Advertisement

ಔಟ್‌ಆಫ್ ಔಟ್‌! ತವರುಮನೆ ಉಡುಗೊರೆ

01:04 PM May 24, 2019 | keerthan |

ಹೇಳಿ ಕೇಳಿ ಇದು ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ. ಅಂದ ಮೇಲೆ ಕೇಳಬೇಕೇ? ಕಳೆದ ಬಾರಿಯಂತೆ ಈ ಬಾರಿಯೂ ಈ ರಾಜ್ಯ ಸಹಜವಾಗಿಯೇ ಪ್ರಾಮುಖ್ಯತೆ ಪಡೆದಿತ್ತು. ಜತೆಗೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರೇ ಗಾಂಧಿನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದರಿಂದ ಗಮ್ಮತ್ತು ಮತ್ತಷ್ಟು ಹೆಚ್ಚಾಗಿತ್ತು.

Advertisement

ಕಳೆದ ಬಾರಿ ಈ ಕ್ಷೇತ್ರದಿಂದ ಎಲ್‌.ಕೆ. ಆಡ್ವಾಣಿ ಗೆಲುವು ಪಡೆದಿದ್ದರು. ಅಲ್ಲದೆ, ಕಳೆದ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 26 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲುವಿನ ಪತಾಕೆ ಹಾರಿಸಿತ್ತು. ಈ ಬಾರಿಯೂ ಅದೇ ಸಾಧನೆಯನ್ನು ಕೇಸರಿ ಪಕ್ಷ ಪುನರಾವರ್ತಿಸಿದೆ.

ಬಿಜೆಪಿಯ ಈ ಮತ್ತೂಂದು ಮಹೋನ್ನತ ಸಾಧನೆಗೆ ಆ ರಾಜ್ಯದಲ್ಲಿ ಕಳೆದೆರಡು ದಶಕಗಳಿಂದ ಹರಡಿರುವ ಮೋದಿ ಅಲೆಯೇ ಕಾರಣ. ಜತೆಗೆ, ಅಲ್ಲಿ ಆಡಳಿತಾರೂಢ ವಿಜಯ್‌ ರುಪಾನಿ (ಬಿಜೆಪಿ) ಸರ್ಕಾರವೂ, ಮೋದಿಯವರು ಮುಖ್ಯಮಂತ್ರಿ­ಯಾಗಿದ್ದಾಗ ಕಟ್ಟಿಕೊಟ್ಟಿದ್ದ ಬಿಜೆಪಿ ವರ್ಚಸ್ಸನ್ನು ಕಾಯ್ದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ.  ಇಲ್ಲಿ ಉಲ್ಲೇಖೀಸಲೇಬೇಕಾದ ಪ್ರಮುಖವಾದ ವಿಚಾರವೆಂದರೆ, ಜಿಎಸ್‌ಟಿ ಹಾಗೂ ನೋಟು ಅಮಾನ್ಯಗಳಂಥ ನಿರ್ಧಾರಗಳು ಗುಜರಾತ್‌ನ ವ್ಯಾಪಾರಿ ವಲಯದ ಅವಕೃಪೆಗೆ ಪಾತ್ರವಾಗಿಲ್ಲ ಎನ್ನುವುದು.

ಚುನಾವಣೆಗೂ ಪೂರ್ವದಲ್ಲಿ, ವಜ್ರ ವ್ಯಾಪಾರಿಗಳ ತವರೆನಿಸಿರುವ ಸೂರತ್‌ ಹಾಗೂ ಇನ್ನಿತರ ವ್ಯಾಪಾರಿ ವಲಯಗಳು ಮೋದಿ ಸರ್ಕಾರದ ಮೇಲೆ ಜಿಎಸ್‌ಟಿ, ನೋಟು ಅಮಾನ್ಯ ಕಾರಣಕ್ಕಾಗಿ ಮುನಿಸಿಕೊಂಡಿವೆ ಎಂದೂ, ಈ ಬಾರಿಯ ಚುನಾವಣೆಯಲ್ಲಿ ಅವು ಬಿಜೆಪಿ ಕೈಕೊಡುತ್ತವೆ ಎಂದೂ ವಿಶ್ಲೇಷಿಸಲಾಗಿತ್ತು. ಆದರೆ, ಅದು ನಿಜವಾಗಿಲ್ಲ.

ಮಹಿಳಾ ಕೃಪೆ!
ಗುಜರಾತ್‌ ಗಣನೀಯ ಸಂಖ್ಯೆಯ ಮಹಿಳಾ ಮತದಾರರನ್ನು ಹೊಂದಿದೆ. ಒಟ್ಟು 4.47 ಕೋಟಿ ಮತದಾರರಿರುವ ಆ ರಾಜ್ಯದಲ್ಲಿ 2.32 ಕೋಟಿಯಷ್ಟು ಪುರುಷ ಮತದಾರರಿದ್ದರೆ, 2.14 ಕೋಟಿಯಷ್ಟು ಮಹಿಳಾ ಮತದಾರರಿದ್ದಾರೆ. ಅಂದರೆ, ಅವರ ಪ್ರಮಾಣ ಶೇ. 47.87ರಷ್ಟು ! ಹಾಗಾಗಿ, ಗುಜರಾತ್‌ ಸಂಸದರ ಆಯ್ಕೆಯಲ್ಲಿ ಈ ಬಾರಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿದ್ದು, ಅವರ ಕೃಪೆಯೂ ಬಿಜೆಪಿಗೆ ಸಿಕ್ಕಿದೆ ಎನ್ನಲಾಗಿದೆ.

Advertisement

ಮೊದಲ “ಲೋಕ’ ಪ್ರವೇಶ
ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿಯವರ ಭದ್ರಕೋಟೆಯಾಗಿದ್ದ ಗಾಂಧಿನಗರ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುವ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿದಿದ್ದರು. ನಿರೀಕ್ಷೆಯಂತೆ ಅಲ್ಲಿ ಅವರು ಜಯ ಸಾಧಿಸಿದ್ದಾರೆ. ಆ ಮೂಲಕ, ಅವರು ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಲೋಕಸಭೆಗೆ ಪದಾರ್ಪಣೆ ಮಾಡಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯ ಚುನಾವಣೆಯಲ್ಲೂ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ನೀಡಿದ ಗುಜರಾತ್‌ ಜನತೆಗೆ ಅನಂತ ಧನ್ಯವಾದ.
ವಿಜಯ್‌ ರುಪಾನಿ, ಗುಜರಾತ್‌ ಸಿಎಂ

ಗುಜರಾತ್‌ನಲ್ಲಿ ನಮ್ಮ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಸರ್ಕಾರದ ವೈಫ‌ಲ್ಯಗಳ ವಿರುದ್ಧ ಸದನದಲ್ಲಿ ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆ.
ಅಮಿತ್‌ ಚಾವ್ಲಾ, ಗುಜರಾತ್‌ ಕಾಂ.ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next