Advertisement

ಬ್ಲ್ಯಾಕ್‌, ವೈಟ್‌ ಫಂಗಸ್ ನಲ್ಲಿ ವರ್ಣದ ಅಂಶ ಹೊರತು ಬೇರೆ ವ್ಯತ್ಯಾಸವಿಲ್ಲ : ಸುಧಾಕರ್‌

02:26 AM May 23, 2021 | Team Udayavani |

ಹುಬ್ಬಳ್ಳಿ  : ಆಸ್ಪತ್ರೆಗಳಲ್ಲಿ ಬಳಸುವ ಹ್ಯುಮಿಡಿಫೈಡ್‌ಗಳಲ್ಲಿ ಡಿಸ್ಟಿಲ್‌ ವಾಟರ್‌ ಬಳಸಬೇಕು. ಆದರೆ ಹಲವೆಡೆ ನಲ್ಲಿಯ ನೀರನ್ನು ಹಾಕಿದ್ದಾರೆ. ಇದರಿಂದ ಫ‌ಂಗಸ್‌ ಬೆಳವಣಿಗೆಯಾಗಿದೆ. ಕ್ಯಾನುಲಾಗಳು ಸೇರಿ ಐಸಿಯುನಲ್ಲಿ ಬಳಸುವ ವೈದ್ಯಕೀಯ ಪರಿಕರಗಳಲ್ಲಿ ಕೂಡ ಫ‌ಂಗಸ್‌ ಬೆಳೆಯತ್ತಿದೆ. ಇವುಗಳನ್ನು ಮತ್ತೂಬ್ಬ ರೋಗಿ ಬಳಸುವಾಗ ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಿ ಬಳಸಬೇಕು. ಇಲ್ಲವಾದರೆ ಹೊಸದನ್ನು ಬಳಸಬೇಕು ಎಂಬ ಸಲಹೆಯನ್ನು ತಜ್ಞರ ಸಮಿತಿ ನೀಡಿದೆ. ತಜ್ಞರ ವರದಿ ಆಧರಿಸಿ ಬ್ಲ್ಯಾಕ್‌ ಫ‌ಂಗಸ್‌ ಸೋಂಕು ಹರಡುವುದನ್ನು ತಡೆಯಲು ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಹೇಳಿದರು.

Advertisement

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮ್ಯೂಕಸ್‌ ಮೈಕ್ರೋಸಿಸ್‌ (ಬ್ಲ್ಯಾಕ್‌ ಫ‌ಂಗಸ್‌) ಸೋಂಕು ಹೆಚ್ಚಾಗಿ ಹರಡುತ್ತಿದೆ. ಇದರ ಕಾರಣ ತಿಳಿಯಲು ಸರಕಾರದಿಂದ ಮೈಕೋಲಾಜಿಸ್ಟ್‌ (ಶಿಲೀಂಧ್ರ ತಜ್ಞರ) ಸಮಿತಿ ನೇಮಿಸಲಾಗಿದೆ. ತಜ್ಞರ ಸಮಿತಿ ಪ್ರಾಥಮಿಕ ವರದಿಯನ್ನು ನೀಡಿದೆ. ಬ್ಲ್ಯಾಕ್‌ ಹಾಗೂ ವೈಟ್‌ ಫ‌ಂಗಸ್‌ನಲ್ಲಿ ವರ್ಣದ ಅಂಶ ಹೊರತುಪಡಿಸಿದರೆ ಬೇರೆ ವ್ಯತ್ಯಾಸಗಳು ಇಲ್ಲ. ಸ್ಟಿರಾಯ್ಡನ ವಿವೇಚನರಹಿತ ಬಳಕೆ ದೇಹದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಐಸಿಯುನಲ್ಲಿ ಆಮ್ಲಜನಕದ ಮೇಲೆ ರೋಗಿಗಳು ಹೆಚ್ಚು ಕಾಲ ಇರುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಫ‌ಂಗಸ್‌ ಸೋಂಕು ಇವರನ್ನು ತೀವ್ರತರನಾಗಿ ಬಾಧಿಸುತ್ತಿದೆ. ದೇಶದಲ್ಲಿ 40 ರಿಂದ 50 ಬ್ಲ್ಯಾಕ್‌ ಫ‌ಂಗಸ್‌ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ ಇಂದು ಹಲವು ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದೆ. ಪ್ರಸ್ತುತ ಮಾಹಿತಿ ಪ್ರಕಾರ ರಾಜ್ಯದಲ್ಲಿ 250 ಬ್ಲ್ಯಾಕ್‌ ಫ‌ಂಗಸ್‌ ಸೋಂಕಿತರು ಇದ್ದಾರೆ. ಎಲ್ಲ ಸೊಂಕಿತರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ದೇಶದಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಚಿಕಿತ್ಸೆಗೆ ಅಗತ್ಯವಾದ ಔಷಧಗಳ 14,000 ವಯಲ್ಸ್ ಉತ್ಪಾದನೆಯಾಗುತ್ತಿದೆ. ರಾಜ್ಯಕ್ಕೆ ಅಗತ್ಯವಿರುವಷ್ಟು ವಯಲ್‌ಗ‌ಳನ್ನು ಒದಗಿಸುವು ದಾಗಿ ಕೇಂದ್ರ ಸಚಿವರಾದ ಸದಾನಂದಗೌಡ ಅವರು ಆಶ್ವಾಸನೆ ನೀಡಿದ್ದಾರೆ ಎಂದರು.

