ರಾಯಬಾಗ: ರಾಜ್ಯದಲ್ಲಿ 4 ಸ್ಥಾನಗಳಿಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಧಾರವಾಡ ಮತ್ತು ಮೈಸೂರು ಕ್ಷೇತ್ರಗಳು ಸೇರಿ ಎಲ್ಲ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಭರವಸೆ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ಪಟ್ಟಣದ ಮಹಾವೀರ ಭವನದಲ್ಲಿ ವಿಧಾನ ಪರಿಷತ್ ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಈ ಚುನಾವಣೆಗಳನ್ನು ಹಗುರವಾಗಿ ತಿಳಿದುಕೊಳ್ಳದೇ ಸವಾಲಾಗಿ ಸ್ವೀಕರಿಸಬೇಕು. ಈ ಚುನಾವಣೆಯ ನಂತರ ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಮತ್ತು ರಾಜ್ಯದ ಮುಖ್ಯಮಂತ್ರಿಯವರ ಸಾಧನೆಗಳನ್ನು ಮತದಾರರ ಮನೆಗೆ ತೆರಳಿ ವಿವರಿಸಬೇಕು. ಅಲ್ಲದೇ ಶಾಸಕರನ್ನೊಳಗೊಂಡು ಕಾರ್ಯಕರ್ತರೆಲ್ಲರೂ ಪೂರ್ಣ ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಮನವಿ ಮಾಡಿಕೊಂಡರು.
ಪದವೀಧರ ಕ್ಷೇತ್ರದ ಮತದಾರರು ಬಿಜೆಪಿ ಪರವಾಗಿದ್ದಾರೆ. ಅವರನ್ನು ಭೇಟಿಯಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳಲು ತಿಳಿಸಿದರು.
ಶಾಸಕ ಡಿ.ಎಂ. ಐಹೊಳೆಯವರ ಪ್ರಯತ್ನ ಹಾಗೂ ಸಾಧನೆಯಿಂದ ಬಿಜೆಪಿಗೆ ಹೆಚ್ಚು ಮತಗಳು ಬರುವದು ಖಂಡಿತ ಎಂದು ಶಾಸಕರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಸಕ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಮ್.ಐಹೊಳೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಎಮ್ ಎಲ್‌ಸಿ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ಅಮರಸಿಂಹ ಪಾಟೀಲ, ನಾರಾಯಣ ಸ್ವಾಮಿ ಮಾತನಾಡಿ ಮತ ಯಾಚಿಸಿದರು. ಡಾ.ರಾಜೇಂದ್ರ ನೇರ್ಲೆ, ದುಂಡಪ್ಪ ಭೆಂಡವಾಡೆ, ಎಲ್.ಬಿ.ಚೌಗಲಾ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೆಮಲಾಪುರೆ, ಅರುಣ ಐಹೊಳೆ, ಮಹೇಶ ಕರಮಡಿ, ವಸಂತ ಪೂಜಾರಿ, ಮಹೇಶ ಬಾತೆ, ಸದಾಶಿವ ಹಳಿಂಗಳಿ, ಬಸವರಾಜ ಡೊನವಾಡೆ ಹಾಗೂ ಕಾರ್ಯಕರ್ತರು ಇದ್ದರು.