Advertisement

ಬ್ಲಾಕ್‌ ಅಂಡ್‌ ವೈಟ್‌ ಮೋಸ….

01:22 PM Nov 20, 2017 | |

ಪತ್ರಿಕೆಯಲ್ಲಿದ್ದ ಕ್ವಿಜ್‌ ಕಾಲಂ ತುಂಬಿ, ಕೆಳಗಿದ್ದ ವಿಳಾಸಕ್ಕೆ ಪೋಸ್ಟ್‌ ಮಾಡಿದ್ದೆ. ಸರಿಯಾಗಿ ಉತ್ತರಿಸಿದ್ದಕ್ಕೆ ನಿಮಗೆ ಟಿ.ವಿಯನ್ನು ಬಹುಮಾನವಾಗಿ ನೀಡಲಾಗುವುದು ಎಂದು ಉತ್ತರ ಬಂದಿತು ! ಈ ಸುದ್ದಿ ತಿಳಿದು ನೆರೆಹೊರೆಯವರೆಲ್ಲಾ ಖುಷಿಪಟ್ಟರು. ಬೇಗೆ ಟಿ.ವಿ. ಬಿಡಿಸಿಕೊಳ್ಳಿ ಎಂದು ಸಲಹೆ ಕೊಟ್ಟರು…

Advertisement

ಅದು 1988ರ ಕಾಲ. ದೂರದರ್ಶನದಲ್ಲಿ ಭಾನುವಾರ ಬೆಳಗ್ಗೆ ಮೂಡಿಬರುತ್ತಿದ್ದ “ರಾಮಾಯಣ’ ಧಾರಾವಾಹಿ, ಭಾರತೀಯ ಟೆಲಿವಿಷನ್‌ ರಂಗದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿತ್ತು. ಮನೆಮನೆಗಳ ಮೂಲೆಗಳಿಗೆ ಟಿವಿಗಳು ಬಂದು ಕೂರಲಾರಂಭಿಸಿದ್ದವು.  ಆದರೆ, ಆಗ ಮಧ್ಯಮ ವರ್ಗದವರೆಲ್ಲರಿಗೂ ಟಿ.ವಿ ಸುಲಭವಾಗಿ ಕೈಗೆಟುಕುವಂತಿರಲಿಲ್ಲ. ಹಾಗಾಗಿ, ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಎಡತಾಕಿ ರಾಮಾಯಣ ನೋಡಬೇಕಿತ್ತು. 

ಆಗ, ಬಳ್ಳಾರಿಯಲ್ಲಿದ್ದ ನಮ್ಮ ಮನೆಯಲ್ಲೂ ಇದೇ ಸನ್ನಿವೇಶ. ನನ್ನ ಪುಟ್ಟ ಮಗನೂ ರಾಮಾಯಣ ನೋಡಲು ಸ್ವಲ್ಪ ದೂರದಲ್ಲಿದ್ದ ಕೆಲವರ ಮನೆಗಳಿಗೆ ಹೋಗುತ್ತಿದ್ದ. ಆದರೆ, ಒಮ್ಮೊಮ್ಮೆ ಅವರು ಹೊರ ಹೋಗಿದ್ದರೆ, ಬೇಗನೇ ಬಾಗಿಲು ತೆಗೆಯದಿದ್ದರೆ ಪೆಚ್ಚು ಮೋರೆ ಹಾಕಿಕೊಂಡು ಬರುತ್ತಿದ್ದುದು ನೋಡಿದಾಗಲೆಲ್ಲಾ ಕರುಳು ಚುರ್‌ ಎನ್ನುತ್ತಿತ್ತು. ಮನೆಯವರಿಗಂತೂ ಟಿ.ವಿ ತರುವ ಉದ್ದೇಶವೇ ಇರಲಿಲ್ಲ.

ಹಾಗಾಗಿ, ಹೇಗಾದರೂ ಮಾಡಿ, ಮನೆ ಖರ್ಚಿನಲ್ಲೇ ಒಂದಿಷ್ಟು ಉಳಿತಾಯ ಮಾಡಿ, ಟಿ.ವಿ ತರಬೇಕೆಂದು ನಿರ್ಧರಿಸಿದ್ದೆ. ಹೀಗಿರುವಾಗ, ಯಾವುದೋ ಇಂಗ್ಲೀಷ್‌ ದೈನಿಕದಲ್ಲಿ ಇದ್ದ ಸಾಮಾನ್ಯ ಜ್ಞಾನದ ಕ್ವಿಜ್‌ ಕಾಲಂನಲ್ಲಿನ ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ಬರೆದ ಅದೃಷ್ಟಶಾಲಿಗಳಿಗೆ ಟಿ.ವಿಯೊಂದನ್ನು ಬಹುಮಾನವಾಗಿ ನೀಡುವುದಾಗಿ ಹೇಳಲಾಗಿತ್ತು.  

ನನಗೆ, ಮೊದಲಿನಿಂದಲೂ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವ ಹವ್ಯಾಸವಿದ್ದಿದ್ದರಿಂದ ಈ ಕಾಲಂ ಕಟ್‌ ಮಾಡಿ ಸರಿ ಉತ್ತರ ತುಂಬಿಸಿ ಅವರು ನೀಡಿದ್ದ ವಿಳಾಸಕ್ಕೆ ಪೋಸ್ಟ್‌ ಮಾಡಿದೆ. 

