ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಲ್ಲಿ ಔತಣಕೂಟಕ್ಕೆ ಕರೆಯುತ್ತಾರೆ, ಅಲ್ಲಿ ದಾವಣಗೆರೆಯಲ್ಲಿ ತಮ್ಮ ಚೇಲಾಗಳನ್ನು ಬಿಟ್ಟು “ಯತ್ನಾಳ ಅವರನ್ನು ಹೊರಗೆ ಹಾಕಿ’ ಎಂದು ಸಭೆ ಮಾಡಿಸುತ್ತಾರೆ. ನಾನು ಮತ್ತು ರಮೇಶ್ ಜಾರಕಿಹೊಳಿ ಯಾವತ್ತೂ ಅವರ ಔತಣಕೂಟಕ್ಕೆ ಹೋಗುವುದಿಲ್ಲ. “ನಮ್ಮವರು, ನಮ್ಮವರು’ ಎಂದು ಹೇಳುತ್ತಲೇ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಗುಡುಗಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ದಾವಣಗೆರೆ ಸಭೆಯ ಮೇಲೆ ನಿರಂತರವಾಗಿ ನಿಯಂತ್ರಣ ಮಾಡುತ್ತಿದ್ದಾರೆ. ಗನ್‌ಮೆನ್‌ಗಳ ಮೂಲಕ ಮಾಹಿತಿ ಸಂಗ್ರಹಿಸುವುದಲ್ಲದೆ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿಸಲಿ ಎಂದು ಮಾಜಿ ಶಾಸಕರ ಮೂಲಕ ಒತ್ತಡ ಹಾಕುತ್ತಲೇ ಇದ್ದಾರೆ. ಮುಂದೆ ನಮಸ್ಕಾರ ಮಾಡುವವರು ಬಹಳ ಅಪಾಯಕಾರಿ ಎಂದರು.
ಯತ್ನಾಳ್ ವಿಪಕ್ಷ ನಾಯಕರಾಗಲು ಮತ್ತು ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷರಾಗಲು ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ 2 ದಿನದ ಅನಂತರ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದರು. ಈಗ ನನ್ನನ್ನು ಉಚ್ಚಾಟನೆ ಮಾಡಿಸಲು ಅಪ್ಪ ಮತ್ತು ಮಗ ಇದೇ ರೀತಿ ಕುತಂತ್ರ ನಡೆಸಿದ್ದಾರೆ ಎಂದರು.
ವಿಜಯೇಂದ್ರ ಅವರದ್ದು ನಾಟಕ ಕಂಪೆನಿ. ನಾವು 35 ವರ್ಷ ಪಕ್ಷ ಕಟ್ಟಿದ್ದೇವೆ. ಯಡಿಯೂರಪ್ಪ ಜತೆ ಓಡಾಡಿದ್ದೇವೆ. ಯಡಿಯೂರಪ್ಪ ಒಬ್ಬರೇ ಬಿಜೆಪಿ ಕಟ್ಟಿದ್ದಾರಾ? ನಾವೇ ಪೆಟ್ರೋಲ್ ಹಾಕಿ, ಬಸ್ ಟಿಕೆಟ್ ತೆಗೆಸಿ ಕಳುಹಿಸಿದ್ದೇವೆ. ನಮಗೆ ಯಡಿಯೂರಪ್ಪ ಸೈಕಲ್ ಹೊಡೆದು ಪಕ್ಷ ಕಟ್ಟಿದ್ದಾರೆ ಎಂದು ಅವರ ಶಿಷ್ಯರು ಹೇಳುತ್ತಾರೆ. ಈ ರೀತಿ ನಾಟಕ ಮಾಡುವುದು ನಮಗೂ ಗೊತ್ತು ಎಂದರು.
ಸ್ವತಃ ಯಡಿಯೂರಪ್ಪ ಅವರ ಮನೆಯಲ್ಲೇ ಭಿನ್ನಮತೀಯರ ಸಭೆ ನಡೆಯುತ್ತದೆ. ಅದರಲ್ಲಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ಪಾಲ್ಗೊಳ್ಳುತ್ತಾರೆ. ಹೀಗಿರುವಾಗ ಇಲ್ಲಿ ನಮ್ಮನ್ನು ಔತಣಕೂಟಕ್ಕೆ ಕರೆಯುವುದು, ಅಲ್ಲಿ ಬೆನ್ನಿಗೆ ಚೂರಿ ಹಾಕುವದು ಸರಿಯಲ್ಲ. ನಾವು ಉತ್ತರ ಕರ್ನಾಟಕದವರಿಗೆ ಇದು ಸರಿ ಬರುವುದೇ ಇಲ್ಲ. ನಮ್ಮದೇನಿದ್ದರೂ ಒಂದು ಹೊಡೆತ, ಎರಡು ತುಂಡು ಎಂದರು.