Advertisement
ಒಂದೆಡೆ ಹಿಂದುಳಿದ ವರ್ಗಗಳ (ಒಬಿಸಿ) ಮುಖಂಡರನ್ನು ಒಲಿಸಿ ಪಕ್ಷಕ್ಕೆ ಸೇರಿಸಿಕೊಂಡು, ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದ್ದರೆ, ಮತ್ತೂಂದೆಡೆ, ಕಾಂಗ್ರೆಸ್‌ನ ಈ ತಂತ್ರವನ್ನು ವಿಫಲಗೊಳಿಸಲು ಒಬಿಸಿ ಆಯೋಗದ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ಕೂಡ ಪ್ರತಿತಂತ್ರ ಹೆಣೆದಿದೆ.
Related Articles
Advertisement
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಹೊರಬಂದ ಮೇಲೆ ಅವರನ್ನು ಬಿಜೆಪಿ ಒಬಿಸಿ ಮೋರ್ಚಾ ಪ್ರಭಾರಿಯಾಗಿ ನೇಮಿಸಲಾಗಿತ್ತು. ಅಲ್ಲದೆ, ಒಬಿಸಿ ಮೋರ್ಚಾದಿಂದ ಎಲ್ಲಾ ಜಿಲ್ಲೆಗಳಲ್ಲಿ ಒಬಿಸಿ ಸಮಾವೇಶಗಳನ್ನು ನಡೆಸಿ ಅದರ ಮೂಲಕ ಒಬಿಸಿ ಆಯೋಗದ ವಿಚಾರ ಪ್ರಸ್ತಾಪಿಸಲು ನಿರ್ಧರಿಸಿತ್ತು.
ಆದರೆ, ನ. 2ರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ನಡೆಯುತ್ತಿರುವ ಕಾರಣ ಸಮಯದ ಕೊರತೆಯಿಂದ ಒಬಿಸಿ ಸಮಾವೇಶ ಸಾಧ್ಯವಾಗುತ್ತಿಲ್ಲ. ಹೀಗಾಗಿ ಯಾತ್ರೆ ವೇಳೆಯೇ ಎಲ್ಲಾ ಕಡೆ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಕಾಂಗ್ರೆಸ್ ಅಡ್ಡಿಪಡಿಸುತ್ತಿರುವ ವಿಚಾರವನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ಯಾವ ರೀತಿ ಹಿಂದುಳಿದ ವರ್ಗದವರನ್ನು ವಂಚಿಸುತ್ತಿದೆ ಎಂದು ವಿವರಿಸುವ ಮೂಲಕ ಆ ಸಮುದಾಯವನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ನಿರ್ಧರಿಸಿದೆ.
ಹಲವು ವರ್ಷಗಳ ಬೇಡಿಕೆ:ಹಲವು ವರ್ಷಗಳಿಂದಲೂ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವಂತೆ ಒಬಿಸಿ ಸಮುದಾಯ ಬೇಡಿಕೆ ಇಡುತ್ತಲೇ ಬಂದಿತ್ತು. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದರಿಂದ ಎಸ್‌ಸಿ ಎಸ್‌ಟಿ ಆಯೋಗಕ್ಕೆ ಸಮಾನವಾಗಿ ಇದು ಕಾರ್ಯನಿರ್ವಹಿಸಬಹುದಾಗಿದೆ. ಅಲ್ಲದೆ ಒಬಿಸಿ ಮೀಸಲಾತಿಗೆ 6 ಲಕ್ಷ ರೂ. ಆದಾಯ ಮಿತಿಯನ್ನು 8 ಲಕ್ಷ ರೂ.ಗೆ ಹೆಚ್ಚಿಸುವುದರ ಜತೆಗೆ, ಒಬಿಸಿಯಲ್ಲಿ ಉಪ ಸಮುದಾಯಗಳನ್ನು ಗುರುತಿಸಲು ಬಿಜೆಪಿ ಪ್ರಸ್ತಾವನೆ ರೂಪಿಸಿತ್ತು. ಆದರೆ, ಈ ವಿಧೇಯಕಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸಿದ್ದರಿಂದ, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಲು ಇದನ್ನೇ ಬಳಸಲು ಬಿಜೆಪಿ ನಿರ್ಧರಿಸಿದೆ. ಹಾರ್ದಿಕ್ ಪಟೇಲ್ ಬಂಟರು ಬಿಜೆಪಿಗೆ:
ನಾಟಕೀಯ ಬೆಳವಣಿಗೆಯೊಂದರಲ್ಲಿ ಗುಜರಾತ್‌ನ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್‌ರ ಆಪ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಹಾರ್ದಿಕ್‌ರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ವರುಣ್ ಪಟೇಲ್ ಮತ್ತು ರೇಷ್ಮಾ ಪಟೇಲ್ ಮೀಸಲು ಹೋರಾಟದ ಮುಖ್ಯಭೂಮಿಕೆಯಲ್ಲಿದ್ದರು. ಅಷ್ಟೇ ಅಲ್ಲ, ಬಿಜೆಪಿ ಆಡಳಿತವನ್ನು ಹಲವು ಬಾರಿ ವಿರೋಧಿಸಿದ್ದರು. ಆದರೆ ಭಾನುವಾರ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಇತರ ಮುಖಂಡರ ಜತೆ ಮಾತುಕತೆ ನಡೆಸಿದ ಬಳಿಕ ಪಕ್ಷ ಸೇರ್ಪಡೆ ಘೋಷಣೆ ಮಾಡಿದ್ದಾರೆ. ಗುಜರಾತ್‌ನಲ್ಲಿ ಅಠಾವಳೆ ಬೆಂಬಲ:
ಇನ್ನೊಂದೆಡೆ, ಮಹಾರಾಷ್ಟ್ರದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಮುಖ್ಯಸ್ಥ ರಾಮದಾಸ್ ಅಠಾವಳೆ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಅಠಾವಳೆ ನೇತೃತ್ವದ ಪಕ್ಷ ಎನ್‌ಡಿಎ ಅಂಗವಾಗಿದೆ. ಅಲ್ಲದೆ ಬಿಜೆಪಿಯೊಂದಿಗೆ ಜಗಳಕ್ಕಿಳಿಯಬೇಡಿ ಎಂದು ಶಿವಸೇನೆಗೂ ಅವರು ಸಲಹೆ ನೀಡಿದ್ದಾರೆ.