ಗುಳೇದಗುಡ್ಡ: ಕೇಂದ್ರ ಸರಕಾರವೇ ಅವರದ್ದು ಇದೆ, ಕೇಂದ್ರದಿಂದ ನೆರವು ಕೊಡಿಸುವ ಬದಲು ವಿನಾಕಾರಣ ಕಾಂಗ್ರೆಸ್ ಪಕ್ಷವನ್ನು ಬೈಯುತ್ತಾ ಅಲೆದಾಡುತ್ತಿದ್ದಾರೆ. ಜೋಡೆತ್ತುಗಳಲ್ಲ ಅವು ಕಳ್ಳೆತ್ತುಗಳು ಎಂದು ಜಿಲ್ಲಾಉಸ್ತುವಾರಿ ಸಚಿವಆರ್.ಬಿ.ತಿಮ್ಮಾಪುರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಕುರಿತು ಲೇವಡಿ ಮಾಡಿದರು.
ಗುಳೇದಗುಡ್ಡ ಸುತ್ತಲಿನ ಗ್ರಾಮಗಳಲ್ಲಿ ಬರ ಪರಿಶೀಲನೆ ನಡೆಸಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ದುರ್ಬಲ ಮಳೆಯಿಂದಾಗಿ ಬರ ಉಂಟಾಗಿದೆ. ಈ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕಿತ್ತು. ಆದರೆ ಆ ಕೆಲಸ ಮಾಡಿಲ್ಲ. ಬರ ವೀಕ್ಷಣೆ ಹೆಸರಿನಲ್ಲಿ ರಾಜ್ಯ ಸುತ್ತುವ ನಾಟಕ ಮಾಡುತ್ತಿದ್ದಾರೆ. ಅವರದು ಒಂದು ನಾಟಕ ಕಂಪನಿ ಇದ್ದ ಹಾಗೆ, ಜೋಡೆತ್ತುಗಳಿಗೆ ರಾಜ್ಯದ ಜನರ ಹಿತ ಕಾಯುವ ಉದ್ದೇಶವಿಲ್ಲ ಎಂದು ಹೇಳಿದರು.
ಬಿಜೆಪಿ ನಾಯಕರು ಕಾಂಗ್ರೇಸ್ ಸೇರ್ಪಡೆಯಾಗುವರೆ ಎಂಬ ಪ್ರಶ್ನೆಗೆ ಉತ್ತರಿಸಿ, ”ಲೋಕಸಭಾ ಚುನವಣೆ ಘೋಷಣೆಯಾಗಲಿ ಕಾಯ್ದು ನೋಡಿ ಬಿಜೆಪಿಯಲ್ಲಿ ಮಾಜಿಗಳಷ್ಟೇ ಅಲ್ಲ ಹಾಲಿ ಶಾಸಕರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾಗ್ತಾರೆ. ಕಾಂಗ್ರೆಸ್ ಸೇರಲು ಬಿಜೆಪಿ ಶಾಸಕರು ತಯಾರಾಗಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಯಾದ ಮೇಲೆ ನೋಡಿ ಎಂದರು.
ಯತ್ನಾಳ್ ಏನು ಮಾತಾಡಿದರೂ ನೀವು ಕೇಳಿದ್ದೀರಿ.ಬಿಜೆಪಿ ಪಕ್ಷದಲ್ಲಿಯೇ ಹಲವಾರು ಭಿನ್ನಾಭಿಪ್ರಾಯಗಳಿವೆ ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಿ. ವಿ ಸೋಮಣ್ಣ ನನಗೆ ಆತ್ಮೀಯರು ಹಾಗೂ ಒಳ್ಳೆ ಗೆಳೆಯ. ಮೊನ್ನೆ ಮದುವೆಯೊಂದರಲ್ಲಿ ಭೇಟಿಯಾಗಿದ್ದೇವು ಎಂದು, ಪಕ್ಷ ಸೆರ್ಪಡೆಯಾಗುತ್ತಾರೋ ಎಂಬ ಗುಟ್ಟುಬಿಟ್ಟು ಕೊಡಲಿಲ್ಲ.
ಒಬ್ಬ ದೇಶದ ಪ್ರಧಾನಿಗೆ ತಾಯಿ ಕರುಳಳು ಇರಬೇಕು. ಆದರೆ ಮೋದಿಯವರಿಗೆ ಅದಿಲ್ಲ. ಚುನಾವಣೆಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯ ಬರದಿಂದ ತತ್ತರಿಸಿದೆ. ರಾಜ್ಯ ಸರಕಾರ ಬರ ಪರಿಹಾರ ಕೇಳಲು ಹೋದರೆ ಕೈಗೆ ಸಿಗಲಿಲ್ಲ. ರಾಜಕೀಯ ಮಾಡುತ್ತಾರೆ. ಒಬ್ಬ ಪ್ರಧಾನಿಯಾದವರು ಕಾರ್ಪೋರೇಶನ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ಇಂತಹ ಪ್ರಧಾನಿ ನಾನು ನೋಡಿಲ್ಲ. ನಮ್ಮ ಸರಕಾರ ಭಿಕ್ಷೆ ಕೇಳುತ್ತಿಲ್ಲ. ನಮಗೆ ಬರಬೇಕಾದ ಪರಿಹಾರ ಕೇಳುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ ಆದರೆ ಯಾವೊಬ್ಬ ಸಂಸದರು ಪ್ರಧಾನಿ ಬಳಿ ಹೋಗಿ ರಾಜ್ಯಕ್ಕೆ ಬರ ಸ್ಥಿತಿ ಎದುರಾಗಿದೆ ನಾವು ರಾಜ್ಯ ಸುತ್ತುತ್ತಿದ್ದೇವೆ. ರಾಜ್ಯಕ್ಕೆ ಬರ ಪರಿಹಾರ ಕೊಡಿ ಅಂತಾ ಕೇಳುತ್ತಿಲ್ಲ. ಪ್ರಧಾನಿ ಬಳಿ ಹೋಗಿ ಪರಿಹಾರ ಕೇಳುವ ಧೈರ್ಯ ರಾಜ್ಯ ಬಿಜೆಪಿ ಸಂಸದರಿಗಿಲ್ಲ ಎಂದು ಕಿಡಿ ಕಾರಿದರು.