ನವದೆಹಲಿ: ಮೋದಿ ಸರಕಾರದ 8ನೇ ವಾರ್ಷಿಕೋತ್ಸವದ ಅಂಗವಾಗಿ ಸರಕಾರದ ಸಾಧನೆ ಮತ್ತು ಯೋಜನೆ ಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಅಭಿಯಾನ ಕೈಗೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ.
ಕೇಂದ್ರ ಸರಕಾರ ಮತ್ತು ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಸರಕಾರಗಳ ಎಲ್ಲ ಸಚಿವರು, ಎಲ್ಲ ಜನಪ್ರತಿ ನಿಧಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಜೆಪಿಯು ಮೋದಿ ಸರಕಾರದ 8ನೇ ವರ್ಷಾಚರಣೆಯನ್ನು ಮೇ 30ರಿಂದ ಜೂ. 14ರ ವರೆಗೆ ನಡೆಸಲಿದೆ.
“ಸೇವೆ, ಬಡವರ ಕ್ಷೇಮಾಭಿವೃದ್ಧಿ ಮತ್ತು ಉತ್ತಮ ಆಡಳಿತ’ ಎಂಬ ಥೀಮ್‌ನೊಂದಿಗೆ ದೇಶಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೆ 75 ತಾಸುಗಳ ಜನಸಂಪರ್ಕ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ -ರಾಜ್ಯ ಸಚಿವರು, ಜನಪ್ರತಿನಿಧಿಗಳು ಪ್ರತೀ ಗ್ರಾಮಕ್ಕೂ ತೆರಳಿ ಪಾಲ್ಗೊಳ್ಳಲಿದ್ದಾರೆ.
ರೈತರು, ಮಹಿಳೆಯರು, ಎಸ್‌ಸಿ- ಎಸ್‌ಟಿಗಳು, ಒಬಿಸಿಗಳು ಮತ್ತು ಅಲ್ಪಸಂಖ್ಯಾಕರನ್ನು ತಲುಪುವುದೇ ಇದರ ಉದ್ದೇಶ ಎಂದು ಶನಿವಾರ ದಿಲ್ಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.