ಪಿರಿಯಾಪಟ್ಟಣ: ಬಿಜೆಪಿ ಪಕ್ಷವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಈ ಸಂಘಟನೆಯನ್ನು ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಎಂದು ಮಂಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ತಿಳಿಸಿದರು.
ಪಟ್ಟಣದ ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯದ ಮುಂಭಾಗದಲ್ಲಿ ಬುಧವಾರ ಬಿಜೆಪಿ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಪಕ್ಷವು 1980 ಏಪ್ರಿಲ್ 06 ರಂದು ಸ್ಥಾಪನೆಯಾಗಿ ಈ 42 ವರ್ಷಗಳಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದೆ, ಪ್ರಾರಂಭದಲ್ಲಿ ಲೋಕಸಭೆಯಲ್ಲಿ ಕೇವಲ 2 ಸ್ಥಾನದಲ್ಲಿದ್ದ ಈ ಪಕ್ಷವು ಇಂದು ಮುನ್ನೂರಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದುವ ಮೂಲಕ ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ಅತ್ಯಂತ ಬಲಿಷ್ಠ ಪಕ್ಚವಾಗಿ ಮುನ್ನುಗ್ಗುತ್ತಿದ್ದು, ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ತುಷ್ಟೀಕರಣದ ನೀತಿ ದೇಶದ ರಕ್ಷಣೆಯಲ್ಲಿ ವಿಫಲ ಆಗಿರುವುದನ್ನು ಕಂಡು ದೇಶ ಭಕ್ತರು ಕೂಡಿ ಜನ ಸಂಘ ಸ್ಥಾಪಿಸಿದರು. ದೇಶದ ಆಡಳಿತದಲ್ಲಿ ಕಪ್ಪು ಚುಕ್ಕೆಯಾದ ತುರ್ತು ಪರಿಸ್ಥಿತಿಯ ನಂತರ ಜನಸಂಘ, ಸ್ವತಂತ್ರ ಪಕ್ಷಗಳು ಒಟ್ಟಾರೆ ಸೇರಿ ಕಾಂಗ್ರೆಸ್ ದುರಾಡಳಿತ ಕೊನೆಗಾಣಿಸಲು ಬಿಜೆಪಿ ಸ್ಥಾಪಿಸಿದರು. ಆದರೆ, ಕೆಲವು ರಾಜಕೀಯ ಪಕ್ಷಗಳು ಅಸಹಕಾರ ತೋರಿದ್ದರಿಂದ 1980ರ ಏ.6ರಂದು ಮುಂಬೈನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿ ಸ್ಥಾಪನೆಯಾಯಿತು. ಈ ಪಕ್ಷದ ಸಂಘಟನೆಗಾಗಿ ಉಪ ಮಾಜಿ ಪ್ರಧಾನಿ ಎಲ್.ಕೆ.ಅಡ್ವಾಣಿ, ದೀನ್ ದಯಾಳ್ ಉಪಾಧ್ಯಾಯ ಒಳಗೊಂಡಂತೆ ಅನೇಕ ಮಹನೀಯರು ಈ ಪಕ್ಷದ ಅಭ್ಯುದಯಕ್ಕಾಗಿ ಸರ್ವ ತ್ಯಾಗವನ್ನು ಮಾಡಿದ್ದಾರೆ ಅಂತಹವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಮಾತನಾಡಿ ಪಕ್ಷಕ್ಕಿಂತ ರಾಷ್ಟ್ರ ಮೊದಲು ಎಂಬ ವಿಚಾರದೊಂದಿಗೆ, ಜನರ ಸೇವೆಗಾಗಿ ಹುಟ್ಟಿಕೊಂಡಿರುವ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ, ಈ ದಿನದ ಸವಿ ನೆನಪಿಗಾಗಿ ಭೂತ್ ಮಟ್ಟದಿಂದ ರಾಷ್ಟ್ರೀಯ ಮಟ್ಟದ ವರೆವಿಗೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷಕ್ಕಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೂ ವಿಶೇಷವಾಗಿ ಗೌರವ ಸೂಚಿಸುವ ಮೂಲಕ ಹಬ್ಬವಾಗಿ ಆಚರಿಸಲಾಗುತ್ತಿದೆ ಎಂದರು.
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ರಾಜೇಗೌಡ ಮಾತನಾಡಿ ‘ತತ್ವ–ಸಿದ್ಧಾಂತದ ಆಧಾರದ ಮೇಲೆ ಸ್ಥಾಪನೆಯಾದ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಕೂಡ ರಾಷ್ಟ್ರೀಯ, ರಾಜ್ಯ, ಜಿಲ್ಲೆ, ಮಂಡಲ, ಬೂತ್ ಮಟ್ಟದಲ್ಲಿ ಪದಾಧಿಕಾರಿ ಆಗುವುದಕ್ಕೆ ಅವಕಾಶವಿದೆ. ಪ್ರಮಾಣಿಕರ ಶ್ರಮ ಗುರುತಿಸಿ ಅವರಿಗೆ ಸ್ಥಾನಮಾನ ಕೊಡುವ ಏಕೈಕ ಪಕ್ಷವಾಗಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ ಪಿ.ವಿ.ಬಸವರಾಜಪ್ಪ, ವಿ.ಜಿ.ಅಪ್ಪಾಜೀಗೌಡ, ಕಾಂತರಾಜೇ ಅರಸ್, ಕೆ.ಕೆ.ಶಶಿ, ಆರ್.ಟಿ.ಸತೀಶ್ ರವರನ್ನು ಸನ್ಮಾನಿಸಲಾಯಿತು ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಸಂಸ್ಥಾಪನಾ ದಿನದ ಸವಿನೆನಪಿಗಾಗಿ ಪೊಲೀಸ್ ಠಾಣೆಯ ಮುಂಭಾಗದಿಂದ ಬಿ.ಎಂ.ರಸ್ತೆಯ ಮೂಲಕ ಶೋಭಯಾತ್ರೆ ನಡೆಸದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಸಿ.ವೀರಭಧ್ರ, ಬೆಮ್ಮತ್ತಿ ಚಂದ್ರು, ಜಿಲ್ಲಾ ಉಪಾಧ್ಯಕ್ಷ ಅಪ್ಪಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದ, ಕಾರ್ಯಕ್ರಮದ ಉಸ್ತುವಾರಿ ಹೇಮಂತ್ ಕುಮಾರ್ ಗೌಡ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.