Advertisement

ಕಪ್ಪು-ಬಿಳುಪು ಪ್ರಪಂಚ

06:30 AM Oct 13, 2017 | |

ಇಪ್ಪತ್ತೂಂದನೆಯ ಶತಮಾನದಲ್ಲಿರುವ ನಾವು ಪಠ್ಯಪುಸ್ತಕಗಳಲ್ಲಿ ವರ್ಣಭೇದ ನೀತಿಯ ಬಗ್ಗೆ ಓದಿ ತಿಳಿದಿರುತ್ತೇವೆ. ಆದರೆ, ಅದೇ ರೀತಿಯ ಇನ್ನೊಂದು ಮುಖವನ್ನು ದಿನನಿತ್ಯ ನಮ್ಮ ಸಮಾಜದಲ್ಲಿ ನೋಡುತ್ತಿರುತ್ತೇವೆ.

Advertisement

ಬಣ್ಣ ಕೇವಲ ಬಾಹ್ಯ ಸೌಂದರ್ಯವೇ  ಹೊರತು ಅಂತರಂಗದ್ದಲ್ಲ. ನಮ್ಮ ಸಮಾಜ ಎಷ್ಟು ಮುಂದುವರಿದ್ದಿದ್ದರೂ ಬಣ್ಣದ ಮೂಲಕ ವ್ಯಕ್ತಿಯನ್ನು ಅಳೆಯುವುದು ನಿಲ್ಲಿಸಿಲ್ಲ. ಬಣ್ಣ ಇಂದಲ್ಲ ನಾಳೆ ಮಾಸಿ ಹೋಗುತ್ತದೆ. ಆದರೆ ಅಂತರಂಗ ಸೌಂದರ್ಯ ಮನುಷ್ಯ ಸತ್ತಮೇಲೂ ಅವನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.

ನಮ್ಮ ಜನರು ಈ ವಿಷಯದಲ್ಲಿ ಎಳೆ ಕಂದಮ್ಮಗಳನ್ನೂ ಬಿಟ್ಟಿಲ್ಲ. ಒಬ್ಬ ತಾಯಿ ಮಗುವಿಗೆ ಜನ್ಮಕೊಟ್ಟ ವಿಷಯ ತಿಳಿದ ತಕ್ಷಣ, ಮಗು ಗಂಡಾ ಹೆಣ್ಣಾ ಅನ್ನೋದು ಮೊದಲ ಪ್ರಶ್ನೆಯಾದ್ರೆ, ಮಗು ಬಿಳೀನಾ ಕಪ್ಪಾ ಅನ್ನೋದು ಎರಡನೆಯದು.ಮಗು ಹೆಣ್ಣಾಗಿದ್ದು ಬಣ್ಣ ಏನಾದ್ರೂ ಕಪ್ಪಾಗಿದ್ರೆ ಕೇಳ್ಳೋದೆ ಬೇಡ, ಮಗುವನ್ನು ನೋಡೋಕೆ ಬಂದವರದ್ದೆಲ್ಲ ಒಂದೇ ರಾಗ, “ಅಯ್ಯೋ ನಿಮ್ಮ ಮಗಳು ಕಪ್ಪು , ಮುಂದೆ ಮದ್ವೆ ಯಾರಾಗುತ್ತಾರೆ?’ ಈ ಮಾತನ್ನು ಕೇಳಿ ಆ ಹೆತ್ತತಾಯಿ ಎಷ್ಟು ನೊಂದುಕೊಳ್ಳಬಹುದು! ಆ ಕಂದಮ್ಮ ಈಗತಾನೆ ಈ ಪ್ರಪಂಚಕ್ಕೆ ಕಾಲಿಟ್ಟಿದೆ. ಅದನ್ನು ಬಣ್ಣದ ವಿಷಯದಲ್ಲಿ ನಿಂದಿಸುತ್ತಾರೆ, ಈ ಮೂರ್ಖ ಜನರನ್ನು ನೋಡಿದ ಮಗು ಮನದಲ್ಲೇ ಅಂದುಕೊಳ್ಳಬಹುದು, “ನಾನು ಜನಿಸಿದ್ದು ಬಿಳಿ ಬಣ್ಣವ ಬಯಸುವ ಕಪ್ಪು ಪ್ರಪಂಚದಲ್ಲಿ’ ಅಂತ.

