ಹೊಸದಿಲ್ಲಿ/ಅಹಮದಾಬಾದ್: ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಬಹುದು. ಆದರೆ 2012ನೇ ಸಾಲಿಗೆ ಹೋಲಿಕೆ ಮಾಡಿದರೆ ಹಾಲಿ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಇದರ ಹೊರತಾ ಗಿಯೂ ಕನಿಷ್ಠ 150 ಸ್ಥಾನಗಳನ್ನು ಗಳಿಸಲೇಬೇಕೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಇನ್ನಿಲ್ಲದ ಪ್ರಯತ್ನ, ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿಯ ಜೈತ್ರ ಯಾತ್ರೆ ಮುಂದುವರಿದಿದ್ದರೂ, ಅದರ ಸ್ಥಾನಗಳ ಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು “ಇಂಡಿಯಾ ಟುಡೇ’ ವರದಿ ಮಾಡಿದೆ. 2002ರ ಚುನಾವಣೆಯಲ್ಲಿ 127 ಸ್ಥಾನಗಳನ್ನು ಗೆದ್ದು, ಶೇ.49.8ರಷ್ಟು ಮತಗಳನ್ನು ಪಡೆದಿತ್ತು. ಅದು ಬಿಜೆಪಿ ಪಡೆದ ಹೆಚ್ಚಿನ ಸ್ಥಾನಗಳು. 2007ರಲ್ಲಿ 117 ಸ್ಥಾನಗಳನ್ನು ಗೆದ್ದು, ಶೇ.49.1 ಮತ ಪಡೆದಿತ್ತು. 2012ರಲ್ಲಿ 115 ಸ್ಥಾನಗಳಲ್ಲಿ ಗೆದ್ದು, ಶೇ.47.85ರಷ್ಟು ಅಂದರೆ ಶೇಕಡಾವಾರು ಲೆಕ್ಕಾಚಾರ ಹಾಕುವುದಿದ್ದರೆ 1.95ರಷ್ಟು ಮತ ಮತ್ತು ಸಾಂಖೀಕವಾಗಿ 12 ಸ್ಥಾನಗಳನ್ನು ಆಡಳಿತಾರೂಢ ಪಕ್ಷ ಕಳೆದುಕೊಂಡಿದೆ.
ಸುಧಾರಿಸಿದೆ ಕಾಂಗ್ರೆಸ್: 2002ರಲ್ಲಿ ಕಾಂಗ್ರೆಸ್ 51 ಸ್ಥಾನ ಗೆದ್ದು, ಶೇ.39.3 ಪ್ರಮಾಣದ ಮತ ಪಡೆದಿತ್ತು. 2007ರಲ್ಲಿ 59 ಸ್ಥಾನಗಳನ್ನು ಗೆದ್ದು ಶೇ.38ರಷ್ಟು ಮತ ಗಳಿಸಿತ್ತು. 2012ರಲ್ಲಿ 61 ಸ್ಥಾನ ಗೆದ್ದು, ಶೇ.38.93ರಷ್ಟು ಮತ ಪಡೆದಿತ್ತು.
ಭಾರೀ ಭ್ರಷ್ಟಾಚಾರ: ದಕ್ಷಿಣ ಗುಜರಾತ್‌ನಲ್ಲಿ ಪ್ರಚಾರ ನಿರತರಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಭೂಸ್ವಾಧೀನ ಪ್ರಕ್ರಿಯೆ ಗುಜರಾತ್‌ನಲ್ಲಿ ಭಾರೀ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭೂಸ್ವಾಧೀನ ನಿಯಮಗಳನ್ನು ಬದಲು ಮಾಡುವುದಾಗಿ ಘೋಷಿಸಿದ್ದಾರೆ.
ಮೇವಾನಿ ಜತೆ ಭೇಟಿ: ದಲಿತ ನಾಯಕ ಜಿಗ್ನೇಶ್ ಮೇವಾನಿ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ದಲಿತ ಸಮುದಾಯದ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಬಗ್ಗೆ ವಾಗ್ಧಾನ ಸಿಕ್ಕಿದೆ ಎಂದಿದ್ದಾರೆ ಮೇವಾನಿ.