Advertisement

ಇಂದು ರಾಜ್ಯವ್ಯಾಪಿ ಬಿ.ಜೆ.ಪಿ. ಪ್ರೊಟೆಸ್ಟ್ ; ರಾಜ್ಯಪಾಲರಿಗೆ ದೂರು

03:09 AM Feb 14, 2019 | Karthik A |

ಬೆಂಗಳೂರು: ‘ಆಡಿಯೋ ಟೇಪ್’ ಪ್ರಕರಣವು ಇದೀಗ ನಾನಾ ರೂಪವನ್ನು ಪಡೆದುಕೊಳ್ಳುತ್ತಿದೆ. ಬುಧವಾರದವರೆಗೆ ಈ ಪ್ರಕರಣದಿಂದ ಹೇಗೆ ಬಚಾವ್ ಆಗುವುದು ಎಂದು ತಲೆಕೆಡಿಸಿಕೊಂಡಿದ್ದ ಕೇಸರಿ ಪಡೆಯ ನಾಯಕರಿಗೆ ಮಧ್ಯಾಹ್ನದ ಹೊತ್ತಿಗೆ ಈ ವಿಷಯವನ್ನು ‘ಡೈವರ್ಟ್’ ಮಾಡಲು ಬಲವಾದ ವಿಷಯವೊಂದು ಸಿಕ್ಕಿಯೇಬಿಟ್ಟಿತು, ಅದೇ ಹಾಸನ ಕ್ಷೇತ್ರದ ಬಿ.ಜೆ.ಪಿ. ಶಾಸಕ ಪ್ರೀತಂ ಗೌಡ ಅವರ ನಿವಾಸದ ಮೇಲೆ ಜೆ.ಡಿ. (ಎಸ್) ಪಕ್ಷದ ಕಾರ್ಯಕರ್ತರು ದಾಂಧಲೆ ನಡೆಸಿದ ಪ್ರಕರಣ.

Advertisement

ಆಡಿಯೋ ಕ್ಲಿಪ್ ನಲ್ಲಿ ಶಾಸಕ ಪ್ರೀತಂ ಗೌಡ ಅವರ ಧ್ವನಿಯಿದೆ ಮತ್ತು ಆ ಧ್ವನಿ ಮಾಜೀ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುರಿತು ಲಘುವಾಗಿ ಮಾತನಾಡಿದ್ದಾರೆ ಎಂಬ ವಿಷಯ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಜೆ.ಡಿ.(ಎಸ್) ಪಕ್ಷದ ಕಾರ್ಯಕರ್ತರು ಸಹಜವಾಗಿಯೇ ಕೆರಳಿದರು. ಮತ್ತು ಹಾಸನದಲ್ಲಿ ಇರುವ ಪ್ರೀತಂ ಗೌಡ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರಲ್ಲಿ ಯಾರೋ ಒಬ್ಬರು ಎಸೆದ ಕಲ್ಲೊಂದು ಮನೆಯ ಮುಂದೆ ನಿಂತಿದ್ದ ಬಿ.ಜೆ.ಪಿ.ಕಾರ್ಯಕರ್ತರ ಹಣೆಗೆ ಬಡಿದು ಅವರು ಗಾಯಗೊಂಡರು.

ಇಲ್ಲಿಂದ ಬಳಿಕ ರಾಜಕೀಯ ಚಿತ್ರಣವೇ ಬದಲಾಯಿತು. ಬಿ.ಜೆ.ಪಿ ನಾಯಕರು ಇದನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು ದೋಸ್ತಿ ಸರಕಾರದ ವಿರುದ್ಧ ಮುಗಿಬಿದ್ದರು. ಸದನದಲ್ಲೂ ಪ್ರತಿಭಟನೆ ನಡೆಸಿದರು. ಈಗ, ಈ ದಾಂಧಲೆ ಪ್ರಕರಣವನ್ನು ಖಂಡಿಸಿ ಗುರುವಾರದಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಸಭೆಗಳನ್ನು ನಡೆಸಲು ಬಿ.ಜೆ.ಪಿ. ನಿರ್ಧರಿಸಿದೆ. ಮಾತ್ರವಲ್ಲದೇ ಇಂದು ಬೆಳಿಗ್ಗೆ 10 ಗಂಟೆಗೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರೊಂದನ್ನು ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಾರೆಯಾಗಿ ‘ಆಡಿಯೋ ಪಕ್ರರಣದಿಂದಾಗಿ ಕಳೆದ ಕೆಲವು ದಿನಗಳಲ್ಲಿ ಸದನದಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಮುಜುಗರಕ್ಕೆ ಸಿಲುಕಿದ್ದ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರಿಗೆ, ತಮ್ಮ ಪಕ್ಷದ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರ ನಿವಾಸದ ಮೇಲೆ ದಾಂಧಲೆ ನಡೆಸಿದ ಪ್ರಕರಣವು ‘ದೋಸ್ತಿ’ ಸರಕಾರದ ವಿರುದ್ಧ ಹೋರಾಡಲು ಹೊಸ ಅಸ್ತ್ರವಾಗಿ ಪರಿಣಮಿಸಿರುವುದು ಮಾತ್ರ ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next