ಯಾದಗಿರಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಸಾಕಷ್ಟು ಆಕಾಂಕ್ಷಿಗಳಿರುವುದು ಸಹಜ. ಕಾರ್ಯಕರ್ತರು ಟಿಕೆಟ್ ಸಿಗದಿದ್ದಕ್ಕೆ ಹತಾಶರಾಗದೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.
ನಗರದ ಎನ್.ವಿ.ಎಂ. ಸಭಾಂಗಣದಲ್ಲಿ ಜರುಗಿದ ಯಾದಗಿರಿ ನಗರಸಭೆ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ನಾವು ಗೆದ್ದಂತೆ ಎಂದು ತಿಳಿದು ಚುನಾವಣೆ ಯುದ್ಧಕ್ಕೆ ಸನ್ನದ್ಧರಾಗಬೇಕೆಂದು ಹುರಿದುಂಬಿಸಿದರು.
ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ನಮ್ಮನ್ನು ಸೋಲಿಸಲು ಅನ್ಯ ಪಕ್ಷಗಳಿಂದ ಸಾಧ್ಯವಿಲ್ಲ. ಆದರೆ ನಮ್ಮಲ್ಲಿರುವ ಅಸಮಾಧಾನಿತರೇ ಪಕ್ಷದ ಸೋಲಿಗೆ ಕಾರಣರಾಗುವ ಸಾಧ್ಯತೆ ಇದೆ. ಆದ್ದರಿಂದ ಯಾರೂ ಕೂಡ ಪಕ್ಷದ ನಿಲುವಿಗೆ ವಿರೋಧ ತೋರಬಾರದು ಎಂದು ಕರೆ ನೀಡಿದರು.
ನಗರಸಭೆ ಚುನಾವಣಾ ಉಸ್ತುವಾರಿ ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ನಗರದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿದ್ದು, ಯಾರಿಗೆ ಟಿಕೆಟ್ ಸಿಕ್ಕರೂ ಒಮ್ಮತದಿಂದ ಕೆಲಸ ಮಾಡುವ ಮನೋಭಾವ ಹೊಂದಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರು ಮಾತನಾಡಿ, ಒಟ್ಟು 31 ವಾರ್ಡ್‌ಗಳ ಪೈಕಿ ಕನಿಷ್ಟ 25ಕ್ಕೂ ಮಿಕ್ಕಿ ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಲಿದೆ. ಎಲ್ಲ ರೀತಿಯಿಂದಲೂ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ನಗರಸಭೆ ಆಡಳಿತ ಬಿಜೆಪಿ ಕೈವಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಡಾ| ಶರಣಭೂಪಾಲರೆಡ್ಡಿ ನಾಯ್ಕಲ್, ಭಾರತ ಆಹಾರ ನಿಗಮದ ಸದಸ್ಯ ಖಂಡಪ್ಪ ದಾಸನ್, ದೇವಿಂದ್ರನಾಥನಾದ ಮಾತನಾಡಿದರು. ಸಭೆಯಲ್ಲಿ 31 ವಾರ್ಡಿನ ಆಕಾಂಕ್ಷಿಗಳು, ನಗರಾಧ್ಯಕ್ಷ ಹಣಮಂತ ಇಟಗಿ, ಶರಣಗೌಡ ಬಾಡಿಯಾಳ, ಎಸ್.ಪಿ. ನಾಡೇಕರ್, ಶಿವುಕುಮಾರ ದೊಡ್ಡಮನಿ, ರವಿ ಬಾಪುರೆ, ನಾಜಿಮ್ ಅಹಮ್ಮದ್, ವೆಂಕಟರೆಡ್ಡಿ ಅಬ್ಬೆತುಮಕೂರು, ರಮೇಶ ದೊಡ್ಡಮನಿ, ಪರಶುರಾಮ ಕುರಕುಂದಿ, ಸುರೇಶ
ಆಕಳ ಸೇರಿದಂತೆ ಇನ್ನಿತರರು ಇದ್ದರು. ಮಾರುತಿ ಕಲಾಲ್ ನಿರೂಪಿಸಿ, ವಂದಿಸಿದರು.