ಪಾಟ್ನಾ: ಇತ್ತೀಚೆಗಷ್ಟೇ ಬಿಜೆಪಿ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇದೀಗ ಕಮಲ ಪಕ್ಷದ ವಿರುದ್ಧ ಸಮರ ಸಾರಿದ್ದಾರೆ. ಶನಿವಾರ ಜೆಡಿಯು ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಒಂದಾದರೆ 2024ರಲ್ಲಿ ಬಿಜೆಪಿಯನ್ನು 50 ಸೀಟುಗಳಿಗೆ ಇಳಿಸಬಹುದು ಎಂದು ಗುಡುಗಿದ್ದಾರೆ.
“ಒಂದು ವೇಳೆ ಎಲ್ಲಾ ವಿರೋಧ ಪಕ್ಷಗಳು ಒಂದಾಗಿ ಸ್ಪರ್ಧೆ ಮಾಡಿದರೆ, ಬಿಜೆಪಿ ಕೇವಲ 50 ಸ್ಥಾನಗಳಿಗೆ ಇಳಿಯಲಿದೆ. ನಾನು ಆ ಅಭಿಯಾನದ ಕಡೆ ಸಾಗುತ್ತಿದ್ದೇನೆ” ಎಂದು ನಿತೀಶ್ ಕುಮಾರ್ ಶನಿವಾರ ನಡೆದ ಜೆಡಿಯು ರಾಷ್ಟ್ರೀಯ ಸಭೆಯಲ್ಲಿ ಹೇಳಿದರು.
ಸೆಪ್ಟೆಂಬರ್ 5ರಂದು ನಿತೀಶ್ ಕುಮಾರ್ ಅವರು ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ದಿನಗಳ ಈ ಪ್ರವಾಸದಲ್ಲಿ ಅವರು ಹಲವು ರಾಜಕೀಯ ನಾಯಕರನ್ನು ಭೇಟಿಯಾಗಲಿದ್ದಾರೆ. ಈ ಪ್ರವಾಸದ ಮೂಲಕ ವಿಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಈ ಹೇಳಿಕೆ ಬಂದಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ಗ್ರಾಹಕರ ಡೇಟಾ ರಕ್ಷಿಸಲು ಆರ್‌ಬಿಐನಿಂದ ನೂತನ ಮಾರ್ಗಸೂಚಿ
ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಸುದ್ದಿಯನ್ನು ನಿತೀಶ್ ಮತ್ತೆ ನಿರಾಕರಿಸಿದ್ದು, ತನ್ನ ಎಕೈಕ ಗುರಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳನ್ನು ಒಟ್ಟು ಮಾಡುವುದು ಎಂದಿದ್ದಾರೆ.
ಇತ್ತೀಚಿಗಿನ ಬೆಳವಣಿಗೆಯಲ್ಲಿ ಮಣಿಪುರದಲ್ಲಿ ಐದು ಮಂದಿ ಜೆಡಿಯು ಶಾಸಕರು ಬಿಜೆಪಿ ಸೇರಿದ ಬಗ್ಗೆಯೂ ಪ್ರಸ್ತಾಪಿಸಿದ ನಿತೀಶ್, “ ಇದು ಸರಿಯೇ? ಇದು ಸಾಂವಿಧಾನಿಕವೇ? ಇದು ನಿಯಮಗಳ ಪ್ರಕಾರ ಇದೆಯೇ? ಇವರು (ಬಿಜೆಪಿ) ಎಲ್ಲಾ ಕಡೆ ಇದನ್ನೇ ಮಾಡುತ್ತಿದ್ದಾರೆ. ಹೀಗಾಗಿ ಒಂದು ಸದುದ್ದೇಶಕ್ಕಾಗಿ 2024ರಲ್ಲಿ ಎಲ್ಲಾ ಪಕ್ಷಗಳು ಒಂದಾಗಲೇಬೇಕು” ಎಂದು ಹೇಳಿದ್ದಾರೆ.