Advertisement
ಲೋಕಸಭೆಯಲ್ಲಿ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಮಸೂದೆಯ ಕುರಿತು ಚರ್ಚೆಯ ವೇಳೆ ಸಂಸದ ಸೆಂಥಿಲ್ ಕುಮಾರ್ ಅವರು, “ದೇಶದ ಜನರು ಒಂದನ್ನು ಅರ್ಥಮಾಡಿಕೊಳ್ಳಬೇಕು. ಅದೇನೆಂದರೆ, ಬಿಜೆಪಿ ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸುತ್ತಿದೆ. ಆ ರಾಜ್ಯಗಳನ್ನು ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳೆಂದು ಕರೆಯುತ್ತೇವೆ. ಬಿಜೆಪಿ ಅಲ್ಲಿ ಮಾತ್ರ ಗೆಲ್ಲಲು ಸಾಧ್ಯವೇ ಹೊರತು ದಕ್ಷಿಣ ಭಾರತದಲ್ಲಿ ಅಲ್ಲ’ ಎಂದಿದ್ದಾರೆ. ಇತ್ತೀಚೆಗೆ ಮುಗಿದ ಪಂಚರಾಜ್ಯ ಚುನಾವಣೆಯನ್ನು ಕೆಲವರು “ಉತ್ತರ-ದಕ್ಷಿಣ ವಿಭಜನೆ’ ಎಂಬರ್ಥದಲ್ಲಿ ವರ್ಣಿಸಿದ ಬಗ್ಗೆ ಪ್ರಸ್ತಾವಿ ಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
Related Articles
Advertisement
ಜಮ್ಮು ಮತ್ತು ಕಾಶ್ಮೀರ ಮಸೂದೆಯ ಕುರಿತು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಒಂದು ದೇಶವು ಎರಡು ಪ್ರಧಾನಿಗಳು, ಎರಡು ಸಂವಿಧಾನಗಳು ಮತ್ತು ಎರಡು ಧ್ವಜಗಳನ್ನು ಹೊಂದಿರಲು ಹೇಗೆ ಸಾಧ್ಯ? ಇದನ್ನು ಯಾರು ಮಾಡಿದರೋ, ಅವರು ಮಾಡಿದ್ದು ತಪ್ಪು. ಅದನ್ನು ಪ್ರಧಾನಿ ಮೋದಿಯವರು ಸರಿಪಡಿಸಿದ್ದಾರೆ. ನಾವು 1950ರಿಂದಲೂ, ದೇಶದಲ್ಲಿ “ಏಕ್ ಪ್ರಧಾನ್, ಏಕ್ ನಿಶಾನ್, ಏಕ್ ವಿಧಾನ್’ (ಒಂದು ಪ್ರಧಾನಿ, ಒಂದು ಧ್ವಜ, ಒಂದು ಸಂವಿಧಾನ) ಇರಬೇಕೆಂದು ಹೇಳಿಕೊಂಡು ಬಂದಿದ್ದೇವೆ. ಅದನ್ನೇ ಮಾಡಿದ್ದೇವೆ ಕೂಡ’ ಎಂದಿದ್ದಾರೆ.
