Advertisement

ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಕೇಂದ್ರದಿಂದ 19,420 ವಯಲ್ಸ್ ಎಂಫೋಟೆರಿಸಿನ್-ಬಿ ಹಂಚಿಕೆ :DVS

10:44 PM May 24, 2021 | Team Udayavani |

ನವದೆಹಲಿ : ಕಪ್ಪುಶಿಲೀಂಧ್ರ ರೋಗದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ಇಂದು ರಾಜ್ಯಗಳಿಗೆ 19,420 ಸೀಸೆ (ವಯಲ್ಸ್) ಲಿಪೋಸೊಮಾಲ್ ಎಂಫೋಟೆರಿಸಿನ್-ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ.ಸದಾನಂದ ಗೌಡ ಹೇಳಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿದ ಅವರು ಕರ್ನಾಟಕಕ್ಕೆ 1030 ವಯಲ್ಸ್ ಒದಗಿಸಲಾಗಿದೆ, ಮೊನ್ನೆ 1270 ವಯಲ್ಸ್ ಹಾಗೂ ಅದಕ್ಕೂ ಮುನ್ನ ಮೂರು ಕಂತುಗಳಲ್ಲಿ 1660 ವಯಲ್ಸ್ ಒದಗಿಸಲಾಗಿತ್ತು ಎಂದರು.

ದೇಶದಲ್ಲಿಯೇ ತ್ವರಿತವಾಗಿ ಲಿಪೋಸೊಮಾಲ್ ಎಂಫೋಟೆರಿಸಿನ್-ಬಿ ಉತ್ಪಾದನೆ ಹೆಚ್ಚಿಸಲು ತುರ್ತು ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ದೇಶದ ಐದು ಫಾರ್ಮಾ ಕಂಪನಿಗಳು ಇದರ ಉತ್ಪಾದನೆ ಮಾಡುತ್ತಿದ್ದು ಈಗ ಹೊಸದಾಗಿ ಮತ್ತೆ ಐದು ಕಂಪನಿಗಳಿಗೆ ಲೈಸನ್ಸ್ ನೀಡಲಾಗಿದೆ. ಈ ಸ್ವದೇಶಿ ಕಂಪನಿಗಳು ಮೇ ತಿಂಗಳಲ್ಲಿ 1.63 ಲಕ್ಷ ಸೀಸೆ ಹಾಗೂ ಜೂನ್ ತಿಂಗಳಲ್ಲಿ 2.55 ಸೀಸೆ ಲಿಪೋಸೊಮಾಲ್ ಎಂಫೋಟೆರಿಸಿನ್ ಬಿ ಉತ್ಪಾದನೆ ಮಾಡಲಿವೆ ಎಂದರು.

ಇದನ್ನೂ ಓದಿ :ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ಹೆಚ್ಚಿಸಲು ಸಚಿವ ಅರವಿಂದ ಲಿಂಬಾವಳಿ ಸೂಚನೆ

ಹಾಗೆಯೇ ಮೈಲಾನ್ ಕಂಪನಿ ಮೂಲಕ ಮೇ ತಿಂಗಳ ಒಳಗಾಗಿ 3.63 ಲಕ್ಷ ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸಿನ್-ಬಿ ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಸ್ವಲ್ಪಭಾಗ ಈಗಾಗಲೇ ಭಾರತ ತಲುಪಿದೆ. ಯೋಜಸಿದಂತೆ ಸಾಗಣೆಯಲ್ಲಿ ಏನೂ ವ್ಯತ್ಯಾಸವಾಗದಿದ್ದರೆ ಉಳಿದ ಬಹುತೇಕ ಭಾಗ ವಾರದೊಳಗೆ ಭಾರತ ತಲುಪುವುದೆಂದು ನಿರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.

Advertisement

ಇನ್ನು, ಜೂನ್ ತಿಂಗಳಲ್ಲಿ 3.15 ಲಕ್ಷ ವಯಲ್ಸ್ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ 2.55 ಲಕ್ಷ ವಯಲ್ಸ್ ಸ್ವದೇಶಿ ಉತ್ಪಾದನೆ ಸೇರಿ ಜೂನ್ ತಿಂಗಳಲ್ಲಿ 5.7 ಲಕ್ಷ ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸಿನ್-ಬಿ ಲಭ್ಯವಿರಲಿವೆ. ಅಗತ್ಯವಾದರೆ ಇನ್ನೂ ಹೆಚ್ಚು ಆಮದು ಮಾಡಿಕೊಳ್ಳುತ್ತೇವೆ. ಸ್ವದೇಶಿ ಉತ್ಪಾದನೆಯೂ ಹೆಚ್ಚಾಗುತ್ತಿದ್ದು ಇದರ ಹಂಚಿಕೆ ನಿರಂತರವಾಗಿ ನಡೆಯಲಿದೆ. ಕಪ್ಪುಶಿಲೀಂದ್ರ ಹಳೆ ಕಾಯಿಲೆಯಾಗಿದ್ದು ಇದಕ್ಕೆ ಸಾಕಷ್ಟು ಪರ್ಯಾಯ ಔಷಧಗಳು ಲಭ್ಯವಿವೆ. ಹಾಗಾಗಿ ಇದಕ್ಕೆ ಔಷಧ ಕೊರತೆಯಾಗಬಹುದು ಎಂದು ಗಾಬರಿಗೊಳಗಾಗಬೇಡಿ ಎಂದು ಸಚಿವರು ಸಾರ್ವಜನಿಕರಲ್ಲಿ ವಿನಂತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next