Advertisement
ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಪ್ರಸ್ತುತ ಏಳರಲ್ಲಿ ಬಿಜೆಪಿ ಶಾಸಕರಿದ್ದಾರೆ. ಮಂಗಳೂರು ಕ್ಷೇತ್ರ ಮಾತ್ರ ಕಾಂಗ್ರೆಸ್‌ನ ತೆಕ್ಕೆಯಲ್ಲಿದ್ದು ಇಲ್ಲಿ ವಿಧಾನಸಭೆ ವಿಪಕ್ಷದ ಉಪನಾಯಕ ಯು.ಟಿ. ಖಾದರ್ ಶಾಸಕರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಲವು ಕ್ಷೇತ್ರಗಳಲ್ಲಿ ಹೊಸಬರ ಪ್ರವೇಶಕ್ಕೆ ರಂಗ ಸಜ್ಜುಗೊಳಿಸಲಾಗುತ್ತಿದ್ದು, ಕ್ಷೇತ್ರಗಳಲ್ಲಿ ಅವರು ಈಗಾಗಲೇ ಸಕ್ರಿಯ ವಾಗಿದ್ದಾರೆ.
Related Articles
Advertisement
ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಜತೆಗೆ ಧನಂಜಯ ಅಡ³ಂಗಾಯ ಸೇರಿ ಕೆಲವು ಮಂದಿ ಆಕಾಂಕ್ಷಿಗಳಾಗಿದ್ದಾರೆ. ಬಂಟ್ವಾಳದಲ್ಲಿ ಮಾಜಿ ಸಚಿವ ಹಾಗೂ ಈ ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿರುವ ಬಿ. ರಮಾನಾಥ ರೈ ಹಾಗೂ ಮಂಗಳೂರು ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಿಂದ ಶಾಸಕರಾಗಿರುವ ಯು.ಟಿ. ಖಾದರ್ ಅಭ್ಯರ್ಥಿಗಳಾಗುವುದು ಖಚಿತ. ಮಂಗಳೂರು ದಕ್ಷಿಣದಲ್ಲಿ ಮಾಜಿ ಶಾಸಕ ಹಾಗೂ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಪ್ರಸ್ತುತ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಕೇಳಿಬರುತ್ತಿದೆ. ಆದರೆ ಆಸ್ಕರ್ ಫೆರ್ನಾಂಡಿಸ್ ಪ್ರತಿನಿಧಿಸುತ್ತಿದ್ದ ರಾಜ್ಯಸಭಾ ಸ್ಥಾನ ಜೂನ್‌ನಲ್ಲಿ ತೆರವಾಗಲಿದ್ದು, ಎಐಸಿಸಿ ಕಾರ್ಯದರ್ಶಿ ಐವನ್ ಡಿ’ಸೋಜಾ ಇದರ ಮೇಲೆ ಕಣ್ಣಿಟ್ಟಿದ್ದಾರೆ. ಒಂದೊಮ್ಮೆ ಇದು ದೊರೆಯದಿದ್ದರೆ ಆಗ ಅವರ ಹೆಸರು ಕೂಡ ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ.
ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿ ಸಾಧ್ಯತೆಪ್ರಸ್ತುತ ಜಿಲ್ಲೆಯ ರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ ಬಿಜೆಪಿಯಲ್ಲಿ ಹಾಲಿ ಇರುವ ಶಾಸಕರಿಗೆ ಟಿಕೆಟ್ ಖಾತ್ರಿಯ ಹಿನ್ನೆಲೆಯಲ್ಲಿ ಹೆಚ್ಚಿನ ಪೈಪೋಟಿ, ಗುದ್ದಾಟದ ಸಾಧ್ಯತೆಗಳು ಕಡಿಮೆ. ಆದರೆ ಕಾಂಗ್ರೆಸ್‌ನಲ್ಲಿ ಒಂದಷ್ಟು ಪೈಪೋಟಿ ನಡೆಯುವ ಲಕ್ಷಣಗಳು ಗೋಚರಿಸುತ್ತಿದ್ದು ಇದು ಆಂತರಿಕವಾಗಿ ಭಿನ್ನಮತಕ್ಕೂ ಕಾರಣವಾಗುವ ಸಾಧ್ಯತೆಗಳಿವೆ. ಪ್ರತಿಯೊಂದು ಕ್ಷೇತ್ರಕ್ಕೂ ಪಕ್ಷದಲ್ಲಿ ಹಲವು ಆಕಾಂಕ್ಷಿಗಳಿದ್ದು ಈಗಾಗಲೇ ತಮ್ಮ ಆಪ್ತ ನಾಯಕರ ಮೂಲಕ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಮಂಗಳೂರು ಮತ್ತು ಮಂಗಳೂರು ಉತ್ತರ ಕ್ಷೇತ್ರಗಳು ಮುಸ್ಲಿಂ ಸಮುದಾಯದ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರ ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪ್ರಾತಿನಿಧ್ಯ ನೀಡುತ್ತಾ ಬಂದಿರುವುದರಿಂದ ಈ ಬಾರಿ ಈ ಸಮುದಾಯದವರಿಗೆ ಇಲ್ಲಿ ಟಿಕೆಟ್ ಖಚಿತ. ಆದರೆ ಅಭ್ಯರ್ಥಿ ಯಾರೆಂಬುದು ನಿರ್ಧಾರವಾಗಿಲ್ಲ. ಉಳಿದ ಕೆಲವು ಪಕ್ಷಗಳ ಲೆಕ್ಕಾಚಾರ ಇನ್ನೂ ಆರಂಭವಾಗಬೇಕಿದೆ. -ಕೇಶವ ಕುಂದರ್