ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಿವುಡ್, ಕ್ರೀಡಾ ಕ್ಷೇತ್ರದ ಗಣ್ಯರನ್ನು ಕಣಕ್ಕೆ ಇಳಿಸುವ ಇರಾದೆಯಲ್ಲಿದೆ. ಅದಕ್ಕೆ ಪೂರಕವಾಗಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅನುಪಮ್ ಖೇರ್, ನಾನಾ ಪಾಟೇಕರ್ ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಅಕ್ಷಯ ಕುಮಾರ್ ಅವರನ್ನು ಪಂಜಾಬ್ ಅಥವಾ ದಿಲ್ಲಿ, ಪಾಟೇಕರ್ ಅವರನ್ನು ಮಹಾರಾಷ್ಟ್ರ ಮತ್ತು ಖೇರ್ ಗೆ ಹೊಸದಿಲ್ಲಿಯಿಂದ ಸ್ಪರ್ಧಿಸಲು ಅವಕಾಶ ನೀಡಲು ವರಿಷ್ಠರು ಮುಂದಾಗಲಿದ್ದಾರೆ ಎಂದು ಬಿಜೆಪಿಯ ನಾಯಕರಿಬ್ಬರು ‘ದ ಹಿಂದುಸ್ತಾನ್ ಟೈಮ್ಸ್’ ಗೆ ಮಾಹಿತಿ ನೀಡಿದ್ದಾರೆ. ಆದರೆ, ನಟ ಅಕ್ಷಯ ಕುಮಾರ್ ಕೆನಡಾ ಪ್ರಜೆಯಾಗಿದ್ದು, ಅವರು ಭಾರತದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದರೆ ದೇಶದ ಪೌರತ್ವ ಪಡೆದುಕೊಳ್ಳಬೇಕಾಗುತ್ತದೆ.
120 ಕ್ಷೇತ್ರಗಳಿಗೆ ಒತ್ತು: ಕರ್ನಾಟಕ ಹೊರತಾಗಿ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ. ಹೀಗಾಗಿ ಇಲ್ಲಿ ಸಿನಿಮಾ ಕ್ಷೇತ್ರ ಸೇರಿದಂತೆ ಇನ್ನಿತರ ಕ್ಷೇತ್ರಗಳ ಪ್ರಮುಖರನ್ನು ಚುನಾವಣೆಗೆ ನಿಲ್ಲಿಸಿ, ಅಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಳ್ಳುವುದು ಪಕ್ಷದ ಇರಾದೆ ಎಂದು ಆ ನಾಯಕದ್ವಯರು ಹೇಳಿಕೊಂಡಿದ್ದಾರೆ.
ಗೆದ್ದಿದ್ದರು: 2014ರ ಚುನಾವಣೆಯಲ್ಲಿ ಕರ್ನಾಟಕದ ಪತ್ರಕರ್ತ ಪ್ರತಾಪ್ ಸಿಂಹ, ಮುಂಬಯಿಯ ನಿವೃತ್ತ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್, ನಿವೃತ್ತ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್, ಗಾಯಕರಾಗಿರುವ ಮನೋಜ್ ತಿವಾರಿ, ಬಾಬುಲಾಲ್ ಸುಪ್ರಿಯೋ, ನಟ- ನಟಿಯರಾದ ಪರೇಶ್ ರಾವಲ್, ಕಿರಣ್ ಖೇರ್‌ಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು ಮತ್ತು ಅವರೆಲ್ಲರೂ ಗೆದ್ದಿದ್ದರು.
ಹಾಲಿ ಲೋಕಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನಗಳನ್ನು ಗೆದ್ದಿದೆ. ಈ ಪೈಕಿ 232 ಸ್ಥಾನಗಳನ್ನು ಉತ್ತರ ಪ್ರದೇಶ, ಬಿಹಾರ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ಗಳಿಂದಲೇ ಗೆದ್ದುಕೊಂಡಿದೆ. ಮುಂದಿನ ಚುನಾವಣೆಯಲ್ಲಿಯೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆದ್ದುಕೊಳ್ಳಲು ಬಿಜೆಪಿ ಯೋಚಿಸುತ್ತಿದೆ. ಅದಕ್ಕಾಗಿ ಪದ್ಮ ಸರಣಿ ಪ್ರಶಸ್ತಿ ಪುರಸ್ಕೃತರು, ಕ್ರೀಡಾಪಟುಗಳು ಸೇರಿದಂತೆ ಇತರ ಕ್ಷೇತ್ರದ ಗಣ್ಯರನ್ನು ಸ್ಪರ್ಧೆಗೆ ಆಹ್ವಾನಿಸಲು ಮುಂದಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ನಾಯಕರು ಹೇಳಿದ್ದಾರೆ.
ಸಿಕಂದರಾಬಾದ್ ನಿಂದ ಸ್ಪರ್ಧೆಗೆ ಅಜರುದ್ದೀನ್ ಒಲವು
2009ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆದ್ದಿದ್ದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ 2019ರಲ್ಲಿ ಸಿಕಂದರಾಬಾದ್‌ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇದು ತಮ್ಮ ವೈಯಕ್ತಿಕ ಆಶಯ.ಕಾಂಗ್ರೆಸ್ ವರಿಷ್ಠರು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ‘ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ತಮ್ಮ ಅಭಿಪ್ರಾಯ ತಿಳಿಸಿದಾಗ ಸ್ಥಳೀಯರು ಅದನ್ನು ಸ್ವಾಗತಿಸಿದ್ದಾರೆ ಎಂದು ಹೇಳಿದ್ದಾರೆ. ಇದರ ಜತೆಗೆ ಕಾಂಗ್ರೆಸ್ ನ ತೆಲಂಗಾಣ ಉಸ್ತುವಾರಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಗೂ ತಮ್ಮ ಆಶಯ ತಿಳಿಸಿದ್ದಾಗಿ ಹೇಳಿದ್ದಾರೆ ಅಜರುದ್ದೀನ್.
– 2014ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ವಿವಿಧ ಕ್ಷೇತ್ರಗಳ ಗಣ್ಯರು
– ಪಕ್ಷ ಗೆಲ್ಲದ 120 ಕ್ಷೇತ್ರಗಳ ಮೇಲೆ ವಿಶೇಷ ಒತ್ತು ನೀಡಲು ನಿರ್ಧಾರ
– ಮತ್ತಷ್ಟು ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸುವುದು ಬಿಜೆಪಿ ಯೋಜನೆ
– ಸದ್ಯ 282 ಕ್ಷೇತ್ರಗಳಲ್ಲಿ ಗೆಲುವು