ವಿಧಾನಸಭೆ: ಬಿಜೆಪಿ ಸದಸ್ಯ ಡಿ.ಎನ್.ಜೀವರಾಜ್ ಸುಳ್ಳು ಹೇಳುತ್ತಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಹೇಳಿದ ಮಾತು ಅವರಿಬ್ಬರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು.
ನಾನು ಸುಳ್ಳು ಹೇಳುತ್ತೇನೆ ಎನ್ನುವ ಸಚಿವ ವಿನಯ್ ಕುಲಕರ್ಣಿ ಅವರ ನಾಲಿಗೆಗೂ ತಲೆಗೂ ಸಂಪರ್ಕವೇ ಇಲ್ಲ. ಅದಕ್ಕಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಜೀವರಾಜ್ ತಿರುಗೇಟು ನೀಡಿದರೆ, ನನ್ನ ತಲೆ ಸರಿಯಿದೆ. ನಿಮ್ಮ ತಲೆ ಮತ್ತು ನಾಲಿಗೆಗೆ ಸಂಪರ್ಕವಿಲ್ಲ ಎಂದು ಸಚಿವರು ಕಿಡಿ ಕಾರಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮರಳು ದಂಧೆ ಕುರಿತು ಮಾತನಾಡುತ್ತಾ ಟ್ರಾಕ್ಟರ್, ಎತ್ತಿನ ಗಾಡಿಗಳಲ್ಲಿ ಸ್ವಂತ ಬಳಕೆಗೆ ಮರಳು ಕೊಂಡೊಯ್ದರೆ ಹಿಡಿದು ಪ್ರಕರಣ ದಾಖಲಿಸಲಾಗುತ್ತದೆ. ಆದರೆ, ಲಾರಿಗಳಲ್ಲಿ ಟನ್‌ಗಟ್ಟಲೆ ಮರಳು ಅಕ್ರಮವಾಗಿ ಸಾಗಿಸಿದರೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದರು.
ಮಧ್ಯಪ್ರವೇಶಿಸಿದ ಜೀವರಾಜ್, ಶೃಂಗೇರಿ ಕ್ಷೇತ್ರದ ಹರಿಹರಪುರದಲ್ಲಿ ತಲೆ ಮೇಲೆ ಮೂಟೆಗಳಲ್ಲಿ ಮರಳು ಹೊತ್ತುಕೊಂಡು ಹೋಗುತ್ತಿದ್ದ ನಾಲ್ಕು ಮಂದಿಯನ್ನು ಹಿಡಿದು ಪ್ರಕರಣ ದಾಖಲಿಸಿ 10 ದಿನ ಜೈಲಿಗೆ ಕಳುಹಿಸಿದ್ದಾರೆ ಎಂದಾಗ, ಜೀವರಾಜ್ ಸುಳ್ಳು ಹೇಳುತ್ತಿದ್ದಾರೆ ಎಂದು ವಿನಯ್ ಕುಲಕರ್ಣಿ ಹೇಳಿದರು. ಇದರಿಂದ ಸಿಟ್ಟಾದ ಜೀವರಾಜ್, ಸಚಿವರ ನಾಲಿಗೆಗೂ ತಲೆಗೂ ಸಂಪರ್ಕವೇ ಇಲ್ಲ. ನಾನು ಹೇಳಿದ್ದು ಸುಳ್ಳಾದರೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.
ಈ ಬಗ್ಗೆ ದಾಖಲೆಗಳನ್ನು ಕೊಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದಾಗ, ಡಾ.ಜಿ.ಪರಮೇಶ್ವರ್ ಅವರು ಗೃಹ ಸಚಿವರು ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ತಲೆ ಮೇಲೆ ಮರಳು ಹೊತ್ತು ಸಾಗುತ್ತಿದ್ದ ನಾಲ್ವರು ಮುಸ್ಲಿಮರನ್ನು ಹರಿಹರಪುರ ಪೊಲೀಸರು ಬಂಧಿಸಿ 10 ದಿನ ಜೈಲಿಗೆ ಕಳುಹಿಸಿದ್ದರು. ಇದಕ್ಕಿಂತ ಇನ್ನೇನು ಮಾಹಿತಿ ಬೇಕು ಎಂದು ಪ್ರಶ್ನಿಸಿದರು. ಆಗ ಸಚಿವ ವಿನಯ್ ಕುಲಕರ್ಣಿ ಸುಮ್ಮನಾದರು.