸೇರಿಸಿಕೊಂಡವರನ್ನೇ ಕೇಳಬೇಕು.
–  ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next