Advertisement

ಮೊಳಗಿದೆ ಬಿಜೆಪಿಯ ಚುನಾವಣೆ ಸಿದ್ಧತಾ ಕಹಳೆ: ಇಂದು 3 ಜಿಲ್ಲೆಗಳ ಕೋರ್‌ ಕಮಿಟಿ, ಪ್ರಮುಖರ ಸಭೆ

12:40 AM Apr 12, 2022 | Team Udayavani |

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಗೆ ಕರಾವಳಿಯಲ್ಲಿ ಬಿಜೆಪಿ ಮೂಹರ್ತವಿಟ್ಟಿದ್ದು ಜಿಲ್ಲಾ ಮಟ್ಟದ ಮತ್ತು ತಳಮಟ್ಟದಲ್ಲಿ ಮುಂಚೂಣಿಯಲ್ಲಿರುವ ನಾಯಕರೊಂದಿಗೆ ಸಂವಾದ ಆರಂಭಿಸಿದೆ.

Advertisement

ರಾಜ್ಯದಲ್ಲಿ ಚುನಾವಣ ಸಿದ್ಧತೆಗಾಗಿ ಬಿಜೆಪಿಯಿಂದ ಹಿರಿಯ ನಾಯಕರನ್ನು ಒಳಗೊಂಡು ರಚನೆಯಾಗಿರುವ ಮೂರು ತಂಡಗಳ ಪೈಕಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ತಂಡ ಮಂಗಳವಾರ ಹಾಗೂ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಪಕ್ಷದ ಕೋರ್‌ ಕಮಿಟಿಗಳು, ಪ್ರಮುಖರ ಸಭೆ ನಡೆಸಿ ಚುನಾವಣೆ ಸಿದ್ದತೆಗಳ ಬಗ್ಗೆ ಚರ್ಚೆ ನಡೆಸಲಿದೆ.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಶ್ರೀರಾಮುಲು, ಡಾ| ಅಶ್ವತ್ಥ ನಾರಾಯಣ, ನಾಯಕರಾದ ಬಿ.ವೈ. ವಿಜೆಯೇಂದ್ರ, ನಿರ್ಮಲ ಕುಮಾರ್‌ ಸುರಾನ, ಲಕ್ಷ್ಮಣ ಸವದಿ, ನಯನಾ ಗಣೇಶ್‌ ಹಾಗೂ ಸಂಯೋಜಕ ವಿನಯ ಬಿದರೆ ಇರುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಶ್ರೀರಾಮುಲು ಅವರು ಈಗಾಗಲೇ ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾರೆ.

ನಗರದ ಖಾಸಗಿ ಹೊಟೇಲ್‌ ಸಭಾಂ ಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಭೆ ನಡೆಯಲಿದೆ. ಪ್ರಥಮವಾಗಿ ಉಡುಪಿ ಜಿಲ್ಲೆಯ ಕೋರ್‌ ಕಮಿಟಿಯ ಸಭೆ ಜರಗಲಿದೆ. ಬಳಿಕ ಮಾಜಿ ಶಾಸಕರು, ವಿಧಾನಪರಿಷತ್‌ ಸದಸ್ಯರು ಸಹಿತ ಜಿಲ್ಲಾ ಪ್ರಮುಖರ ಸಭೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಕೊಡಗು ಜಿಲ್ಲೆಯ ಕೋರ್‌ ಕಮಿಟಿ ಸಭೆ ಬಳಿಕ ಪ್ರಮುಖರ ಸಭೆ ನಡೆಯಲಿದೆ. ರಾತ್ರಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದೆ. ಬುಧವಾರ ಬೆಳಗ್ಗೆ 10 ಗಂಟೆಗೆ ಬ್ರಹ್ಮರಕೂಟ್ಲುವಿನ ಬಂಟವಾಳ ಬಂಟರ ಭವನದಲ್ಲಿ ಬಿಜೆಪಿ ಶಕ್ತಿಕೇಂದ್ರಗಳ ಪ್ರಮುಖರ, ಪಕ್ಷದ ಪ್ರಮುಖರ ಸಭೆ ನಡೆಯಲಿದೆ.

ಸಲಹೆ, ಸಮಾಲೋಚನೆ
ತಂಡದ ನಾಯಕರು ಪ್ರತಿಯೊಂದು ಜಿಲ್ಲೆಗಳ ಕೋರ್‌ಕಮಿಟಿ ಸಭೆಯಲ್ಲಿ ಆಯಾಯ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ, ಚುನಾವಣೆಗೆ ನಡೆಯಬೇಕಾದ ತಯಾರಿ, ಮುಂದಿನ ಒಂದು ವರ್ಷದ ಅವಧಿಯಲ್ಲಿ ಜಿಲ್ಲಾ ಮಟ್ಟದಲ್ಲಿ ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.ಬಳಿಕ ಶಕ್ತಿಕೇಂದ್ರಗಳು, ಮಂಡಲ, ಜಿಲ್ಲಾ ಸಮಿತಿ ನಾಯಕರು, ಜಿಲ್ಲೆಯ ಪ್ರಮುಖರ ಜತೆ ಸಂವಾದ ನಡೆಸಿ ಪಕ್ಷ ಸಂಘಟನೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬೂತ್‌, ಮಂಡಲ ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಸಬೇಕಾದ ಚುನಾವಣ ಸಿದ್ಧತೆಗಳ ಬಗ್ಗೆ ಸಲಹೆಗಳನ್ನು ಸ್ವೀಕರಿಸಲಿದ್ದಾರೆ. ಚುನಾವಣೆಗೆ ತಳಮಟ್ಟದಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next