ಸನಾತನ ಧರ್ಮ: ಎಫ್ಐಆರ್‌ಗೆ ಆಗ್ರಹ
ತಮಿಳುನಾಡು ಸಚಿವರು ಸನಾತನ ಧರ್ಮ ಮತ್ತು ಹಿಂದೂ ಧರ್ಮದ ವಿರುದ್ಧ ದ್ವೇಷ ಭಾಷಣವನ್ನು ಮಾಡಿದ್ದು, ಅವರ ವಿರುದ್ಧ ಸರಕಾರವು ಎಫ್ಐಆರ್ ದಾಖಲಿಸಬೇಕು ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಜಿವಿಎಲ್ ನರಸಿಂಹ ರಾವ್ ಆಗ್ರಹಿಸಿದ್ದಾರೆ. ರಾಜ್ಯಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಪ್ರತಿ ಧರ್ಮ, ಪ್ರತೀ ವ್ಯಕ್ತಿ ಮತ್ತು ಪ್ರತಿಯೊಂದು ವರ್ಗಕ್ಕೂ ತಮ್ಮದೇ ಆದ ಧರ್ಮವನ್ನು ಅನುಸರಿಸುವ ಅಧಿಕಾರವನ್ನು ಸಂವಿಧಾನ ನೀಡಿದೆ. ಆದರೆ ತ.ನಾಡಿನ ಸಚಿವರೊಬ್ಬರು ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂಗೆ ಹೋಲಿಸಿದ್ದಾರೆ. ಮತ್ತೂಬ್ಬರು, ವಿಪಕ್ಷಗಳ ಮೈತ್ರಿಕೂಟ ರಚನೆಯ ಉದ್ದೇಶವೇ ಸನಾತನ ಧರ್ಮದ ನಿರ್ಮೂಲನೆ ಎಂದು ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರ ಪುತ್ರ, ಕರ್ನಾಟಕದ ಸಚಿವರೊಬ್ಬರು ಈ ಹೇಳಿಕೆಗಳನ್ನು ಬೆಂಬಲಿಸಿ ಮಾತನಾಡಿದ್ದಾರೆ. ಇವೆಲ್ಲವೂ ದ್ವೇಷ ಭಾಷಣಕ್ಕೆ ಸಮ. ಹೀಗಾಗಿ ತಮಿಳುನಾಡು ಸರಕಾರವು ತನ್ನ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ಸದನದೊಳಕ್ಕೆ ಫಲಕ ತಂದರೆ ಕಠಿನ ಕ್ರಮ
ಸಂಸತ್ ಕಲಾಪ ನಡೆಯುವ ವೇಳೆ ಪ್ರತಿಭಟನಾರ್ಥವಾಗಿ ಫಲಕಗಳನ್ನು, ಭಿತ್ತಿಪತ್ರಗಳನ್ನು ಸದನದೊಳಕ್ಕೆ ತರುವ ಸಂಸದರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದ್ದಾರೆ. ಸದನದಲ್ಲಿ ಎಲ್ಲರೂ ಶಿಸ್ತು ಹಾಗೂ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ರಮೇಶ್ ಬಿಧೂರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಫಲಕವೊಂದನ್ನು ಬಿಎಸ್‌ಪಿ ಸದಸ್ಯ ಡ್ಯಾನಿಶ್ ಅಲಿ ಸೋಮವಾರ ಕುತ್ತಿಗೆಗೆ ನೇತುಹಾಕಿ ಕೊಂಡು ಸದನಕ್ಕೆ ಬಂದ ಬೆನ್ನಲ್ಲೇ ಸ್ಪೀಕರ್ ಬಿರ್ಲಾರಿಂದ ಈ ಖಡಕ್ ಸೂಚನೆ ರವಾನೆಯಾಗಿದೆ. “ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ, ಹೊಸ ಸಂಸತ್ ಭವನದೊಳಕ್ಕೆ ಸಂಸದರು ಪ್ಲೆಕಾರ್ಡ್‌ಗಳನ್ನು ತರುವಂತಿಲ್ಲ ಎಂದು ಎಲ್ಲ ರಾಜಕೀಯ ಪಕ್ಷಗಳು ಒಮ್ಮತದ ತೀರ್ಮಾನಕ್ಕೆ ಬಂದಿವೆ. ಸಂಸತ್‌ನಲ್ಲಿ ಎಲ್ಲರೂ ಶಿಸ್ತು, ಘನತೆ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಫಲಕಗಳನ್ನು ತರುವ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕಾದೀತು’ ಎಂದು ಸ್ಪೀಕರ್ ಹೇಳಿದ್ದಾರೆ.