Advertisement

ಸುಮಾರು ಮೂರು ವಾರಗಳ ನಂತರ, ಕಂಪನಿಯಿಂದ ಪತ್ರವೊಂದು ಬಂತು ನಮಗೆ “ಬ್ಲಾಕ್‌ ಆ್ಯಂಡ್‌ ವೈಟ್‌’ ಟಿ.ವಿ ಬಹುಮಾನ ಬಂದಿರುವುದಾಗಿ ಅದರಲ್ಲಿ ತಿಳಿಸಿದ್ದರು. ನನಗೆ ಅಚ್ಚರಿ, ಖುಷಿ ಒಟ್ಟೊಟ್ಟಿಗೆ. ಆದರೆ, ಅದರಲ್ಲೊಂದು ನಿಯಮವಿತ್ತು. ಟಿವಿ ಉಚಿತವಾಗಿ ಬರುತ್ತಿದೆಯಾದರೂ ಅದು ದೆಹಲಿಯಿಂದ ಬಳ್ಳಾರಿವರೆಗೆ ಬರಬೇಕಿರುವುದರಿಂದ ಸಾಕಾಣಿಕೆ ವೆಚ್ಚವಾಗಿ 1,000 ರು.ಗಳನ್ನು  ಕಂಪನಿ ಕಚೇರಿಗೆ ಮನಿಯಾರ್ಡರ್‌ ಮಾಡಬೇಕೆಂದೂ ಹೇಳಲಾಗಿತ್ತು. ನನಗೆ ಅನುಮಾನ. 

ಅಕ್ಕಪಕ್ಕದ ನನ್ನ ಸ್ನೇಹಿತೆಯರಲ್ಲಿ ಈ ಬಗ್ಗೆ ಹೇಳಿದಾಗ ಅವರೂ ಖುಷಿಪಟ್ಟರು. ನಾವೆಲ್ಲಾ ನಮ್ಮೆಜಮಾನ್ರಿಗೆ ಕಾಡಿಸಿ, ಪೀಡಿಸಿ ಟೀವಿ ತರಿಸಿಕೊಂಡೆವು. ನಿಮಗೆ ಬಹುಮಾನವಾಗಿ ಬಂದಿದೆ. ಈ ಅವಕಾಶ ಬಿಡಬೇಡಿ ಎಂದು ಪುಸಲಾಯಿಸಿದರು. ಸಾಲದ್ದಕ್ಕೆ, ಪೋಸ್ಟ್‌ ಆಫೀಸ್‌ನಿಂದ ಹಣ ಕಳಿಸ್ತೀರಲ್ವಾ, ದಾಖಲೆ ಇರುತ್ತೆ ಬಿಡಿ ಎಂದು ಧೈರ್ಯ ತುಂಬಿದರು. ಆಗ, ನಮಗೆ ಆ 1000 ರು. ಕೊಂಚ ದುಬಾರಿ ಮೊತ್ತ ಆಗಿತ್ತಾದರೂ ಹಾಗೂ ಹೀಗೂ 1000 ರು. ಸೇರಿಸಿ, ವಾರದಲ್ಲೇ ಮನಿಯಾರ್ಡರ್‌ ಮಾಡಿದೆ. 

ಆದರೆ, ತಿಂಗಳುಗಟ್ಟಲೆ ಕಾಯ್ದರೂ ಟಿವಿಯೂ ಇಲ್ಲ, ಆ್ಯಂಟೇನಾವೂ ಇಲ್ಲ!  ಕಂಪನಿ ವಿಳಾಸಕ್ಕೆ ಒಂದೆರಡು ಬಾರಿ ಪತ್ರ ಬರೆದೆ. ಉತ್ತರವಿಲ್ಲ. ಅವರು ನೀಡಿದ್ದ ಫೋನ್‌ ನಂಬರ್‌ಗೆ ಟ್ರಂಕಾಲ್‌ ಮಾಡಿದರೆ ನಂಬರ್‌ ಅಸ್ತಿತ್ವದಲ್ಲಿಲ್ಲ ಎಂದು ಗೊತ್ತಾಯಿತು. ಆಗಲೇ ಗೊತ್ತಾಗಿದ್ದು ನಾನು ಮೋಸ ಹೋದೆ ಅಂತ.

ಒಬ್ಬ ಸಾಮಾನ್ಯ ಮಹಿಳೆಯಾದ ನಾನು, ಏನು ಮಾಡಬಲ್ಲೆ? ಗ್ರಾಹಕರ ವೇದಿಕೆ ಬಗ್ಗೆ ತಿಳಿದಿರಲಿಲ್ಲ. ಇನ್ನು  ಪೊಲೀಸು, ಕೋರ್ಟು, ಕಚೇರಿ ನಮ್ಮಂಥ ಮಧ್ಯಮ ವರ್ಗದವರಿಗೆ ಒಗ್ಗದ ಮಾತು. ಹಾಗಾಗಿ, ನಾನೊಬ್ಬಳೇ ಆ ಬೇಸರ ನುಂಗಿಕೊಂಡೆ. ಆದರೂ, ಹಠ ತೊಟ್ಟು ಒಂದು ವರ್ಷದಲ್ಲೇ ದುಡ್ಡು ಒಟ್ಟುಗೂಡಿಸಿ ಮನೆಗೊಂದು ಕಲರ್‌ ಟಿ.ವಿ ತಂದು, ಮಗನ ಸಂಭ್ರಮದಲ್ಲಿ ಆ ಬೇಸರ ಮರೆತೆ. ಆದರೂ, ಆಗಾಗ ನಾನು ಪಿಗ್ಗಿ ಬಿದ್ದಿದ್ದು ನೆನಪಿಗೆ ಬರುತ್ತಲೇ ಇರುತ್ತದೆ. 

ಎಂ. ರೇಣುಕಾ, ಹಿರಿಯ ನಾಗರಿಕರು, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next