ಬೆಂಗಳೂರು:ಕಳೆದ ಒಂದು ವರ್ಷದಿಂದ ರಾಜ್ಯದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಯವರ ಕುತಂತ್ರ ತಡೆಗಟ್ಟಲು, ನಮ್ಮ ಪಕ್ಷದ ಎಲ್ಲಾ 21 ಸಚಿವರು ಸ್ವಯಂಪ್ರೇರಿತರಾಗಿ ಸಚಿವಗಿರಿಗೆ ರಾಜೀನಾಮೆ ನೀಡಿದ್ದಾರೆ. ಈ ಬಾರಿಯೂ ಬಿಜೆಪಿಯ ಪ್ರಯತ್ನಿ ವಿಫಲವಾಗುತ್ತದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಚರ್ಚೆ ನಡೆಸಿದ ನಂತರ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಸಿಎಲ್ ಪಿ ಅಧ್ಯಕ್ಷ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಪಶ್ಚಿಮಬಂಗಾಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಶಾಸಕರನ್ನು ಖರೀದಿಸಿರುವ ಬಿಜೆಪಿ ಇದೀಗ ಕರ್ನಾಟಕದಲ್ಲಿಯೂ ಕಳೆದ ಒಂದು ವರ್ಷದಿಂದ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ನಾವೇನೂ ಮಾಡುತ್ತಿಲ್ಲ, ಅತೃಪ್ತ ಶಾಸಕರೇ ರಾಜೀನಾಮೆ ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಹೊಸ ನಾಟಕವಾಡುತ್ತಿದೆ. ಈಗಾಗಲೇ ಐದು ಬಾರಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಜೆಪಿ ಯತ್ನಿಸಿದ್ದು, ಇದೀಗ 6ನೇ ಬಾರಿಯೂ ವಿಫಲವಾಗಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ನಮ್ಮ ಶಾಸಕರು ಸಚಿವ ಸ್ಥಾನಕ್ಕೆ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ ಎಂದರು.
ಯಾರೆಲ್ಲ ಅತೃಪ್ತರಿದ್ದಾರೆ ಅವರ ಬೇಡಿಕೆಗಳನ್ನು ನಾವು ಈಡೇರಿಸುತ್ತೇವೆ. ನಿಮಗೆ ಮಂತ್ರಿಸ್ಥಾನವನ್ನು ನೀಡುತ್ತೇವೆ. ಹೀಗಾಗಿ ರಾಜೀನಾಮೆ ನೀಡಿರುವ ಶಾಸಕರು ವಾಪಸ್ ಬರಲಿ. ಯಾವುದೇ ರೀತಿಯಲ್ಲಿ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಈ ಮೂಲಕ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಕೆಲವು ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕೆಲವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದರು. ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ಸಂಪುಟ ಪುನಾರಚನೆ ಮಾಡುವುದಾಗಿ ತಿಳಿಸಿದರು.
ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳಲಿದ್ದಾರೆ.