Advertisement

ಕಾಂಗ್ರೆಸ್‌- ಅತೃಪ್ತರ ನಡೆ ಆಧರಿಸಿ ಬಿಜೆಪಿ ಮುಂದಿನ ಹೆಜ್ಜೆ

01:35 AM Jan 20, 2019 | Team Udayavani |

ಬೆಂಗಳೂರು: ಶಾಸಕರ ರೆಸಾರ್ಟ್‌ ವಾಸ್ತವ್ಯದಿಂದ ಪ್ರಯೋಜನವಿಲ್ಲ ಎಂಬ ಕಾರಣಕ್ಕೆ ರಾಜ್ಯಕ್ಕೆ ಮರಳಿ ಕರೆಸಿಕೊಂಡಿರುವ ಬಿಜೆಪಿ ನಾಯಕರು ಅತೃಪ್ತ ಕಾಂಗ್ರೆಸ್‌ ಶಾಸಕರು ಹಾಗೂ ಕಾಂಗ್ರೆಸ್‌ ನಡೆ ಆಧರಿಸಿ ಮುಂದಿನ ರಾಜಕೀಯ ನಡೆ ಇಡಲು ನಿರ್ಧರಿಸಿದೆ.

Advertisement

ಸೋಮವಾರದಿಂದ ಬರಪೀಡಿತ ಪ್ರದೇಶಗಳಿಗೆ ಐದು ತಂಡಗಳ ಮೂಲಕ ಅಧ್ಯಯನ ಪ್ರವಾಸಕ್ಕೆ ಬಿಜೆಪಿ ಸಜ್ಜಾಗಿದೆ. ಒಂದೆಡೆ ಅಧ್ಯಯನ ಪ್ರವಾಸ ಕೈಗೊಳ್ಳುವ ಜತೆಗೆ ಸಮ್ಮಿಶ್ರ ಸರಕಾರದ ಸಂಖ್ಯಾಬಲ ಕುಸಿತಕ್ಕೆ ಪ್ರಯತ್ನವನ್ನು ಮುಂದುವರಿಸಲು ತೀರ್ಮಾನಿಸಿದೆ. ರಾಜ್ಯದ ಬಹಳಷ್ಟು ಶಾಸಕರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಒತ್ತಾಯಿಸಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರಾದ ನಾಲ್ಕು ಮಂದಿ ಶಾಸಕರು ಹಾಗೂ ಕಾಂಗ್ರೆಸ್‌ ಪಕ್ಷದ ಮುಂದಿನ ನಡೆ ಆಧರಿಸಿ ಕಾರ್ಯ ತಂತ್ರ ಹೆಣೆಯಲು ನಿರ್ಧರಿಸಲಾಗಿದೆ. ಗುರು ಗ್ರಾಮದ ರೆಸಾರ್ಟ್‌ನಲ್ಲಿ ಶಾಸಕರ ವಾಸ್ತವ್ಯ ಮುಂದುವರಿಕೆಯಿಂದ ಯಾವುದೇ ಪ್ರಯೋಜನ ವಾಗುತ್ತಿಲ್ಲ. ಇನ್ನೊಂದೆಡೆ ಕ್ಷೇತ್ರದ ಜನರ ನಿಂದನೆಗೆ ಗುರಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರನ್ನು ವಾಪಸ್‌ ಕರೆಸಿಕೊಳ್ಳಲಾಯಿತು ಎನ್ನಲಾಗಿದೆ.
ಐದು ದಿನಗಳಿಂದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಶುಕ್ರವಾರ ರಾತ್ರಿ ಯಡಿಯೂರಪ್ಪ ನೀಡಿದ ಸೂಚನೆಯಂತೆ ಶನಿವಾರ ತಂಡೋಪತಂಡವಾಗಿ ರಾಜ್ಯಕ್ಕೆ ಬಂದಿಳಿದರು.

ಅತೃಪ್ತರ ಮನವೊಲಿಕೆ ಮುಂದುವರಿಕೆ
ಕಾಂಗ್ರೆಸ್‌ ಪಕ್ಷದಿಂದ ಅಂತರ ಕಾಯ್ದು ಕೊಂಡಿರುವ ಅತೃಪ್ತ ಶಾಸಕರು ಒಂದು ದೃಢ ನಿರ್ಧಾರ ಕೈಗೊಂಡು ಕಾರ್ಯ ಪ್ರವೃತ್ತವಾಗು ವಂತೆ ಮನವೊಲಿಸುವ ಪ್ರಯತ್ನ ನಡೆದಿದೆ. ಅತೃಪ್ತ ಶಾಸಕರು ಒಂದೊಮ್ಮೆ ರಾಜೀನಾಮೆ ನೀಡಿದರೆ ಕಾಂಗ್ರೆಸ್‌ನಲ್ಲಿನ ಇನ್ನಷ್ಟು ಅತೃಪ್ತರ ಆತ್ಮವಿಶ್ವಾಸ ಹೆಚ್ಚಾಗಿ ಅವರು ಸೂಕ್ತ ನಿರ್ಧಾರ ಕೈಗೊಳ್ಳಲು ನೆರವಾಗಲಿದೆ. ವಿಳಂಬ ಮಾಡದೆ ಸೂಕ್ತ ನಿರ್ಧಾರ ಕೈಗೊಂಡು ಕಾರ್ಯಪ್ರವೃತ್ತವಾಗಬೇಕು ಎಂಬ ಸಂದೇಶವನ್ನು ಅತೃಪ್ತರಿಗೆ ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next