Advertisement
ಕಳೆದ ಬಾರಿ ಗೆದ್ದ 25 ಸ್ಥಾನಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಳಿಸಿಕೊಳ್ಳಬೇಕೆಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಆದರೆ ಬಿಜೆಪಿಯ ಸಂಘಟನ ಬಲವೊಂದನ್ನೇ ಆಶ್ರಯಿಸಿಕೊಂಡು ಈ ಸಾಧನೆ ಕಷ್ಟ ಎಂಬುದು ಬಿಜೆಪಿ ವರಿಷ್ಠರಿಗೆ ಅರ್ಥವಾಗಿದೆ. ಹೀಗಾಗಿ “ಸಮೂಹ ನಾಯಕ’ನ ಹುಡುಕಾಟದಲ್ಲಿದ್ದ ಬಿಜೆಪಿಗೆ ಯಡಿಯೂರಪ್ಪ ನಾಯಕತ್ವದಲ್ಲಿ ಪಳಗಿದ, ಅವರ ಪ್ರಭಾವಲಯ ಹೊಂದಿರುವ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದೆ. ಮುಂದಿನ ಕೆಲವು ವರ್ಷಗಳವರೆಗೆ ನಾಯಕತ್ವದ ನಿರ್ವಾತ ಸೃಷ್ಟಿಯಾಗದಂತೆ ನಿರ್ವಹಿಸುವ ಲೆಕ್ಕಾಚಾರವೂ ಅಡಗಿದೆ.
ವಿಜಯೇಂದ್ರ ಅವರಿಗೆ ಪಕ್ಷ ಮುನ್ನಡೆಸುವುದು ಹೂವಿನ ಹಾದಿಯಲ್ಲ. ಪಕ್ಷದಲ್ಲಿ ಯುವ ತಲೆಮಾರಿನ ಜತೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಒಳಗೊಂಡಂತೆ ಹಿರಿ ತಲೆಗಳನ್ನು ಸಂಭಾಳಿಸಬೇಕಾದ ಸವಾಲಿದೆ. ಯತ್ನಾಳ್ ಅವರಂಥವರನ್ನೂ ಜತೆಗೆ ಕರೆದೊಯ್ಯಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನೇತೃತ್ವದ ಕಾಂಗ್ರೆಸ್‌ಗೆ ಎದೆಕೊಟ್ಟು ನಿಲ್ಲಬೇಕಿದೆ. ಇದಕ್ಕೆ ಸಂಘಟನೆಯ ಜತೆಗೆ ತನು-ಮನ-ಧನವೂ ವ್ಯಯಿಸಬೇಕಾದೀತು.
Related Articles
ಲೋಕಸಭಾ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಇದರಿಂದ ಒಕ್ಕಲಿಗ ಮತ್ತು ಲಿಂಗಾಯತ ಜಾತಿ ಸಮೀ ಕರಣದ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಕಾಂಗ್ರೆಸ್‌ನ ಅಹಿಂದ ಅಸ್ತ್ರಕ್ಕೆ ಇದು ಪ್ರತ್ಯಸ್ತ್ರವಾಗಬಹುದು ಎನ್ನುವುದು ಬಿಜೆಪಿ ನಿರೀಕ್ಷೆ.
Advertisement
ಜಾತಿಗಣತಿ ಸಹಿತ ಹಲವು ವಿಷಯಗಳಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಸರಕಾರದ ಬಗ್ಗೆ ಮುನಿಸಿಕೊಂಡಿದೆ. ಈ ಹಂತದಲ್ಲಿ ಅದೇ ಸಮು ದಾಯದ ವಿಜಯೇಂದ್ರ ಅವರಿಗೆ ಮಣೆ ಹಾಕಿದರೆ ಲೋಕಸಭಾ ಚುನಾ ವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡಬಹುದೆಂಬುದು ಬಿಜೆಪಿ ವರಿಷ್ಠರು ಲೆಕ್ಕ ಹಾಕಿದ್ದಾರೆ. ಜತೆಗೆ ಯಡಿಯೂರಪ್ಪ ಮುನಿಸನ್ನು ಈ ಮೂಲಕ ಕಡಿಮೆ ಮಾಡುವುದೂ ಬಿಜೆಪಿ ವರಿಷ್ಠರ ತಂತ್ರ.
ಇವೆಲ್ಲದರ ಮಧ್ಯೆ ವಿಜಯೇಂದ್ರ ನೇಮಕದ ಮೂಲಕ ಬಿಜೆಪಿ ವರಿಷ್ಠರು ಕೆಲವು ಟೀಕೆಗಳನ್ನೂ ಎದುರಿಸಬೇಕಾಗಿದೆ. ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ಹಿಂದಿನಿಂದಲೂ ಟೀಕಿಸುತ್ತಿದ್ದಾರೆ. ಆದರೆ ಈಗ ಅದೇ ವಿಷಯವನ್ನು ಕಾಂಗ್ರೆಸ್ ಸಹ ಟೀಕೆಗೆ ಬಳಸುವ ಸಾಧ್ಯತೆ ಇದೆ.
ಕೋರ್ ಕಮಿಟಿ ಬದಲಾವಣೆ ಇದರ ಜತೆಗೆ ಬಿಜೆಪಿ ಕೋರ್ ಕಮಿಟಿಯನ್ನು ಬದಲಾಯಿಸುವ ಸಾಧ್ಯತೆ ಹೆಚ್ಚಳವಾಗಿದೆ. ಕೋರ್ ಕಮಿಟಿಯಲ್ಲಿ ಬೆರಳೆಣಿಕೆಯಷ್ಟು ಹಿರಿಯರಿಗೆ ಅವಕಾಶ ನೀಡಿ, ಜಾತಿ ಸಮೀಕರಣದೊಂದಿಗೆ ಹೊಸಬರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.