ಪತ್ರಕರ್ತರ ಪಶ್ನೆಗೆ ಉತ್ತರಿಸಿದ ಸಚಿವರು, ಎಲ್ಲ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಗ್ರೂಪ್‌ ಡಿ ನೌಕರರಿಗೂ ತುರ್ತು ಸಂದರ್ಭದ ಭತ್ತೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಿಮ್ಸ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯದ ಕೋವಿಡ್‌ ಚಿಕಿತ್ಸೆ ಸಿಗುತ್ತಿಲ್ಲ
ಉತ್ತರ ಕರ್ನಾಟಕ ಭಾಗದ ಆರೋಗ್ಯ ವ್ಯವಸ್ಥೆಯ ಕೇಂದ್ರದಂತೆ ಕಾರ್ಯ ನಿರ್ವಹಿಸಬೇಕಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಕೋವಿಡ್‌ ವಿಷಯದಲ್ಲಿ ನಿರೀಕ್ಷೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ಕೊಟ್ಟು ಕೋವಿಡ್‌ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಸಂಸ್ಥೆಯ ಕಾರ್ಯ ನಿರ್ವಹಣೆ ಪರಿಶೀಲಿಸಿದ ಅವರು, ಸಂಸ್ಥೆಯಲ್ಲಿ ಹೆಚ್ಚು ಕಡಿಮೆ ಒಂದು ಸಾವಿರ ಮಂದಿ ವೈದ್ಯರು ಇದ್ದಾರೆ. 1030 ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಮಾಣದಲ್ಲಿ ವೈದ್ಯರು ರೋಗಿ ಗಳ ಅನುಪಾತ ಯಾವ ದೇಶದಲ್ಲೂ ಇಲ್ಲ. ಎಷ್ಟು ಪರಿಣಾಮಕಾರಿಯಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂಬುದನ್ನು ನೀವೇ ಪ್ರಶ್ನೆ ಮಾಡಿಕೊಳ್ಳಬೇಕು. ಇತರ ಸಿಬಂದಿಯನ್ನು ಲೆಕ್ಕ ಹಾಕಿದರೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಮಂದಿ ಇದ್ದೀರಿ. ಆದರೆ ನಿರೀಕ್ಷಿತ ಪ್ರಮಾಣದ ಆರೋಗ್ಯ ಸೇವೆ ಏಕೆ ಲಭ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ಇನ್ನೊಂದು ತಿಂಗಳು ಕಷ್ಟಪಟ್ಟು ಕೆಲಸ ಮಾಡಿ. ಸಾವುಗಳನ್ನು ತಪ್ಪಿಸಿ. ಪ್ರತೀ ಜೀವಕ್ಕೂ ಬೆಲೆಯಿದೆ. ನಾವ್ಯಾರೂ ಬಲವಂತದಿಂದ ವೈದ್ಯ ವೃತ್ತಿಗೆ ಬಂದಿಲ್ಲ. ಇಷ್ಟಪಟ್ಟು ಬಂದಿರುವಾಗ ಲೋಪಗಳಿಲ್ಲದಂತೆ ಕೆಲಸ ಮಾಡಬೇಕು. ಆತ್ಮವಂಚನೆ ಮಾಡಿಕೊಳ್ಳದೆ ಕೆಲಸ ಮಾಡಿ. ಕೆಲವರು ಮಾಡುವ ತಪ್ಪಿಗೆ ಎಲ್ಲರೂ ತಲೆತಗ್ಗಿಸುವಂತೆ ಆಗಬಾರದು ಎಂದು ಕಿವಿಮಾತು ಹೇಳಿದರು.

ಆದ್ಯತೆ ಮೇರೆಗೆ ವೈದ್ಯರು, ತಜ್ಞರ ನೇಮಕ
ಗದಗ: ಹಳೇ ಮೈಸೂರು ಮತ್ತು ಬೆಂಗಳೂರು ಪ್ರದೇಶಗಳನ್ನು ಹೊರತು ಪಡಿಸಿ ರಾಜ್ಯದ ಹಿಂದುಳಿದ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ವೈದ್ಯರು ಮತ್ತು ತಜ್ಞರ ಹುದ್ದೆಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಲಾಗುವುದು. ಕೆಲವು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌ ಹೇಳಿದ್ದಾರೆ.

ಗದಗ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಕೋವಿಡ್‌ ಪರಿಶೀಲನ ಸಭೆಯಲ್ಲಿ ಜಿಲ್ಲೆಯ ಕೋವಿಡ್‌ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿದ ಅವರು, ತಾಲೂಕು ಆಸ್ಪತ್ರೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ವೈದ್ಯರು ಮತ್ತು ತಜ್ಞರ ಹುದ್ದೆ ಖಾಲಿಯಿವೆ. ಅವುಗಳ ಭರ್ತಿಗೆ ಆದ್ಯತೆ ನೀಡಲಾಗುವುದು. ಇಲ್ಲದಿದ್ದರೆ ಗ್ರಾಮೀಣ ಭಾಗದ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಜರಗಿಸುವುದಾಗಿ ತಿಳಿಸಿದರು.

ತಾಲೂಕು ಆಸ್ಪತ್ರೆ ಆಗಿದ್ದರೂ ಇನ್ನೂ 30 ಹಾಸಿಗೆಗಳ ಆಸ್ಪತ್ರೆ ಆಗಿರುವ ಶಿರಹಟ್ಟಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ ಆರು ವೆಂಟಿಲೇಟರ್‌ ಮತ್ತು 50 ಆಕ್ಸಿಜನ್‌ ಹಾಸಿಗೆಗಳನ್ನು ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next