ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸೋಮವಾರ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಪರ ರೋಡ್ ಶೋ ನಡೆಸಿ ಮತಯಾಚಿಸಿದರು.
ನಗರದ ಬನಶಂಕರಿ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ ದಿನೇಶ್ ಗುಂಡೂರಾವ್ ಅವರಿಗೆ ಮಾಜಿ ಸಚಿವೆ ಮೋಟಮ್ಮ, ಕಾಂಗ್ರೆಸ್ ಹಿರಿಯ ಮುಖಂಡ ಗುರಪ್ಪ ನಾಯ್ಡು, ಪದ್ಮನಾಭ ನಗರ ಜೆಡಿಎಸ್ ನಾಯಕ ಗೋಪಾಲ್ ಹಾಗೂ ಸ್ಥಳೀಯ ಮುಖಂಡರು ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, 70 ವರ್ಷಗಳ ಕಾಲ ಕಾಂಗ್ರೆಸ್ ಕೈಯಲ್ಲಿ ದೇಶ ಸುಭದ್ರವಾಗಿತ್ತು. ಆದರೆ ಬಿಜೆಪಿ, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಒಡೆದಾಳುತ್ತಿದೆ. ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದೆ. ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ನಗಣ್ಯ ಎಂದು ಟೀಕಿಸಿದರು.
ನೆಹರೂ ಕಾಲದಿಂದಲೂ ಕಾಂಗ್ರೆಸ್ ಬೆಂಗಳೂರು ನಗರಕ್ಕೆ ಹಲವು ಕೊಡುಗೆಗಳನ್ನು ನೀಡಿದೆ. ಎಚ್‌ಎಎಲ್, ಬಿಎಚ್‌ಇಎಲ್ ನಂತಹ ಸಾರ್ವಜನಿಕ ಉದ್ದಿಮೆಗಳನ್ನು ಆರಂಭಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಹಿರಿದಾಗಿದೆ ಎಂದು ಹೇಳಿದರು.
ಬೆಳಗ್ಗೆ ಬನಶಂಕರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಬಿ.ಕೆ.ಹರಿಪ್ರಸಾದ್, ಪದ್ಮನಾಭ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮೋನೊಟೈಪ್‌ನಲ್ಲಿ ರೋಡ್ ಶೋ ನಡೆಸಿದರು.