ಹೊಸದಿಲ್ಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಮಿತ್ರ ಪಕ್ಷಗಳೊಂದಿಗೆ ಸೀಟು ಹಂಚಿಕೆ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ(ಅ19) ಬಿಡುಗಡೆ ಮಾಡಿದೆ. ಜಾರ್ಖಂಡ್ ಬಿಜೆಪಿ ಅಧ್ಯಕ್ಷ, ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಧನ್ವಾರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಜೆಎಂಎಂ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಿಎಂ ಚಂಪೈ ಸೊರೆನ್ ಸಾರಿಕೆಲ್ಲಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಒಟ್ಟು 81 ಸ್ಥಾನಗಳ ಪೈಕಿ ಎನ್ ಡಿಎ ಮೈತ್ರಿಕೂಟದಡಿ ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.ಈ ಪೈಕಿ 66 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಏಕಕಾಲದಲ್ಲಿ ಪ್ರಕಟಿಸಿದೆ.
ಮಿತ್ರ ಪಕ್ಷಗಳಾದ ಎಜೆಎಸ್‌ಯು 10 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಜೆಡಿಯು ಎರಡು ಸ್ಥಾನಗಳಲ್ಲಿ ಮತ್ತು ಎಲ್‌ಜೆಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ.
ಸೀತಾ ಸೊರೇನ್ ಗೆ ಟಿಕೆಟ್
ಪ್ರಮುಖ ಅಭ್ಯರ್ಥಿಗಳ ಪೈಕಿ ಸೀತಾ ಸೊರೆನ್ ಜಮ್ತಾರಾದಿಂದ ಕಣಕ್ಕಿಳಿಯಲಿದ್ದಾರೆ. ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರ ಅತ್ತಿಗೆ ಸೀತಾ ಸೊರೇನ್ ಅವರನ್ನು ಈ ವರ್ಷದ ಮೇ ತಿಂಗಳಲ್ಲಿ “ಪಕ್ಷ ವಿರೋಧಿ ಚಟುವಟಿಕೆ” ಗಾಗಿ ಜೆಎಂಎಂನಿಂದ ಉಚ್ಚಾಟಿಸಲಾಗಿತ್ತು. ಮೂರು ಬಾರಿ ಶಾಸಕಿಯಾಗಿರುವ ಸೀತಾ ಸೊರೇನ್ ಅವರು 2009 ರಲ್ಲಿ ಪತಿ ದುರ್ಗಾ ಸೊರೇನ್ ನಿಧನ ಹೊಂದಿದ್ದರು. ಜೆಎಂಎಂ ನಲ್ಲಿ ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯವನ್ನು ಉಲ್ಲೇಖಿಸಿದ್ದರು.
ನೀರಾ ಯಾದವ್ ಕೊಡರ್ಮಾದಿಂದ ಸ್ಪರ್ಧಿಸಲಿದ್ದಾರೆ. ಗಂಡೆಯಲ್ಲಿ ಮುನಿಯಾ ದೇವಿ ಅಭ್ಯರ್ಥಿಯಾಗಲಿದ್ದು, ಸಿಂದ್ರಿಯಲ್ಲಿ ತಾರಾದೇವಿ ಹಾಗೂ ನಿರ್ಸಾದಲ್ಲಿ ಅಪ್ನರ್ನಾ ಸೇನ್‌ಗುಪ್ತಾ ಕಣಕ್ಕಿಳಿಯಲಿದ್ದಾರೆ. ರಾಗಿಣಿ ಸಿಂಗ್ ಝರಿಯಾದಲ್ಲಿ, ಗೀತಾ ಬಲ್ಮುಚು ಚೈಬಾಸಾದಲ್ಲಿ ಮತ್ತು ಪುಷ್ಪಾ ದೇವಿ ಭೂಯಿಯಾನ್ ಛತ್ತರ್‌ಪುರದಿಂದ ಸ್ಪರ್ಧಿಸಲಿದ್ದಾರೆ.
ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದೆ.