ಹುಬ್ಬಳ್ಳಿ: ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರ ಮನೆಯಲ್ಲಿ ಬರೋಬ್ಬರಿ 7 ಸಾವಿರ ಸೀರೆ, ಈ ಸೀರೆಗಳ ಒಳಗೆ 2,000 ರೂ. ಮುಖಬೆಲೆಯ 4 ಲಕ್ಷ ರೂ. ಸಿಕ್ಕಿದೆ ! ಹೌದು, ಮಂಗಳವಾರ ಎಸಿಬಿ ಅಧಿಕಾರಿಗಳು ವಿಶ್ವೇಶ್ವರ ನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕರಿಯಪ್ಪ ನಿಂಗಪ್ಪ ಕರ್ನಾಳ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಈ ಪ್ರಮಾಣದ ಸೀರೆ ಕಂಡು ದಂಗು ಬಡಿದು ಹೋಗಿದ್ದಾರೆ. ಸುಮಾರು 300 ರೂ.ನಿಂದ 20 ಸಾವಿರ ರೂ.ವರೆಗಿನ ಬೆಲೆಯ ಸೀರೆ ಗಳಿದ್ದು, ಇವುಗಳ ಮೊತ್ತ 2 ಕೋಟಿ ರೂ. ವರೆಗೆ ಆಗಬಹುದಾಗಿದೆ ಎಂದು ಅಂದಾಜಿಸಲಾಗುತ್ತಿದೆ.
ಅಲ್ಮೇರಾಗಳಲ್ಲಿ ಜವುಳಿ ಅಂಗಡಿಗಳಿ ಗಿಂತಲೂ ಹೆಚ್ಚು ಪ್ರಮಾಣದ ಸೀರೆಗಳನ್ನು ಜೋಡಿಸಿಡಲಾಗಿತ್ತು. ಮೂಲತಃ ಬೆಳಗಾವಿ ಜಿಲ್ಲೆಯವರಾದ ಕರಿಯಪ್ಪ ಅವರ ಪತ್ನಿ ಬಟ್ಟೆಗಳ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಸಿಲುಕಿದ್ದ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಬಳಿ 10 ಸಾವಿರಕ್ಕೂ ಹೆಚ್ಚು ಸೀರೆಗಳು ಪತ್ತೆ ಯಾಗಿದ್ದವು. ಅವರಿಗೆ ಸವಾಲೊಡ್ಡುವ ರೀತಿ ವಾಣಿಜ್ಯ ಇಲಾಖೆ ಸಹಾಯಕ ಆಯುಕ್ತರ ಪತ್ನಿ ಬಳಿ ಸೀರೆ ಸಂಗ್ರಹ ಲಭ್ಯವಾಗಿವೆ.
ಸೀರೆ ಮಧ್ಯೆ ನೋಟು: ಕರಿಯಪ್ಪ ನಿವಾಸದ ಮೇಲೆ ದಾಳಿ ಮಾಡಿದ ಅಧಿ ಕಾರಿಗಳು ಅಲ್ಮೇರಾಗಳಲ್ಲಿ ತಡಕಾಡಲು ಆರಂಭಿಸಿದಾಗ ಶಾಂತಾ ಕರ್ನಾಳಗೆ ಸೇರಿದ ಸಾವಿರಾರು ಸೀರೆಗಳು ಪತ್ತೆಯಾಗಿದ್ದಲ್ಲದೆ, ಈ ಸೀರೆಗಳ ಮಧ್ಯೆ 2,000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಇರಿಸಿದ್ದು ಕಂಡು ಬಂದಿತ್ತು. ಸೀರೆಗಳಲ್ಲಿ ಇರಿಸಿದ್ದ ಸುಮಾರು 4 ಲಕ್ಷ ರೂ. ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಮನೆಯಲ್ಲಿ ಒಟ್ಟು 7 ಲಕ್ಷ ರೂ. ವಶಪಡಿಸಿಕೊಂಡಿದ್ದು, ಸೀರೆಗಳ ನಡುವೆಯೇ ನಾಲ್ಕು ಲಕ್ಷವಿತ್ತು ಎನ್ನಲಾಗಿದೆ.