Advertisement

ಸಮುದಾಯವನ್ನು ವಿಭಜಿಸುವುದು ಸರ್ಕಾರದ ಹುನ್ನಾರ : ಬಿಜೆಪಿ ಆರೋಪ 

06:20 AM Mar 20, 2018 | Team Udayavani |

ಬೆಂಗಳೂರು: ವೀರಶೈವ- ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್‌ ಸರ್ಕಾರ ವಿಭಜಿಸಿದ್ದು, ಚುನಾವಣಾ ಲಾಭಕ್ಕಾಗಿ ಕೈಗೊಂಡ ರಾಜಕೀಯ ಉದ್ದೇಶಿತ ನಿರ್ಧಾರವಾಗಿದೆ. ಆ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಸಿವು ಷಡ್ಯಂತ್ರ ನಡೆಸಿದೆ ಎಂದು ರಾಜ್ಯ ಬಿಜೆಪಿ ದೂರಿದೆ.

Advertisement

ಈ ಸಂಬಂಧ ರಾಜ್ಯ ಬಿಜೆಪಿ ಸಹ ವಕ್ತಾರರಾದ ಮೋಹನ್‌ ಲಿಂಬಿಕಾಯಿ ಹಾಗೂ ಶಶಿಲ್‌ ನಮೋಶಿ ಅವರು ಸೋಮವಾರ ಜಂಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ವೀರಶೈವ- ಲಿಂಗಾಯತ ಸಮುದಾಯ ಸದಾ ಒಗ್ಗಟ್ಟಿನಿಂದಿದ್ದು, ಈ ಸಮುದಾಯಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಬಿಜೆಪಿಯ ನಿಲುವು. ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಎರಡೂ ಒಂದೇ ಸಮುದಾಯ ಎಂದು ಹೇಳಿದ್ದು, ಅವರು ಕೈಗೊಳ್ಳುವ ತೀರ್ಮಾನಕ್ಕೆ ರಾಜ್ಯ ಬಿಜೆಪಿಯೂ ಬದ್ಧವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವೀರಶೈವ- ಲಿಂಗಾಯತರು ಮೊದಲಿನಿಂದಲೂ ಒಂದೇ ಸಮುದಾಯದವರಾಗಿದ್ದು, ಎಂದಿಗೂ ಪ್ರತ್ಯೇಕವಾಗಿರಲಿಲ್ಲ. ಆದರೆ ಸರ್ಕಾರ ವಿಭಜಿಸಲು ಮುಂದಾಗಿದೆ. ತಜ್ಞರ ಸಮಿತಿಯು ವೀರಶೈವ- ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ಸ್ಥಾನಮಾನ ಕುರಿತು ನಿರ್ಧರಿಸಲು ಆರು ತಿಂಗಳ ಕಾಲಾವಕಾಶ ಕೋರಿತ್ತು. ಆದರೆ ಸರ್ಕಾರ ಒತ್ತಡ ಹೇರಿ ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಮಾಡುವ ಮೂಲಕ ರಾಜಕೀಯ ಲಾಭಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯ ಅಂತ್ಯದಲ್ಲಿ ಒಡೆದು ಆಳುವ ರಾಜಕೀಯ ಮಾಡುತ್ತಿದ್ದಾರೆ. ಪಕ್ಷಪಾತದ ವರದಿ ಆಧರಿಸಿ ಯಾವುದೇ ಸಮುದಾಯ ಪ್ರತ್ಯೇಕ ಧರ್ಮ ಆಗಬೇಕೆ, ಬೇಡವೇ ಎಂಬುದನ್ನು ತೀರ್ಮಾನಿಸುವುದು ರಾಜ್ಯ ಸರ್ಕಾರದ ಕೆಲಸವಲ್ಲ. ಹಾಗಿದ್ದರೂ ಕಾಂಗ್ರೆಸ್‌ ಸರ್ಕಾರ ವೀರಶೈವ- ಲಿಂಗಾಯತ- ಬಸವ ತತ್ವ ಅನುಯಾಯಿಗಳಿಗೆ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ನಿರ್ಧಾರ ಕೈಗೊಂಡಿದೆ ಎಂದು ದೂರಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಅಲ್ಪಸಂಖ್ಯಾತ ಆಯೋಗವು ಈಗಾಗಲೇ ಅಸ್ತಿತ್ವದಲ್ಲಿರುವ ಜಾತಿಗಳಿಗೆ ಸ್ಥಾನಮಾನ ನೀಡುವ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬಹುದಾಗಿದ್ದರೂ ಈ ಪ್ರಕರಣ ವಿಭಿನ್ನವಾಗಿದೆ. ಬಸವ ತತ್ವ ಅನುಯಾಯಿಗಳು ಎಂಬ ಪರಿಭಾಷೆಯೇ ಗೊಂದಲಕಾರಿಯಾಗಿದೆ. ಬಸವ ತತ್ವ ಅನುಯಾಯಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಹಲವು ಸಾಮಾಜಿಕ ಸಮುದಾಯಗಳಿವೆ ಎಂದು ಹೇಳಿದ್ದಾರೆ.

