Advertisement

150ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು: ನಳಿನ್‌ ಕುಮಾರ್‌

06:15 PM Jan 02, 2023 | Team Udayavani |

ಮಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿ ಬೆಳೆದಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾ ಮಟ್ಟದ ಬೂತ್‌ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೂತ್‌ ಗೆದ್ದು, ದೇಶವನ್ನು ಗೆದ್ದಾಗ ಅದು ಬಿಜೆಪಿ ಗೆಲುವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ಅಧಿಕಾರ ರಾಜಕಾರಣ ನಮ್ಮದಲ್ಲ. ನಮ್ಮ ಗುರಿ ಶಾಶ್ವತ ಗೆಲುವು. ಈ ನಿಟ್ಟಿನಲ್ಲಿ ಬೂತ್‌ ವಿಜಯ ಅಭಿಯಾನದ ಸಂದರ್ಭ ಬೂತ್‌ ಕಮಿಟಿ ಹಾಗೂ ಪೇಜ್‌ ಪ್ರಮುಖರನ್ನು ಸರಿಪಡಿಸುವುದು, ಮನೆಗಳಲ್ಲಿ ಪಕ್ಷದ ಧ್ವಜ ಹಾರಿಸುವ ಕೆಲಸವನ್ನು ಮಾಡಬೇಕಿದೆ ಎಂದವರು ಹೇಳಿದರು.

ಜ.21-29: ವಿಜಯ ಸಂಕಲ್ಪ ಅಭಿಯಾನ
ಬೂತ್‌ ವಿಜಯ ಅಭಿಯಾನದ ಬಳಿಕ ವಿಜಯ ಸಂಕಲ್ಪ ಅಭಿಯಾನ ಜ. 21ರಿಂದ 29ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮನೆಗಳ ಸಂಪರ್ಕ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ತಿಳಿಸಬೇಕು. ನಮ್ಮ ಮನೆ ಬಿಜೆಪಿ ಮನೆ ಎಂಬ ಸ್ಟಿಕರ್‌ ಅಳವಡಿಸಬೇಕು. ಪ್ರತಿ ಬೂತ್‌ನಲ್ಲೂ ಗೋಡೆ ಬರಹ, ಸದಸ್ಯತ್ವ ಅಭಿಯಾನ, ಫ‌ಲಾನುಭವಿಗಳ ಸಂಪರ್ಕ ಮಾಡುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌ ಸ್ವಾಗತಿಸಿ, ಮಾತನಾಡಿ, ಗ್ರಾ.ಪಂ.ನಿಂದ ಲೋಕಸಭೆಯವರೆಗಿನ ಚುನಾವಣೆಯಲ್ಲಿ ಪಕ್ಷದ ಬೂತ್‌ ಕಾರ್ಯಕರ್ತರ ಕೊಡುಗೆ ಮಹತ್ತರ ಎಂದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಪಕ್ಷದ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಸಹ ಪ್ರಭಾರಿ ರಾಜೇಶ್‌ ಕಾವೇರಿ ಉಪಸ್ಥಿತರಿದ್ದರು. ರಾಮ್‌ದಾಸ್‌ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

ಚುನಾವಣೆಗೆ ಮೊದಲು ಸಿದ್ದು ಜೈಲಿಗೆ !
40 ಪರ್ಸೆಂಟ್‌ ಸರಕಾರ ಎಂದು ಹೇಳಿದ ಕಾಂಗ್ರೆಸ್‌ನ ಡಿಕೆಶಿ ಅಥವಾ ಸಿದ್ದರಾಮಯ್ಯನವರು ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಗಲಾಟೆ ಮಾಡಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಿಲ್ಲ. ಈಗಾಗಲೇ ಕೆಂಪಣ್ಣ ರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂದಿನ ಚುನಾವಣೆಗೆ ಮೊದಲು ಸಿದ್ದರಾಮಯ್ಯ ಜೈಲಿನಲ್ಲಿರುತ್ತಾರೆ, ನೋಡುತ್ತಿರಿ ಎಂದು ನಳಿನ್‌ ಹೇಳಿದರು.

ದ.ಕ.: 8 ಸ್ಥಾನ ಬಿಜೆಪಿಗೆ
ದ.ಕ. ಜಿಲ್ಲೆಯಲ್ಲೂ ಬಿಜೆಪಿ 8 ಸ್ಥಾನಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್‌ನ ಹಾಲಿ ಶಾಸಕ ಯು.ಟಿ. ಖಾದರ್‌ ಅವರನ್ನು ಮನೆಗೆ ಕಳುಹಿಸುವುದಾಗಿ ಸಂಸದ ನಳಿನ್‌ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಒಡೆದ ಮನೆಯಾಗಿದ್ದು, ಮುಖ್ಯಮಂತ್ರಿಯಾಗುವ ಕನಸಿನಲ್ಲಿ ಸಿದ್ದರಾಮಯ್ಯ, ಡಿಕೆಶಿ, ಖರ್ಗೆಯವರು ಶರ್ಟ್‌ ಹೊಲಿಸಿದ್ದರೆ, ದ.ಕ. ಜಿಲ್ಲೆಯಲ್ಲಿ ಮಂತ್ರಿಯಾಗಲು ಯು.ಟಿ. ಖಾದರ್‌, ರಮಾನಾಥ ರೈ, ಜೆ.ಆರ್‌. ಲೋಬೋ ಕೂಡ ಶರ್ಟ್‌ ಹೊಲಿಸಿದ್ದಾರೆ ಎಂದು ಲೇವಡಿ ಮಾಡಿದ ನಳಿನ್‌, ದ.ಕ. ಜಿಲ್ಲೆಯಲ್ಲಿ ಮುಂದಿನ 15 ವರ್ಷ ಬಿಜೆಪಿ ಆಡಳಿತ ನಡೆಸಲಿದ್ದು, ಸಂಘಟನಾತ್ಮಕವಾಗಿ ಪಕ್ಷ ಗಟ್ಟಿಯಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next