ಬೆಂಗಳೂರು: ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿತರ ಸಂಖ್ಯೆ 4,000ದ ಗಡಿ ಸಮೀಪಿಸಿದ್ದು, ಮೂರೂವರೆ ತಿಂಗಳಲ್ಲಿ 441 ಮಂದಿ ಅಸುನೀಗಿದ್ದಾರೆ.
ರಾಜ್ಯದಲ್ಲಿ ಮೊದಲ ಬ್ಲ್ಯಾಕ್ ಫಂಗಸ್ ಪ್ರಕರಣ ವರದಿಯಾಗಿ ಗುರುವಾರಕ್ಕೆ ನೂರು ದಿನ ತುಂಬಿದೆ. ಆದರೆ, ಇಂದಿಗೂ ಫಂಗಸ್ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ಸೇರಿಸಿಲ್ಲ!
ಮೊದಲ ಕಪ್ಪು ಶಿಲೀಂಧ್ರ ಪ್ರಕರಣ ಮೇ 10ರಂದು ಬೆಂಗಳೂರಿನಲ್ಲಿ ವರದಿಯಾಯಿತು. ಮೇ ಅಂತ್ಯಕ್ಕೆ 1,250 ಮಂದಿಯಲ್ಲಿ ಕಾಣಿಸಿಕೊಂಡಿದ್ದು, 41 ಸೋಂಕಿತರು ಮಾತ್ರ ಸಾವಿಗೀಡಾಗಿದ್ದರು. ಆದರೆ, ಜೂನ್, ಜುಲೈ ಸರಾಸರಿ ಒಂದು ಸಾವಿರ ಮಂದಿಗೆ ಫಂಗಸ್ ತಗಲಿತ್ತು. ಬುಧವಾರ (ಆ.18) ಅಂತ್ಯಕ್ಕೆ ಒಟ್ಟಾರೆ ಸೋಂಕಿತರ ಸಂಖ್ಯೆ 3,836ಕ್ಕೆ ಹೆಚ್ಚಳವಾಗಿದೆ.
ಸದ್ಯ ಹೊಸ ಕೊರೊನಾ ಪ್ರಕರಣಗಳು 25,000ದಿಂದ 1,000ದ ಆಸುಪಾಸಿಗೆ ಇಳಿಮುಖವಾದರೂ ಕಪ್ಪು ಶಿಲೀಂಧ್ರ ಪ್ರಕರಣಗಳು ನಿಂತಿಲ್ಲ. ಪ್ರತಿ ವಾರವೂ ನಿತ್ಯ 15ರಿಂದ 20 ಪ್ರಕರಣಗಳು ವರದಿಯಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.
2,062 ಸಾವಿರಕ್ಕೂ ಅಧಿಕ ಮಂದಿ ಕಣ್ಣುಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, 62 ಮಂದಿ ಶಸ್ತ್ರಚಿಕಿತ್ಸೆಗೆ ಕಾಯುತ್ತಿದ್ದಾರೆ. ಸೋಂಕಿತರಲ್ಲಿ 1,819 ಮಂದಿ ( ಶೇ.47ರಷ್ಟು) ಗುಣಮುಖರಾಗಿದ್ದು. 1,148 ಮಂದಿ ಆಸ್ಪತ್ರೆಯಲ್ಲಿದ್ದಾರೆ.
ಕಪ್ಪು ಶಿಲೀಂಧ್ರ ಸೋಂಕಿತರಲ್ಲಿ ಬಹುತೇಕರು ಕೊರೊನಾ ಲಸಿಕೆ ಪಡೆದಿಲ್ಲ. ಲಸಿಕೆ ಪಡೆದು ಸೋಂಕು ತಗಲಿರುವ ಕೆಲವರಲ್ಲಿ ಸೋಂಕಿನ ತೀವ್ರತೆ ಸಾಕಷ್ಟು ಕಡಿಮೆ. ಕೈಗಾರಿಕಾ ಆಕ್ಸಿಜನ್‌ನಿಂದ ಸೋಂಕು ಹರಡುವುದಿಲ್ಲ, ರೋಗನಿರೋಧಕ ಶಕ್ತಿ ಕುಂಠಿತವೇ ಕಾರಣವಾಗಿದ್ದು, ಲಸಿಕೆಯಿಂದ ಫಂಗಸ್ ಹಾನಿಯಿಂದಲೂ ತಪ್ಪಿಸಿಕೊಳ್ಳಬಹುದು.
– ಡಾ| ಆರ್.ಅಂಬಿಕಾ, ಮುಖ್ಯಸ್ಥರು, ವಿಕ್ಟೋರಿಯಾ ಪ್ರಯೋಗಾಲಯ