Advertisement

ಗ್ರಾಮೀಣ ಪ್ರದೇಶದಲ್ಲಿರುವ ಈ ಸಮುದಾಯದವರನ್ನು ಲಿಂಗಾಯತರೆಂದರೂ ನಗರ ಪ್ರದೇಶದಲ್ಲಿರುವವರನ್ನು ವೀರಶೈವರೆಂದು ಕರೆಯುವುದು ರೂಢಿಯಲ್ಲಿದೆ. ಸದ್ಯ ಲಿಂಗಾಯತರು ಪ್ರವರ್ಗ 3ಬಿ ಅಡಿ ಮೀಸಲಾತಿಗೆ ಅರ್ಹರೆಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಈ ಸಮುದಾಯ ಈಗಾಗಲೇ ಸೌಲಭ್ಯ ಪಡೆಯುತ್ತಿದೆ. ಮುಸ್ಲಿಮರು ಹಾಗೂ ಇತರೆ ಧರ್ಮೀಯರಿಗೆ ಅಲ್ಪಸಂಖ್ಯಾತರ ಪಾಲಿನ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಯಾಗಂತೆ ಖಾತರಿಪಡಿಸುವುದು ಇದರ ಉದ್ದೇಶ ಎಂದು ಉಲ್ಲೇಖೀಸಿದ್ದಾರೆ.

ಧರ್ಮ ಸ್ಥಾನಮಾನ ನೀಡುವ ವಿಷಯ ರಾಜ್ಯ ಸರ್ಕಾರದ ವ್ಯಾಪ್ತಿ ಮೀರಿದ್ದಾಗಿದೆ. ಧರ್ಮ ಮತ್ತು ಧಾರ್ಮಿಕ ವಿಷಯಗಳನ್ನು ಆಯಾ ಸಮುದಾಯದ ನಾಯಕರೇ ನಿರ್ಧರಿಸಬೇಕು. ಧಾರ್ಮಿಕ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂಬುದು ಬಿಜೆಪಿಯ ನಿಲುವಾಗಿದೆ. ರಾಜ್ಯ ಸರ್ಕಾರ ಸಮುದಾಯವನ್ನು ವಿಭಜಿಸಿ ಧರ್ಮದ ಆಧಾರದ ಮೇಲೆ ವಿಂಗಡಿಸುವ ಮೂಲಕ ಸಂಕಷ್ಟಕ್ಕೆ ದೂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಸವ ತತ್ವ ಅನುಸರಿಸುವವರು ಒಂದು ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಬಸವ ತತ್ವವು ಜಾಗತಿಕ ತತ್ವವಾಗಿದ್ದು, ಎಲ್ಲ ಸ್ತರದ ಜನರಿಗೂ ಅನ್ವಯವಾಗಲಿದೆ. ಕಾಂಗ್ರೆಸ್‌ ಸರ್ಕಾರವು ಈ ಸಮುದಾಯಕ್ಕೆ ಧಾರ್ಮಿಕ ಬಣ್ಣ ಹಚ್ಚಿ ಬಸವ ತತ್ವದ ಮೂಲ ಸಿದ್ಧಾಂತವನ್ನು ಹಾಳುಗೆಡವಿದೆ. ಧರ್ಮ, ಧಾರ್ಮಿಕ ವಿಷಯಗಳು ಸೂಕ್ಷ್ಮ ಹಾಗೂ ವ್ಯಕ್ತಿಗತ ಆಚರಣೆಯ ಸಂಗತಿಗಳು. ಆದರೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ರಾಜಕೀಯ ಬೆರೆಸಿದೆ. ಈ ವಿಷಯದಲ್ಲಿ ವೀರಶೈವ ಮಹಾಸಭಾ ಹಾಗೂ ಮಠಾಧಿಪತಿಗಳು ನಿರ್ಧಾರ ಕೈಗೊಳ್ಳಬೇಕು ಎಂಬ ನಿಲುವಿಗೆ ಬಿಜೆಪಿ ಮೊದಲಿನಿಂದಲೂ ಬದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next