Advertisement

BJP ರಾಜ್ಯ ಪ್ರವಾಸ ಮೂರೇ ದಿನಕ್ಕೆ ಸೀಮಿತ

09:11 PM Jun 25, 2024 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸುವುದಕ್ಕೆ ಅಧ್ಯಯನ ಹಾಗೂ ಜನಾಭಿಪ್ರಾಯ ಸಂಗ್ರಹಿಸಲು ಬಿಜೆಪಿ ನಡೆಸಲಿರುವ ರಾಜ್ಯ ಪ್ರವಾಸವನ್ನು ಕೇವಲ ಮೂರೇ ದಿನಕ್ಕೆ ಸೀಮಿತಗೊಳಿಸಲಾಗಿದೆ.

Advertisement

ಈ ಪ್ರವಾಸದ ಬಗ್ಗೆ ರೂಪು-ರೇಷೆ ರೂಪಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜೂ.27ರಂದು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಯಾರ್ಯಾರ ನೇತೃತ್ವದಲ್ಲಿ ತಂಡ ರಚಿಸಬೇಕೆಂಬುದು ಇತ್ಯರ್ಥವಾಗಲಿದೆ.

ಆದರೆ ದೀರ್ಘ‌ ಪ್ರವಾಸ ಬೇಡ ಎಂದು ಶಾಸಕರು ಅಭಿಪ್ರಾಯ ತಿಳಿಸಿರುವ ಹಿನ್ನೆಲೆಯಲ್ಲಿ ಮೂರೇ ದಿನಕ್ಕೆ ಪ್ರವಾವನ್ನು ಸೀಮಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಸರ್ಕಾರದ ವಿರುದ್ಧ ಜನರಿಂದ ನೇರವಾಗಿ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದ ಮೇಲೆ ಸರ್ಕಾರದ ವಿರುದ್ಧ ವಿಧಾನಮಂಡಲದ ಉಭಯ ಸದನಗಳಲ್ಲಿ ಹೋರಾಟ ನಡೆಸುವುದು ಬಿಜೆಪಿಯ ಉದ್ದೇಶವಾಗಿದೆ.

ಸದನಕ್ಕೂ ತಂಡ :
ಬಿಜೆಪಿ ಮೂಲಗಳ ಪ್ರಕಾರ ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಯೋಜಿತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಹಿರಿತನ ಹಾಗೂ ವಿಷಯವಾರು ಪರಿಣತಿ ಆಧಾರದ ಮೇಲೆ ಯಾರು, ಯಾವ ಚರ್ಚೆಯಲ್ಲಿ ಭಾಗವಹಿಸಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

Advertisement

ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್‌..ಅಶೋಕ, ಅರವಿಂದ ಬೆಲ್ಲದ್‌, ವಿ.ಸುನೀಲ್‌ ಕುಮಾರ್‌, ಬಸನಗೌಡ ಪಾಟೀಲ್‌ ಯತ್ನಾಳ್‌, ಅಭಯ್‌ ಪಾಟೀಲ್ , ಬಿ.ವೈ.ವಿಜಯೇಂದ್ರ, ಡಾ. ಭರತ್‌ ಶೆಟ್ಟಿ, ಎಸ್‌.ಆರ್‌. ವಿಶ್ವನಾಥ್‌, ಡಾ. ಸಿ.ಎನ್‌. ಅಶ್ವತ್ಥನಾರಾಯಣ ಮೊದಲಾದವರಿಗೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.

ಪರಿಷತ್ತಿನಲ್ಲಿ ಸಿ.ಟಿ.ರವಿ, ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿಗೆ ಹೊಣೆ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಈ ಬಾರಿ ಸದನದಲ್ಲಿ ಸಂಘಟಿತ ಹೋರಾಟ ನಡೆಸುವುದಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ.

ಜುಲೈ 4ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಜು.4ರಂದು ಬಿಜೆಪಿ ಶಾಸಕರ ಸಭೆ ಕರೆಯಲಾಗಿದ್ದು, ಈ ತುರ್ತು ಕರೆಯ ಉದ್ದೇಶವನ್ನು ಗೌಪ್ಯವಾಗಿ ಇಡಲಾಗಿದೆ. ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಈ ಸಭೆ ಆಯೋಜಿಸಲಾಗಿದ್ದು, ಬಿಜೆಪಿ ಮುಖ್ಯ ಸಚೇತಕರ ಕಚೇರಿಯಿಂದ ಎಲ್ಲ ಶಾಸಕರಿಗೆ ಸಂದೇಶ ರವಾನೆ ಮಾಡಲಾಗಿದೆ.

ಮಹತ್ವದ ವಿಚಾರದ ಬಗ್ಗೆ ಚರ್ಚಿಸುವುದಕ್ಕೆ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದೆ ಎಂದು ಈ ಮೊದಲು ಸೂಚಿಸಲಾಗಿತ್ತು. ಆದರೆ ಈಗ ಬ್ರೇಕ್‌ ಪಾಸ್ಟ್‌ ಮೀಟಿಂಗ್‌ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಅಧಿವೇಶನ ಸಂದರ್ಭದಲ್ಲಿ ಈ ಸಭೆ ಕರೆಯಲಾಗುತ್ತದೆ. ಆದರೆ ಅಧಿವೇಶನಕ್ಕೆ ದಿನಾಂಕ ನಿಗದಿಯಾಗುವುದಕ್ಕೆ ಮುನ್ನವೇ ಸಭೆ ಕರೆದಿರುವುದು ಕುತೂಹಲ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next