Advertisement

BJP: ನಿಲ್ಲದ ರಾಜ್ಯ ಬಿಜೆಪಿ ಬೇಗುದಿ: ಈಗ ವಿಜಯೇಂದ್ರ ಪರ ಬೆಂಬಲಿಗರ ಸಭೆ

12:06 AM Sep 28, 2024 | Team Udayavani |

ಬೆಂಗಳೂರು: ಸರಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಬೇಕಿದ್ದ ರಾಜ್ಯ ಬಿಜೆಪಿಯಲ್ಲಿ ದಿನಕ್ಕೊಂದು ಬಂಡಾಯ ಸಭೆ ನಡೆಯುತ್ತಿದ್ದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಬೆಂಬಲಿಗರು ಸಭೆ ನಡೆಸಿದ್ದಾರೆ.

Advertisement

ಯತ್ನಾಳ್‌ ಬಣ ಪದೇಪದೆ ಸಭೆ ಸೇರಿ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ವಿಜಯೇಂದ್ರ ಬಣ ಸಭೆ ನಡೆಸಿ ತಿರುಗೇಟು ನೀಡುವ ಪ್ರಯತ್ನ ನಡೆಸಿದ್ದು ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ವ್ಯಕ್ತಿಗಳು ಯಾರೇ ಇದ್ದರೂ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.

ಸಭೆಯ ಬಳಿಕ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಯಾವುದೇ ಕಾರಣಕ್ಕೂ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ. ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ. ವಿಜಯೇಂದ್ರ ರಾಜಾಧ್ಯಕ್ಷರಾದ ಮೇಲೆ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡುತ್ತಿದ್ದಾರೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ಹೇಗೆ ಕೆಳಗಿಳಿಸುತ್ತಾರೆಂದು ನಾವು ನೋಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇಲ್ಲಿಯವರೆಗೆ ನಾವು ಮಾತನಾಡಬಾರದೆಂದು ಸುಮ್ಮನೆ ಇದ್ದೆವು. ಆದರೆ ಕೆಲವರು ಪಕ್ಷದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿಜಯೇಂದ್ರ ಅನುಭವ, ಸಂಘಟನೆ, ಉಪ ಚುನಾವಣೆಯ ಗೆಲುವು ನೋಡಿದ ಮೇಲೆ ಹೈಕಮಾಂಡ್‌ ರಾಜ್ಯಾಧ್ಯಕ್ಷರಾಗಿ ಮಾಡಿದೆ. ಯಾವುದೇ ಕಾರಣಕ್ಕೂ ಅವರನ್ನು ಕೆಳಗೆ ಇಳಿಸಲು ಸಾಧ್ಯವಿಲ್ಲ. ಅಷ್ಟಕ್ಕೇನೂ ಅವರು ರೆಡಿಮೇಡ್‌ ಫ‌ುಡ್ಡಾ? ಎಂದು ಪ್ರಶ್ನಿಸಿದರು.

ರಾಜ್ಯದ ಅಧ್ಯಕ್ಷ ಆದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರು ಅಧ್ಯಕ್ಷ ಆದ ಮೇಲೆ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಕಾಂಗ್ರೆಸ್‌ ಅಧಿಕಾರದಿಂದ ಬೇಸತ್ತಿರುವ ಜನತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾತನಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಒಂದು ವೇಳೆ ಅವರು ತಪ್ಪು ಮಾಡಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು. ಅದುಬಿಟ್ಟು ಹಾದಿಬೀದಿಯಲ್ಲಿ ಮಾತನಾಡುವುದರಿಂದ ಉಪಯೋಗವಿಲ್ಲ. ಒಂದು ವೇಳೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರೆ ನಾವು ಒಪ್ಪಿಕೊಳ್ಳುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

Advertisement

ಬೆಂಗಳೂರಿನಿಂದ ಮೈಸೂರು ವರೆಗೆ ನಡೆದ ಮುಡಾ ಪಾದಯಾತ್ರೆ ಯಶಸ್ವಿಯಾಗಿದೆ. ಇದನ್ನು ಸಹಿಸದವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಾದಯಾತ್ರೆಯನ್ನು ವಿರೋಧಿಸಿದವರು ಪಕ್ಷದ ಉಳಿವಿಗಾಗಿ ಮಾತನಾಡುತ್ತಿರುವುದು ದುರದೃಷ್ಟಕರ. ಮೌನ ನಮ್ಮ ದೌರ್ಬಲ್ಯವಲ್ಲ. ಹಿಂದೆಯೇ ನಾವೆಲ್ಲ ಸೇರುತ್ತೇವೆ ಎಂದು ಹೇಳಿದ್ದೆವು. ಆದರೆ ಸಭೆ ನಡೆಸದಂತೆ ವಿಜಯೇಂದ್ರ ಸೂಚಿಸಿದ್ದರು.

