ಬೆಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದು ಮಾಡಿ ಹೆಜಮಾಡಿ ಟೋಲ್ ನಲ್ಲಿ ಹೆಚ್ಚಿನ ಹಣ ಸಂಗ್ರಹ ಮಾಡುವ ನಿರ್ಧಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟೀಕೆ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರು ಅಲುಗಾಡಿಸಿದ್ದಕ್ಕೆ ಕರಾವಳಿಗರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಕರಾವಳಿ ಸಂಸದರು ಯಾವ ಪುರುಷಾರ್ಥಕ್ಕೆ ಸ್ವಯಂ ಬೆನ್ನುತಟ್ಟಿಕೊಂಡಿದ್ದು ಬಹಿರಂಗ ಪಡಿಸಬೇಕು. ವಾಹನ ಸವಾರರ ಬೆವರಿನ ಹಣವನ್ನ ಜಿಗಣೆಯಂತೆ ರಕ್ತ ಹೀರುತ್ತಿದ್ದ ಸುರತ್ಕಲ್ ಟೋಲ್ ಗೇಟ್ ರದ್ದು ಪಡಿಸಿ, ಹೆಜಮಾಡಿ ಟೋಲ್ ಅಲ್ಲಿ ದುಪ್ಪಟ್ಟು ಸುಲಿಗೆ ಮಾಡಲು ವಿಲೀನಗೊಳಿಸಿದ್ದಕ್ಕಾ ಎಂದು ಪ್ರಶ್ನಿಸಿದ್ದಾರೆ.
ಅಕ್ರಮ ಟೋಲ್‌ಗೇಟ್ ತೆರವುಗೊಳಿಸಲು ಕರಾವಳಿಯಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ದರೆ ತಾವು ಉಳಿಸಲು ಶಕ್ತಿಮೀರಿ ಶ್ರಮಿಸಿರುವ ತೆರೆ ಮರೆಯ ಕಸರತ್ತನ್ನ ಬಹಿರಂಗಪಡಿಸುತ್ತಿರಾ? ಅಥವಾ ಕಾರು ಅಲ್ಲಾಡಿಸಿದ ಕಾರಣಕ್ಕೆ ಬಹಿರಂಗವಾಗಿ ಕರಾವಳಿಗರ ಮೇಲೆ ಸೇಡು ತೀರಿಸಿಕೊಂಡಿದ್ದನ್ನ ಒಪ್ಪಿಕೊಳ್ಳುತ್ತಿರಾ ಎಂದು ಸವಾಲೆಸಿದಿದ್ದಾರೆ.
ಕರಾವಳಿಯ ಬಿಜೆಪಿ ಸಂಸದರು,ಶಾಸಕರು ಟೋಲ್‌ಗೇಟ್ ಗಳ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ? ಸುಲಿಗೆ ಮಾಡುತ್ತಿರುವ ಹಣದಲ್ಲಿ ತಮ್ಮ ಪಾಲೆಷ್ಟು ಬಹಿರಂಗಪಡಿಸಿ? ಮತಕೊಟ್ಟ ಜನರಿಗೆ ದ್ರೋಹ ಮಾಡಿ, ಬೆನ್ನ ತಟ್ಟಿಕೊಂಡಿರುವ ಸಂಸದರದ್ದು ಲಜ್ಜೆಗೆಟ್ಟ ಪರಮಾವಧಿ. ಅಕ್ರಮ ಟೋಲ್ ಅಂತೆ ನಿಮ್ಮನ್ನ ಎತ್ತಂಗಡಿ ಮಾಡುವ ಕಾಲ ಬಂದಾಯ್ತು ಎಂದು ಬಿಕೆ ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.