ಇನ್ನು ಮದುವೆ ವಿಷಯಕ್ಕೆ ಬಂದರೆ ಕೇಳ್ಳೋದೆ ಬೇಡ, ಗುಣ ನೋಡೋದಕ್ಕಿಂತ ಬಣ್ಣ ನೋಡಿ ಮದ್ವೆ ಆಗೋರೆ ಜಾಸ್ತಿ. ಮುಖದ ಬಣ್ಣದಿಂದ ಸುಖ ಸಂಸಾರ ಸಿಗೋಲ್ಲ ಅನ್ನೋದು ಗೊತ್ತಿಲ್ಲ. ಜೀವನ ನಡೆಸೋಕೆ ಬಾಹ್ಯ ಸೌಂದರ್ಯ ಮುಖ್ಯವಲ್ಲ  ಒಳ್ಳೆಯ ಗುಣನಡತೆ, ಹೊಂದಾಣಿಕೆ ಮುಖ್ಯ. ನಮ್ಮ ಜನಗಳಿಗೆ ಮುಖ ಬಿಳಿ ಬೇಕು ಅದೇ ತಲೆಕೂದಲು ಬಿಳಿಯಾದ್ರೆ ಕಪ್ಪು ಬಣ್ಣ ಹಚ್ಚುತ್ತಾರೆ. ಇನ್ನೂ ಕೆಲವರ ಮೂಢನಂಬಿಕೆಗಳು ಶುಭ ಸಮಾರಂಭಗಳಿಗೆ ಕಪ್ಪು ಬಣ್ಣದ ವಸ್ತ್ರ ಧರಿಸಬಾರದು, ಒಳ್ಳೆ ಕೆಲಸಕ್ಕೆ ಹೋಗುವಾಗ ಕಪ್ಪು ಬಣ್ಣದ ಬೆಕ್ಕು ಅಡ್ಡ ಬರಬಾರದು! ಈ ಜನಗಳಿಗೆ ಕಪ್ಪು ಬಣ್ಣದ ಮಹತ್ವ ಗೊತ್ತಿಲ್ಲ. ಕಪ್ಪು ಮೋಡಗಳಿಂದ ಮಾತ್ರ ಮಳೆ ಸುರಿಸಲು ಸಾಧ್ಯ, ಕಪ್ಪು ಭೂಮಿಯಲ್ಲಿ ಮಾತ್ರ ಫ‌ಲವತ್ತತೆ ಇರುವುದು. ಇದಕ್ಕೆ ಒಂದು ಉದಾಹರಣೆ, ಪಿ. ಲಂಕೇಶ್‌ ಅವರು  ತಮ್ಮ ಕವನ ನನ್ನವ್ವ ದಲ್ಲಿ ಅವರು ನನ್ನವ್ವ ಫ‌ಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ  ಎಂದು ಹೆತ್ತವ್ವನನ್ನು ಕಪ್ಪು ಭೂಮಿಗೆ ಹೋಲಿಸಿದ್ದಾರೆಯೇ ಹೊರತು ಬಿಳಿ ಭೂಮಿಗಲ್ಲ. ನಮ್ಮ ಜಗದೋದ್ಧಾರ ಶ್ರೀಕೃಷ್ಣ ಕೂಡ ನೀಲ ವರ್ಣದವನೇ ಅಲ್ಲವೆ?

ಇನ್ನಾದರೂ ನಮ್ಮ ಸಮಾಜ ಕಪ್ಪು-ಬಿಳುಪು ಅನ್ನೋ ಭೇದ‌-ಭಾವ ಬಿಟ್ಟು ಬದುಕು ನಡೆಸಬೇಕು.  

Advertisement

ಭಾಗ್ಯಶ್ರೀ ಬಿ.
ಎಂಜಿಎಂ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next