ದಾವಣಗೆರೆ, ಚಿಕ್ಕೋಡಿ ಮತ್ತಿತರ ಕಡೆ ಪಕ್ಷದ ಸೋಲಿಗೆ ಯಡಿಯೂರಪ್ಪ ಅವರೇ ಕಾರಣ ಎಂದು ಪಕ್ಷ ನಿಷ್ಠೆ ಬಗ್ಗೆ ಮಾತನಾಡುವವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಯಾಕೆ ಟಿಕೆಟ್‌ ಕೊಡಲಿಲ್ಲ? ಎಂದು ಪ್ರಶ್ನಿಸಿದರು.
ಪಕ್ಷದ ಉಳಿವಿಗಾಗಿ ಮುಂದೆ ನಾವು ಸಭೆ ಮಾಡುತ್ತೇವೆ. ಪಕ್ಷದ ಪರವಾಗಿ ಮುಂದೆ ನಾವು ಸಭೆ ಸೇರುತ್ತೇವೆ. ಸಂಘ ಪರಿವಾರ, ಹೈಕಮಾಂಡ್‌ ಒಟ್ಟಾಗಿ ಹೋಗಿ ಅಂತಾ ಹೇಳಿದ್ದಾರೆ. ಶಾಸಕ ಬಿ.ಪಿ. ಹರೀಶ್‌ ರಾಜಕೀಯಕ್ಕೆ ಜನ್ಮ ಕೊಟ್ಟಿದ್ದು ಯಡಿಯೂರಪ್ಪ. ಇದನ್ನು ಅವರು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ಶಿಸ್ತುಕ್ರಮ ತೆಗೆದುಕೊಳ್ಳಿ
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ಮಾತನಾಡಿ, ಪಕ್ಷದ ವಿರೋಧ ಚಟುವಟಿಕೆ ಮಾಡುವವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಪಾರ್ಟಿ ಬದಲಾವಣೆ ಮಾಡಿಕೊಂಡು ಬಂದವರು, ಬಿಜೆಪಿ ಬಗ್ಗೆ ನಿಯತ್ತು ಇಲ್ಲದೆ ಜೆಡಿಎಸ್‌ಗೆ ಹೋದವರೆಲ್ಲ ಯಡಿಯೂರಪ್ಪ ಬಗ್ಗೆ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಬೇರೆ ಪಕ್ಷ ಮಾಡಿದಾಗ ಬಿಜೆಪಿ ಪಕ್ಷ ನಡೆಸಲು ಇವರಿಗೆ ಆಗಲಿಲ್ಲ. ಪಕ್ಷ ಶಕ್ತಿ ಕಳೆದುಕೊಂಡಿತ್ತು. ಮತ್ತೆ ಯಡಿಯೂರಪ್ಪ ಬಂದರು ಪಕ್ಷಕ್ಕೆ ಅಧಿಕಾರ ಬಂತು. ಯಡಿಯೂರಪ್ಪ ಇನ್ನು ಶಕ್ತಿ ಉಳಿಸಿಕೊಂಡಿದ್ದಾರೆ ಎಂದರು.

ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಎಲ್ಲರನ್ನು ಪದಾಧಿಕಾರಿಗಳಾಗಿ ಮಾಡಲು ಸಾಧ್ಯವಿಲ್ಲ. ಪಕ್ಷದ ನಿಯಮಾನುಸಾರ ಯಾರನ್ನು ಮಾಡಲು ಸಾಧ್ಯವೋ ಅಂಥವರನ್ನು ಮಾಡುತ್ತಾರೆ. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಟಿಕೆಟ್‌ ಸಿಕ್ಕಿಲ್ಲ. ಆದರೆ ಪಕ್ಷ ಹೇಳಿತು ನಾವು ಪಕ್ಷದ ಕೆಲಸ ಮಾಡಿದೆವು. ಇದು ಪಕ್ಷ ನಿಷ್ಠೆ ಎಂದು ಸಮರ್ಥಿಸಿಕೊಂಡರು. ಪಕ್ಷ ವಿರೋಧಿ ಚಟುವಟಿಕೆ ಯಾರೇ ಮಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next